ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವ್‌ ಪಾರ್ಟಿ: 101 ಜನರ ರಕ್ತದ ಮಾದರಿ ಸಂಗ್ರಹ

ಡ್ರಗ್ಸ್‌ ಸೇವನೆ ಪತ್ತೆಗೆ ವೈದ್ಯಕೀಯ ಪರೀಕ್ಷೆಗೆ ರವಾನೆ
Published 21 ಮೇ 2024, 15:24 IST
Last Updated 21 ಮೇ 2024, 15:24 IST
ಅಕ್ಷರ ಗಾತ್ರ

ಬೆಂಗಳೂರು: ಆನೇಕಲ್‌ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹುಸ್ಕೂರ್‌ ಬಳಿಯ ಜಿ.ಆರ್.ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಪಾರ್ಟಿಯಲ್ಲಿದ್ದ 101 ಜನರ ರಕ್ತದ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ.

‘ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ, ಪಾರ್ಟಿಯಲ್ಲಿದ್ದವರು ಡ್ರಗ್ಸ್‌ ಸೇವಿಸಿದ್ದರೆ ಅಥವಾ ಇಲ್ಲವೇ ಎಂಬುದು ತಿಳಿಯಲಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಸನ್‌ಸೆಟ್‌ ಟು ಸನ್‌ರೈಸ್‌ ವಿಕ್ಟರಿ’ ಹೆಸರಿನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ರಾತ್ರಿಯಿಡೀ ಪಾರ್ಟಿ ನಡೆಸುವ ಉದ್ದೇಶವಿತ್ತು. ಭಾನುವಾರ ತಡರಾತ್ರಿ ದಾಳಿ ನಡೆಸಲಾಗಿತ್ತು. ನಾಪತ್ತೆ ಆಗಿರುವ ಫಾರ್ಮ್‌ ಹೌಸ್‌ ಮಾಲೀಕನ  ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

‘ಸ್ಥಳದಲ್ಲಿ ಕೊಕೇನ್‌, ಎಂಡಿಎಂಎ, ಹೈಡ್ರೊ ಗಾಂಜಾ ಸೇರಿ ಹಲವು ಮಾದರಿಯ ಮಾದಕ ವಸ್ತುಗಳು ಪತ್ತೆಯಾಗಿದ್ದು ಅವುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಿಂದ ಹೆಬ್ಬಗೋಡಿ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿ, ತನಿಖೆ ಮುಂದುವರಿಸಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಈಜುಕೊಳಕ್ಕೆ ಡ್ರಗ್ಸ್‌ ಎಸೆದಿದ್ದ ಪೆಡ್ಲರ್‌ಗಳು:

‘ಪೊಲೀಸರು ದಾಳಿ ನಡೆಸುವ ಮಾಹಿತಿ ತಿಳಿದ ಗ್ರಾಹಕರು ಹಾಗೂ ಪೆಡ್ಲರ್‌ಗಳು ಮಾದಕ ವಸ್ತುಗಳನ್ನು ಈಜುಕೊಳ ಹಾಗೂ ಕಮೋಡ್‌ಗೆ ಹಾಕಿ ನಾಶಪಡಿಸಲು ಪ್ರಯತ್ನಿಸಿದ್ದರು. ಕಾರು ಹಾಗೂ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಡ್ರಗ್ಸ್ ಅನ್ನು ಪತ್ತೆ ಮಾಡುವಲ್ಲಿ ಶ್ವಾನದಳ ಯಶಸ್ವಿಯಾಗಿದೆ’ ಎಂದು ಮಾಹಿತಿ ನೀಡಿದರು.

‘ಯಾವುದೇ ರಾಜ್ಯದ ಚುನಾಯಿತ ಪ್ರತಿನಿಧಿಗಳು ರೇವ್‌ ಪಾರ್ಟಿಯಲ್ಲಿ ಇರಲಿಲ್ಲ. ಹೊರರಾಜ್ಯದ ಗ್ರಾಹಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮಾಹಿತಿ ನೀಡಿದರು.

‘ತೆಲುಗು ನಟಿ ಹೇಮಾ ಅವರು ರೇವ್‌ ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿರುವುದು ಸಾಬೀತಾಗಿದೆ. ಅವರ ರಕ್ತ ಮಾದರಿ ಸಂಗ್ರಹಿಸಲಾಗಿದ್ದು ಡ್ರಗ್ಸ್‌ ಸೇವಿಸಿದ್ದರೆ ಕ್ರಮ ಆಗಲಿದೆ’ ಎಂದು ದಯಾನಂದ ಹೇಳಿದರು.

ಡ್ರಗ್ಸ್‌ ಪೂರೈಸಿದ್ದ ಐವರ ವಿಚಾರಣೆ:

‘ಪಾರ್ಟಿಗೆ ಡ್ರಗ್ಸ್‌ ಪೂರೈಸಿದ್ದ ಆರೋಪದ ಮೇರೆಗೆ ವಿ.ರಣಧೀರ್‌ (43), ವೈ.ಎಂ.ಅರುಣ್‌ಕುಮಾರ್‌ (35), ಎಲ್‌.ವಾಸು (35), ನಾಗಬಾಬು (32), ಮಹಮ್ಮದ್‌ ಅಬೂಬಬ್ಕರ್‌ ಸಿದ್ದಿಕಿ (29) ಅವರನ್ನು ಬಂಧಿಸಿ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳು ಹೊರ ರಾಜ್ಯದಿಂದ ಮಾದಕ ವಸ್ತು ತಂದು ಪಾರ್ಟಿಗೆ ಪೂರೈಸಿದ್ದರು ಎಂಬ ಮಾಹಿತಿಯಿದೆ’ ಎಂದು ಮೂಲಗಳು ತಿಳಿಸಿವೆ.

ಸ್ಥಳದಲ್ಲೇ ಡ್ರಗ್ಸ್‌ ಖರೀದಿ: ‘ರೇವ್ ಪಾರ್ಟಿಗೆ ಅಂದಾಜು ₹50ಲಕ್ಷದಿಂದ ₹60 ಲಕ್ಷ ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ. ಪ್ರತಿ ಗ್ರಾಹಕನಿಂದ ಕನಿಷ್ಠ ₹10 ಸಾವಿರ ಶುಲ್ಕ ಪಡೆಯಲಾಗಿತ್ತು. ಹೆಚ್ಚುವರಿಯಾಗಿ ಮಾದಕ ವಸ್ತುಗಳನ್ನು ಸ್ಥಳದಲ್ಲೇ ಖರೀದಿಗೆ ಅವಕಾಶ ನೀಡಲಾಗಿತ್ತು. ದಾಳಿ ನಡೆಸಿದಾಗ ಕೆಲವರು ಮುಖ ಮುಚ್ಚಿಕೊಂಡು ಪರಾರಿಯಾಗಲು ಯತ್ನಿಸಿದರು’ ಎಂದು ಮೂಲಗಳು ತಿಳಿಸಿವೆ.

ಅರುಣ್‌ಕುಮಾರ್‌
ಅರುಣ್‌ಕುಮಾರ್‌
ವಾಸು
ವಾಸು
ನಾಗಬಾಬು
ನಾಗಬಾಬು
ಮಹಮ್ಮದ್‌ ಸಿದ್ದಿಕ್ಕಿ
ಮಹಮ್ಮದ್‌ ಸಿದ್ದಿಕ್ಕಿ
ರೇವ್‌ ಪಾರ್ಟಿ ಪ್ರಕರಣವನ್ನು ಸದ್ಯ ಹೆಬ್ಬಗೋಡಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ಧಾರೆ. ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿಕೊಳ್ಳುವ ಚಿಂತನೆ ಇದೆ
ಬಿ.ದಯಾನಂದ ನಗರ ಪೊಲೀಸ್‌ ಕಮಿಷನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT