ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಪ್ರತ್ಯೇಕ ಅಪಘಾತ: ಮೂವರ ಸಾವು

Published 15 ಜನವರಿ 2024, 15:06 IST
Last Updated 15 ಜನವರಿ 2024, 15:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮೂರು ಸ್ಥಳಗಳಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಬೈಕ್‌ ಸವಾರರು ಹಾಗೂ ಕಾರು ಚಾಲಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಬೈಕ್ ಸವಾರ ಸಾವು: ಬೇಗೂರು ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿರುವ ಸೋಮವಾರ ಬೈಕ್‌ವೊಂದು ನಿಯಂತ್ರಣ ತಪ್ಪಿ ಅ‍ಪಘಾತಕ್ಕೀಡಾದ ಪರಿಣಾಮ ಬೈಕ್ ಸವಾರ ಮೃತಪ‍ಟ್ಟಿದ್ದಾರೆ. ಅಸ್ಸಾಂನ ಉಮಾಂಗ್ ಬೋರಾ (27) ಮೃತಪಟ್ಟವರು.

‘ನಗರದ ಬೆಳ್ಳಂದೂರಿನಲ್ಲಿ ವಾಸವಾಗಿದ್ದ ಉಮಾಂಗ್‌ ಬೋರಾ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿಕೊಂಡು ಬೆಳಗಿನ ಜಾವ 1.30ಕ್ಕೆ ಮನೆಗೆ ತೆರಳುತ್ತಿದ್ದಾಗ ಬೇಗೂರು ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿರುವ ಕ್ಲಾಸಿಕ್ ಅಪಾರ್ಟ್‌ಮೆಂಟ್‌ ಮುಂಭಾಗದಲ್ಲಿ ಬೈಕ್‌ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಬಗ್ಗೆ ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಆಟೊ– ಬೈಕ್‌ ನಡುವೆ ಅಪಘಾತ: ಪೀಣ್ಯದ ಹೆಗ್ಗನಹಳ್ಳಿಯ ಮುಖ್ಯರಸ್ತೆಯಲ್ಲಿ ಭಾನುವಾರ ಆಟೊ ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದಾರೆ.

‘ಹೇರೊಹಳ್ಳಿ ಕ್ರಾಸ್‌ನ ಮಹದೇಶ್ವರನಗರದ ನಿವಾಸಿ ಚಂದ್ರಶೇಖರ್ ಬಿ.ಎಲ್(48) ಮೃತಪಟ್ಟವರು. ಚಂದ್ರಶೇಖರ್ ಅವರು ಭಾನುವಾರ ಮಧ್ಯಾಹ್ನ ತಮ್ಮ ಮಕ್ಕಳಾದ ಗ್ರೀಶ್ಮಾ (9), ಲೋಹಿತ್‌ (13) ಅವರೊಂದಿಗೆ ಬೈಕ್‌ನಲ್ಲಿ ಪೀಣ್ಯ ಕಡೆಯಿಂದ ಹೆಗ್ಗನಹಳ್ಳಿ ಕ್ರಾಸ್‌ನತ್ತ ತೆರಳುತ್ತಿದ್ದರು. ಫುಡ್‌ ಲ್ಯಾಂಡ್‌ ಹೈಪರ್‌ ಮಾರ್ಕೆಟ್‌ ಮುಂಭಾಗದ ರಸ್ತೆಯಲ್ಲಿ ಹಿಂದಿನಿಂದ ವೇಗವಾಗಿ ಬಂದ ಆಟೊ, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಚಂದ್ರಶೇಖರ್ ಅವರು ಕೆಳಗಡೆ ಬಿದ್ದು, ತಲೆಗೆ ಪೆಟ್ಟಾಗಿದೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದರು.

‘ಗಾಯಗೊಂಡಿದ್ದ ಚಂದ್ರಶೇಖರ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪೀಣ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ನಿಂತಿದ್ದ ಕಾರಿಗೆ ಡಿಕ್ಕಿ ಟೆಕಿ ಸಾವು: ಬಾಣಸವಾಡಿ ಸಂಚಾರ ಪೊಲೀಸ ಠಾಣೆ ವ್ಯಾಪ್ತಿಯ ಸಿಎಂಆರ್ ಮುಖ್ಯರಸ್ತೆಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಯ ಬದಿ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು, ಟೆಕಿ ಮೃತಪಟ್ಟಿದ್ದಾರೆ.

ಹೊರಮಾವಿನ ಅಗರ ನಿವಾಸಿ ಮೆಲ್ವಿನ್ ಜೋಸ್ವಾ (25) ಮೃತಪಟ್ಟವರು.

‘ಮೆಲ್ವಿನ್‌ ಅವರು ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಸಂಜೆ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ತನ್ನ ಸ್ನೇಹಿತೆ ಹೆಡ್ಲಿ ಶೆರ್ಲಿನ್ ಅವರೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಅ‍‍ಪಘಾತ ನಡೆದಿದೆ’ ಎಂದು ಪೊಲೀಸರು ತಿಳಿಸಿದರು. 

‘ಬೆಳಗಿನ ಜಾವ 2 ಗಂಟೆಗೆ ಮೆಲ್ವಿನ್ ಜೋಸ್ವಾ ಅವರು ಕಾರನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬರುತ್ತಿದ್ದಾಗ ಸಿಎಂಆರ್ ಮುಖ್ಯರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು, ರಸ್ತೆಯ ಬದಿಯಲ್ಲಿ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು, ನಂತರ ಮರ ಹಾಗೂ ಮನೆಯ ಗೇಟಿಗೆ ಗುದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಮೆಲ್ವಿನ್ ಜೋಸ್ವಾ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಬೆಳಿಗ್ಗೆ 4 ಗಂಟೆಗೆ ಅವರು ಮೃತಪಟ್ಟಿದ್ದಾರೆ. ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT