ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆ.20ರೊಳಗೆ ಎಲ್ಲ ರಸ್ತೆ ಗುಂಡಿ ದುರಸ್ತಿ: ಸಿದ್ದರಾಮಯ್ಯ

ರಸ್ತೆ, ಮೇಲ್ಸೇತುವೆ, ಮೆಟ್ರೊ ಕಾಮಗಾರಿಗಳ ಪರಿಶೀಲನೆ
Published : 12 ಸೆಪ್ಟೆಂಬರ್ 2024, 22:06 IST
Last Updated : 12 ಸೆಪ್ಟೆಂಬರ್ 2024, 22:06 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿರುವ ಎಲ್ಲ ರಸ್ತೆಗಳ ಗುಂಡಿಗಳನ್ನು ಸೆಪ್ಟೆಂಬರ್‌ 20ರೊಳಗೆ ಮುಚ್ಚಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.‌

ನಗರದ ರಸ್ತೆ ಗುಂಡಿಗಳ ನಿರ್ಮೂಲನೆ ಹಾಗೂ ರಸ್ತೆ ಅಭಿವೃದ್ಧಿ, ಮೂಲಸೌಕರ್ಯ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿದ ನಂತರ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಮುಖ್ಯ ಹಾಗೂ ಉಪ ಮುಖ್ಯರಸ್ತೆಗಳ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿಯ ಸ್ವಂತ ಮಿಶ್ರಣ ಘಟಕದಿಂದ ಡಾಂಬರು ಪೂರೈಸಲಾಗುತ್ತಿದೆ. ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಿ, ದುರಸ್ತಿಪಡಿಸಲು ‘ರಸ್ತೆ ಗುಂಡಿ ಗಮನ’ ಆ್ಯಪ್‌ ಉಪಯೋಗಿಸಲಾಗುತ್ತಿದೆ. 1,376 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, 2,684 ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದಿದ್ದಾರೆ.

₹1,700 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುತ್ತಿದ್ದು, ಇದರಿಂದ ರಸ್ತೆಗಳು ದೀರ್ಘ ಬಾಳಿಕೆ ಬರುತ್ತವೆ. ನಗರದಲ್ಲಿ ಒಟ್ಟು 1,611 ಕಿ.ಮೀ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳಿದ್ದು, 459 ಕಿ.ಮೀ. ಉದ್ದದ ರಸ್ತೆ ಹಾಳಾಗಿದೆ. ಈ ರಸ್ತೆಯನ್ನು ₹659.71 ಕೋಟಿ ವೆಚ್ಚದಲ್ಲಿ ನವೆಂಬರ್‌ನಿಂದ ಡಾಂಬರೀಕರಣ ಮಾಡಲಾಗುತ್ತದೆ ಎಂದಿದ್ದಾರೆ.

‌ರಸ್ತೆಗಳ ತಳಭಾಗದಲ್ಲಿ ಬೆಸ್ಕಾಂ ಕೇಬಲ್, ನೀರು ಸರಬರಾಜು, ಒಳಚರಂಡಿ ಕೊಳವೆಗಳು, ಗೇಲ್‌ ಅನಿಲ ಪೂರೈಕೆ ಕೊಳವೆಗಳು, ಕೆಪಿಟಿಸಿಎಲ್‌ನ ಬೃಹತ್, ಹೆಚ್ಚಿನ ಸಾಮರ್ಥ್ಯದ ಕೇಬಲ್‌ಗಳ ಅಳವಡಿಕೆ, ಒಎಫ್‌ಸಿ ಕೇಬಲ್‌ಗಳ ಅಳವಡಿಕೆಯಿಂದ ರಸ್ತೆಯ ಮೇಲ್ಮೈ ಭಾಗವು ಶಿಥಿಲಗೊಂಡು ರಸ್ತೆ ಗುಂಡಿಗಳು ಉಟಾಗುತ್ತಿರುವುದನ್ನು ಪರಿಶೀಲನೆ ವೇಳೆ ಗಮನಿಸಲಾಗಿದೆ ಎಂದು ಹೇಳಿದ್ದಾರೆ.

ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆಯು ಜಾರಿಯಲ್ಲಿದ್ದು, ರಸ್ತೆ ಗುಂಡಿ ಉದ್ಭವಿಸಿದ ಕೆಲವೇ ಸಮಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಲಾಗಿರುತ್ತದೆ. ರಸ್ತೆ ಅಗೆತದಿಂದಾಗುವ ಗುಂಡಿಗಳನ್ನು ಬೆಸ್ಕಾಂ, ಕೆಪಿಟಿಸಿಎಲ್, ಗೇಲ್‌ ಗ್ಯಾಸ್ ಕಂಪನಿಯವರೇ ಮುಚ್ಚುವಂತೆ ಆದೇಶ ನೀಡಲಾಗಿದೆ. ಜಲಮಂಡಳಿ ಸೇರಿದಂತೆ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಾಗಿದ್ದು, ರಸ್ತೆ ಅಗೆಯುವ ಮತ್ತು ದುರಸ್ತಿಗೊಳಿಸುವ ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಹೆಬ್ಬಾಳದ ಬಳಿ ಬಿಡಿಎ ಮೇಲ್ಸೇತುವೆ ಕಾಮಗಾರಿ, ಹೊರವರ್ತುಲ ರಸ್ತೆಯ ಕರಿಯಣ್ಣನ ಪಾಳ್ಯದ ಬಳಿ ಸರ್ವೀಸ್ ರಸ್ತೆಯ ಡಾಂಬರೀಕರಣ, ಹೆಣ್ಣೂರು ಜಂಕ್ಷನ್ ಬಳಿ‌ ಡಾಂಬರೀಕರಣ, ಕೆ.ಆರ್. ಪುರ ರೈಲ್ವೆ ನಿಲ್ದಾಣದ ಬಳಿ ಮೆಟ್ರೊ ಕಾಮಗಾರಿ ನಕ್ಷೆಗಳ ವೀಕ್ಷಣೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಂತರ,  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮೆಟ್ರೊದಲ್ಲಿ ವಿಧಾನಸೌಧಕ್ಕೆ ಪ್ರಯಾಣಿಸಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಶಾಸಕರಾದ ರಿಜ್ವಾನ್ ಅರ್ಷದ್, ಎನ್‌.ಎ. ಹ್ಯಾರಿಸ್‌, ಬೈರತಿ ಬಸವರಾಜು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್‌. ಉಮಾಶಂಕರ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT