ಗುರುವಾರ , ಆಗಸ್ಟ್ 18, 2022
26 °C

ಅತ್ಯಾಚಾರ: 20 ವರ್ಷ ಜೈಲು ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಹಠಸಂಭೋಗ ನಡೆಸಿದ ಆರೋಪಿಗೆ ಇಲ್ಲಿನ 3ನೇ ಹೆಚ್ಚುವರಿ ತ್ವರಿತ ವಿಚಾರಣೆಯ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಪ್ರಕರಣವನ್ನು ನ್ಯಾಯಾಧೀಶ ಇಷ್ರತ್ ಜಹಾನ್ ವಿಚಾರಣೆ ನಡೆಸಿ, ‘ಆರೋಪಿ ಬಾಬು ಅಲಿಯಾಸ್ ಚಿಟ್ಟಿಬಾಬು, ಅತ್ಯಾಚಾರ, ಅಪಹರಣ ಮತ್ತು ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ–2012ರ (ಪೋಕ್ಸೊ) ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತಿದೆ’ ಎಂದು ಆದೇಶಿಸಿದರು.

ಅತ್ಯಾಚಾರ ಪ್ರಕರಣಕ್ಕೆ 10 ವರ್ಷ ಕಠಿಣ ಜೈಲು ಶಿಕ್ಷೆ, ₹ 5 ಸಾವಿರ ದಂಡ ಮತ್ತು ಅಪಹರಣ ಆರೋಪಕ್ಕೆ ಏಳು ವರ್ಷ ಜೈಲು ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಲಾಗಿದೆ. ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ಸ್ಪಷ್ಟಪಡಿಸಿರುವ ನ್ಯಾಯಾಧೀಶರು, ಪರಿಹಾರವಾಗಿ ಸಂತ್ರಸ್ತೆಗೆ ₹ 4 ಲಕ್ಷ ನೀಡುವಂತೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದಾರೆ. ಆರೋಪಿಗೆ ವಿಧಿಸಿರುವ ದಂಡದಲ್ಲಿ ₹ 10 ಸಾವಿರವನ್ನು ಸಂತ್ರಸ್ತೆಗೆ ನೀಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿದ್ದಾರೆ.

ಪ್ರಕರಣವೇನು?: ಬನಶಂಕರಿಯ ಇಟ್ಟಮಡು ನಿವಾಸಿಯಾದ ವಿವಾಹಿತ ಬಾಬು, 17 ವರ್ಷದ ಬಾಲಕಿಯನ್ನು ಪ್ರೀತಿಸುತ್ತಿರುವ ನಾಟಕವಾಡಿದ್ದ. ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದ ಆತ ತನ್ನನ್ನು ಪ್ರೀತಿಸುವಂತೆ ಬಾಲಕಿಯನ್ನು ಒತ್ತಾಯಿಸುತ್ತಿದ್ದ. ಆಕೆ ಅದಕ್ಕೆ ಒಪ್ಪದಿದ್ದಾಗ ಮನೆಯವರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ. ಬಲವಂತವಾಗಿ ಆಕೆಯನ್ನು ಮನೆಯಿಂದ ಕರೆದೊಯ್ದು ಸುತ್ತಾಡಿಸಿದ್ದ ವೇಳೆ ಲೈಂಗಿಕ ಹಿಂಸೆ ನೀಡಿದ್ದ.

ಬಾಲಕಿಯನ್ನು ಸ್ನೇಹಿತರ ಮನೆಗೆ ಕರೆದೊಯಿದ್ದ ಬಾಬು ಆಕೆಯನ್ನು ಮದುವೆಯಾಗಿ ಪುಸಲಾಯಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ 2017ರ ಡಿಸೆಂಬರ್ 23ರಂದು ಹಠಸಂಭೋಗ ನಡೆಸಿದ್ದ. ಈ ಕುರಿತು ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿ ಅತ್ಯಾಚಾರ, ಅಪಹರಣ ಮತ್ತು ಪೋಕ್ಸೊ ಕಾಯ್ದೆಯ ವಿವಿಧ ಕಲಂಗಳಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.