ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಸರಣಿ ಅಪಘಾತ: ಗರ್ಭಿಣಿ ಸೇರಿ ಇಬ್ಬರಿಗೆ ಗಾಯ

Published 27 ಏಪ್ರಿಲ್ 2024, 15:53 IST
Last Updated 27 ಏಪ್ರಿಲ್ 2024, 15:53 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಗರ್ಭಿಣಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ.

ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು, ನಿರ್ಲಕ್ಷ್ಯ ಹಾಗೂ ಅತೀ ವೇಗದ ಚಾಲನೆ ಆರೋಪದಡಿ ಆಂಬುಲೆನ್ಸ್ ಚಾಲಕ ಸುಮಂತ್‌ (23) ಅವರನ್ನು ವಶಕ್ಕೆ ಪಡೆದಿದ್ದಾರೆ.

‘ಬಾಗಲಗುಂಟೆಯ ಸುಮಂತ್, ಆಸ್ಪತ್ರೆಯೊಂದರ ಆಂಬುಲೆನ್ಸ್ ಚಾಲಕ. ಶುಕ್ರವಾರ ರಾತ್ರಿ 10.45 ಗಂಟೆ ಸುಮಾರಿಗೆ ಕೆ.ಆರ್‌. ಮಾರುಕಟ್ಟೆಯಿಂದ ಹೊಸಗುಡ್ಡದಹಳ್ಳಿ ಕಡೆಗೆ ಹೊರಟಿದ್ದ. ಆಂಬುಲೆನ್ಸ್‌ನಲ್ಲಿ ಒಬ್ಬನೇ ಇದ್ದ. ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಆಂಬುಲೆನ್ಸ್ ಚಲಾಯಿಸಿದ್ದ. ನಿಯಂತ್ರಣ ತಪ್ಪಿದ್ದ ಆಂಬುಲೆನ್ಸ್, ಸಿಗ್ನಲ್‌ನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ನಂತರ, ಅಕ್ಕ–ಪಕ್ಕದಲ್ಲಿದ್ದ ಮತ್ತೊಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನಕ್ಕೂ ಆಂಬುಲೆನ್ಸ್ ಗುದ್ದಿತ್ತು’ ಎಂದು ಪೊಲೀಸರು ಹೇಳಿದರು.

‘ಈ ಸರಣಿ ಅಪಘಾತದಿಂದಾಗಿ ಮೂರು ಕಾರುಗಳು ಹಾಗೂ ಎರಡು ದ್ವಿಚಕ್ರ ವಾಹನಗಳು ಭಾಗಶಃ ಜಖಂಗೊಂಡಿವೆ. ಕಾರಿನಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿಯ ಹೊಟ್ಟೆಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ದ್ವಿಚಕ್ರ ವಾಹನ ಸವಾರರೊಬ್ಬರ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

‘ಅಪಘಾತ ಮಾಹಿತಿ ಪಡೆದು ಸ್ಥಳಕ್ಕೆ ಹೋದ ಸಿಬ್ಬಂದಿ, ಚಾಲಕ ಸುಮಂತ್‌ನನ್ನು ವಶಕ್ಕೆ ಪಡೆದಿದ್ದಾರೆ. ಮದ್ಯ ಕುಡಿದಿರುವ ಅನುಮಾನದ ಮೇರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಂಬುಲೆನ್ಸ್ ಜಪ್ತಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT