ಮಳಿಗೆ ಖಾಲಿ ಮಾಡಿದರೆ ಬೀದಿ ಪಾಲಾಗುತ್ತೇವೆ: ವ್ಯಾಪಾರಿಗಳ ಅಳಲು

7
ಇಂದಿರಾನಗರ ವ್ಯಾಪಾರಿಗಳ ಅಳಲು *ಪರವಾನಗಿ ನವೀಕರಣ ಮಾಡಲು ಮನವಿ

ಮಳಿಗೆ ಖಾಲಿ ಮಾಡಿದರೆ ಬೀದಿ ಪಾಲಾಗುತ್ತೇವೆ: ವ್ಯಾಪಾರಿಗಳ ಅಳಲು

Published:
Updated:
Deccan Herald

ಬೆಂಗಳೂರು: ‘ಹಲವು ವರ್ಷಗಳಿಂದ ಇದೇ ಜಾಗದಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ. ಈಗಿಂದೀಗಲೇ ಮಳಿಗೆ ಖಾಲಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಮಳಿಗೆ ಮುಚ್ಚಿದರೆ ಮುಂದೇನು ಎಂದು ತಿಳಿಯದೆ ದಿಗ್ಭ್ರಾಂತರಾಗಿದ್ದೇವೆ...’ – ಇಂದಿರಾನಗರದ ಸಣ್ಣ ವ್ಯಾಪಾರಿಗಳ ಅಳಲು ಇದು. 

‘ವಸತಿ ಪ್ರದೇಶದಲ್ಲಿ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಹೈಕೋರ್ಟ್‌ ಆದೇಶ ನೀಡಿದೆ. ಆದರೆ, ನಮಗೆ ವ್ಯಾಪಾರ ಪರವಾನಗಿ ನೀಡಿರುವ ಬಿಬಿಎಂಪಿಯವರು ಕೋರ್ಟ್‌ ವಿಚಾರಣೆ ಸಂದರ್ಭದಲ್ಲಿ ನಮ್ಮ ಪರವಾಗಿ ಸಮರ್ಥವಾಗಿ ವಾದ ಮಂಡಿಸಿಲ್ಲ. ಹಾಗಾಗಿ ನಾವು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ’ ಎಂಬುದು ವ್ಯಾಪಾರಿಗಳ ದೂರು.

ಬಿಎಂ ಕಾವಲ್‌ ಅಸೋಸಿಯೇಷನ್‌, 2015ರಲ್ಲಿ ಇಲ್ಲಿನ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ಹೈಕೋರ್ಟ್‌ನ ಮೊರೆ ಹೋಗಿತ್ತು. ಆಗ ಬಿಬಿಎಂಪಿ ಇಂದಿರಾನಗರದ 2ನೇ ಮತ್ತು 3ನೇ ಹಂತ, ಎಚ್‌ಎಎಲ್‌ ಹಾಗೂ ತಿಪ್ಪಸಂದ್ರದ 73 ಮಳಿಗೆಗಳಿಗೆ ನೋಟಿಸ್‌ ನೀಡಿ, ಮುಚ್ಚಿಸಿತ್ತು.

‘ಸ್ಥಳೀಯ ಶಾಸಕರಿಗೆ (ಎಸ್‌.ರಘು) ನಮ್ಮ ಬವಣೆ ವಿವರಿಸಿದ್ದೆವು. ಮೇಯರ್‌ ಅವರಿಗೂ ಮನವಿ ಸಲ್ಲಿಸಿದ್ದೆವು. ಅವರು ಮಧ್ಯಪ್ರವೇಶ ಮಾಡಿದ ಬಳಿಕ ಬಿಬಿಎಂಪಿಯವರು ವ್ಯಾಪಾರ ಪುನರಾರಾಂಭ ಮಾಡಲು ಅನುವು ಮಾಡಿಕೊಟ್ಟಿದ್ದರು’ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.

‘ಎರಡು ವರ್ಷ ಸುಮ್ಮನಿದ್ದ ಬಿಬಿಎಂಪಿ ಅಧಿಕಾರಿಗಳು ಕೋರ್ಟ್‌ ಆದೇಶವನ್ನಿಟ್ಟು ತೋರಿಸಿ ಈಗ ಮತ್ತೆ ಏಕಾಏಕಿ ನೋಟಿಸ್‌ ಕೊಡುತ್ತಿದ್ದಾರೆ. ಇಲ್ಲಿ ನಿಯಮ ಉಲ್ಲಂಘಿಸಿ ರೆಸ್ಟೋರೆಂಟ್‌ಗಳು, ಪಬ್‌ಗಳು, ಬಾರ್‌ಗಳನ್ನು ನಡೆಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪುಟ್ಟ ಮಳಿಗೆ ಇಟ್ಟುಕೊಂಡ ವ್ಯಾಪಾರಿಗಳನ್ನು ತೆರವುಗೊಳಿಸಿ ಬೀದಿಪಾಲು ಮಾಡಲಾಗುತ್ತಿದೆ’ ಎಂದು ಇಂದಿರಾನಗರದ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎಸ್.ಜಿ.ಆದಿತ್ಯ ದೂರಿದರು.

‘30 ವರ್ಷಗಳಿಂದ ವ್ಯಾಪಾರ ವಹಿವಾಟು ಮಾಡಿಕೊಂಡು ಬರುತ್ತಿರುವ ನಮಗೆ  ಕಿರುಕುಳ ನೀಡಲಾಗುತ್ತಿದೆ. ಬ್ಯಾಂಕ್‌ಗಳಿಂದ ಸಾಲ ಪಡೆದು ಮಳಿಗೆಗಳನ್ನು ನಿರ್ಮಾಣ ಮಾಡಿದ್ದೇವೆ. ಅಂಗಡಿ ಮುಚ್ಚಿದರೆ, ಸಾಲ ಹೇಗೆ ತೀರಿಸುವುದು. ಜೀವನ ನಡೆಸುವುದು ಹೇಗೆ’ ಎಂದು ವ್ಯಾಪಾರಿಗಳು ಪ್ರಶ್ನಿಸಿದರು.

ವ್ಯಾಪಾರಿಗಳ ಬೇಡಿಕೆಗಳು: ‘ಅವಧಿ ಮುಗಿದ ಪರವಾನಗಿಗಳನ್ನು ನವೀಕರಣ ಮಾಡಿಕೊಡಬೇಕು. ಸಣ್ಣ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಆಗದಂತೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು. ನ್ಯಾಯ ಒದಗಿಸಲು ವಕೀಲರನ್ನು ಬಿಬಿಎಂಪಿಯೇ ನೇಮಕ ಮಾಡಬೇಕು. ಈ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ಆಗಬೇಕು’ ಎಂದು ಅವರು ಒತ್ತಾಯಿಸಿದರು.

‘ಸ್ವಚ್ಛತೆ ಮರೀಚಿಕೆಯಾಗಿದೆ’
‘ಇಲ್ಲಿನ ವಸತಿ ಪ್ರದೇಶದಲ್ಲಿರುವ ಮಳಿಗೆಗಳಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಹಕರು ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ರಸ್ತೆಯಲ್ಲಿ ಮುಕ್ತವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ
ವಾಗಿದೆ. ಇದರ ಜೊತೆ ಸಂಚಾರ ದಟ್ಟಣೆ, ಮಾಲಿನ್ಯವೂ ಹೆಚ್ಚಾಗಿದೆ. ಸ್ವಚ್ಛತೆ ಎಂಬುದು ಮರೀಚಿಕೆ ಆಗಿದೆ’ ಎಂದು ‘ಐ ಚೇಂಜ್‌ ಇಂದಿರಾನಗರ’ ಸಂಘಟನೆಯ ಸದಸ್ಯೆ ಸ್ವರ್ಣಾ ವೆಂಕಟರಾಮನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ಮಳಿಗೆಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಹೇಳಿದರು.

*
ಪ್ರತಿನಿತ್ಯ ಲಕ್ಷಾಂತರ ಜನರು ಶಾಪಿಂಗ್‌ ಮಾಡುತ್ತಾರೆ. ಮಳಿಗೆ ಖಾಲಿ ಮಾಡಿದರೆ, ನಿವಾಸಿಗಳು ಸಹ ತೊಂದರೆ ಅನುಭವಿಸಬೇಕಾಗುತ್ತದೆ.
–ಆದಿತ್ಯ, ಇಂದಿರಾನಗರದ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ

*
ವಾಣಿಜ್ಯ ಚಟುವಟಿಕೆಯಿಂದ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ. ವಾಣಿಜ್ಯ ಚಟುವಟಿಕೆಗೆ ಮೀಸಲಿಟ್ಟ ಜಾಗದಲ್ಲಿ ವ್ಯಾಪಾರ ನಡೆಸುವುದಕ್ಕೆ ನಮ್ಮ ಅಭ್ಯಂತರವಿಲ್ಲ.
–ಸ್ವರ್ಣಾ ವೆಂಕಟರಾಮನ್, ‘ಐ ಚೇಂಜ್‌ ಇಂದಿರಾನಗರ’ ಸಂಘಟನೆ ಸದಸ್ಯೆ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !