ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿ ಕಾರಂತ್‌ಗೆ ರೋಲೆಕ್ಸ್‌ ಪ್ರಶಸ್ತಿ l ಫೇಸ್‌ಬುಕ್‌ನಲ್ಲಿ ತೀವ್ರ ಜಟಾಪಟಿ

ಅನರ್ಹರಿಗೆ ಗೌರವ: ಆಕ್ಷೇಪ
Last Updated 22 ಜೂನ್ 2019, 4:51 IST
ಅಕ್ಷರ ಗಾತ್ರ

ಬೆಂಗಳೂರು: ಸೆಂಟರ್ ಫಾರ್ ವೈಲ್ಡ್‌ಲೈಫ್‌ ಸ್ಟಡೀಸ್‌ನ (ಸಿಡಬ್ಲ್ಯುಎಸ್‌) ಮುಖ್ಯ ಸಂರಕ್ಷಣಾ ವಿಜ್ಞಾನಿ ಡಾ. ಕೃತಿ ಕೆ.ಕಾರಂತ ಅವರಿಗೆ ರೋಲೆಕ್ಸ್‌ ಪ್ರಶಸ್ತಿ ನೀಡಿರುವುದಕ್ಕೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.

ಕೃತಿ ಅವರಿಗೆ ಈ ಪ್ರಶಸ್ತಿ ಸಿಗಲು ಕಾರಣವಾದ ‘ವೈಲ್ಡ್‌ ಸೇವಾ’ ಕಾರ್ಯಕ್ರಮದ ಬಗ್ಗೆಯೂ ಅರಣ್ಯ ಇಲಾಖೆ ತಗಾದೆ ತೆಗೆದಿದೆ. ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಏಕೆ ಸರಿಯಲ್ಲ ಎಂಬ ಬಗ್ಗೆ ಇಲಾಖೆ ತನ್ನ ಫೇಸ್‌ಬುಕ್‌ ಪುಟದಲ್ಲಿ ವಿವರವಾದ ಬರಹವೊಂದನ್ನು ಮಂಗಳವಾರ ಪ್ರಕಟಿಸಿದೆ. ಅದರ ಪ್ರಮುಖ ಅಂಶಗಳು ಇಲ್ಲಿವೆ.

‘ವೈಲ್ಡ್‌ ಸೇವೆ ಮೂಲಕ ಸಾವಿರಾರು ಮಂದಿಗೆ ಸಹಾಯಧನ ದೊರಕಿಸಿಕೊಡಲು ನೆರವಾಗಿದ್ದೇನೆ ಎಂದು ಕೃತಿ ಅವರು ಹೇಳಿಕೊಂಡಿದ್ದಾರೆ. ಇದರಲ್ಲಿ ಸತ್ಯಾಂಶವಿಲ್ಲ. ಈ ಕಾರ್ಯಕ್ರಮಕ್ಕಾಗಿ ಅವರು ಯಾವತ್ತೂ ಇಲಾಖೆಯನ್ನು ಸಂಪರ್ಕಿಸಿಲ್ಲ. ಬಂಡಿಪುರ ಹುಲಿ ಮೀಸಲು ಪ್ರದೇಶದ ನಿರ್ದೇಶಕರು 2019ರ ಮೇ 17ರಂದೇ ಈ ಕುರಿತು ಸ್ಪಷ್ಟೀಕರಣ ನೀಡಿದ್ದರು. ವನ್ಯಜೀವಿ ದಾಳಿಯಿಂದ ಉಂಟಾಗುವ ಜಾನುವಾರುಗಳ ಸಾವು ಅಥವಾ ಬೆಳೆ ಹಾನಿಗೆ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಸರ್ಕಾರೇತರ ಸಂಸ್ಥೆ ಅಥವಾ ವ್ಯಕ್ತಿಗಳು ಭಾಗಿಯಾಗುವುದಕ್ಕೆ ಅವಕಾಶ ಇಲ್ಲ ಎಂದೂ ಸ್ಪಷ್ಟಪಡಿಸಿದ್ದರು.’

‘ವೈಲ್ಡ್‌ ಸೇವೆ ಕಾರ್ಯಕ್ರಮ ಆಧಾರರಹಿತ ಎಂಬುದನ್ನು ಕೆಲವು ಸರ್ಕಾರೇತರ ಸಂಘಟನೆಗಳು ರೋಲೆಕ್ಸ್‌ ಸಂಸ್ಥೆಯ ಗಮನಕ್ಕೂ ತಂದಿದ್ದರು. ಇಲಾಖೆಯೂ ಈ ವಿಚಾರವನ್ನು ರೋಲೆಕ್ಸ್‌ ಸಂಸ್ಥೆಯ ಟ್ವಿಟರ್‌ನಲ್ಲೂ ಹಂಚಿಕೊಂಡಿತ್ತು. ಆದರೂ ಆ ಸಂಸ್ಥೆ ಈ ಸಂಗತಿಗಳ ಬಗ್ಗೆ ಗಮನ ವಹಿಸಿಲ್ಲ. ಪರಿಹಾರ ವಿತರಣೆಗೆ ನೆರವಾಗಿರುವುದಾಗಿ ಸುಳ್ಳು ಹೇಳಿದ ವ್ಯಕ್ತಿಗೆ ಪ್ರಶಸ್ತಿ ನೀಡಿದೆ.’

‘ಸಮಾಜ ಕಾರ್ಯದಲ್ಲಿ ನಿಜಕ್ಕೂ ತೊಡಗಿಸಿಕೊಂಡವರಿಗೆ ಪ್ರಶಸ್ತಿ ಸಿಗುತ್ತಿದ್ದರೆ ಅರಣ್ಯ ಇಲಾಖೆ ಖುಷಿಪಡುತ್ತಿತ್ತು. ಆದರೆ, ಮಾಡದಿರುವುದನ್ನು ಮಾಡಿದ್ದೇವೆ ಎಂದು ಸುಳ್ಳು ಹೇಳಿದವರ ಮಾತನ್ನು ನಂಬಿ, ಪ್ರಶಸ್ತಿ ನೀಡಿರುವ ಬಗ್ಗೆ ನಮಗೆ ಬೇಸರವಿದೆ.’

‘ಇಲಾಖೆಯು ಟ್ವಿಟರ್‌ ಮೂಲಕ ನಿಜಾಂಶ ತಿಳಿಸಿದ ಬಳಿಕವಾದರೂ ರೋಲೆಕ್ಸ್‌ ಪರಿಶೀಲಿಸಬೇಕಿತ್ತು. ನಾಗರಹೊಳೆ ಹಾಗೂ ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಕಾರ್ಯನಿರ್ವಹಿಸುವ ಇಲಾಖೆಯ ತಳಮಟ್ಟದ ಅಧಿಕಾರಿಗಳನ್ನು, ಸಿಬ್ಬಂದಿಯನ್ನು ಅಥವಾ ಸ್ಥಳೀಯರಿಂದ ಸತ್ಯಾಂಶ ತಿಳಿಯುವ ಪ್ರಯತ್ನ ನಡೆಸಬೇಕಿತ್ತು. ಆದರೆ, ಅಂತಹ ಯಾವುದೇ ಪ್ರಯತ್ನಗಳನ್ನು ಸಂಸ್ಥೆ ಮಾಡಿಲ್ಲ. ರೋಲೆಕ್ಸ್‌ನಂತಹ ಅಂತರರಷ್ಟ್ರೀಯ ಕಂಪನಿಯಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ.’

‘ವೈಲ್ಡ್‌ ಸೇವೆ ಕಾನೂನುಬದ್ಧ’

ಅರಣ್ಯ ಇಲಾಖೆ ಮಾಡಿರುವ ಆರೋಪಕ್ಕೆ ಕೃತಿ ಕಾರಂತ್‌ ಅವರು ಅಷ್ಟೇ ತೀಕ್ಷ್ಣವಾಗಿ ಉತ್ತರ ನೀಡಿದ್ದಾರೆ.

‘ಭಾರತದಲ್ಲಿ ನಾವು ನಡೆಸುತ್ತಿರುವ ಸಮುದಾಯ ಆಧಾರಿತ ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮ ‘ವೈಲ್ಡ್‌ ಸೇವೆ’ಯ ಬದ್ಧತೆ ಹಾಗೂ ಕಾನೂನು ಬದ್ಧತೆಯನ್ನು ಪ್ರಶ್ನಿಸಲಾಗಿದೆ. ಈ ಹೇಳಿಕೆಗಳು ಸತ್ಯಾಂಶಗಳಿಂದ ಕೂಡಿಲ್ಲ. ಸಾರ್ವಜನಿಕರನ್ನು ಹಾಗೂವೈಲ್ಡ್‌ ಸೇವೆಯ ಸಂಭಾವ್ಯ ಫಲಾನುಭವಿಗಳನ್ನುದಾರಿತಪ್ಪಿಸುವಂತಿವೆ’ ಎಂದು ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ.

‘ವೈಲ್ಡ್‌ ಸೇವೆ ಕಾರ್ಯಕ್ರಮವು ಸಮುದಾಯ ಆಧಾರಿತವಾದುದು. ವನ್ಯಜೀವಿ ಸಂಘರ್ಷದ ಸಂತ್ರಸ್ತರ ಜೊತೆ ಸೇರಿ ನಾವಿದನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಫಲಾನುಭವಿಗಳು ತಾವಾಗಿ ಬಂದು ಸರ್ಕಾರದಿಂದ ಪರಿಹಾರ ಪಡೆಯಲು ನೆರವಾಗುವಂತೆ ಕೋರಿದ್ದರಿಂದ ನಾವು ಮಧ್ಯಪ್ರವೇಶ ಮಾಡಿದ್ದೇವೆ’

‘ಸರ್ಕಾರೇತರ ಸಂಘಟನೆಗಳು ನಡೆಸುವ ಸಮುದಾಯ ಆಧಾರಿತ ವನ್ಯಜೀವಿ ಸಂರಕ್ಷಣಾ ಚಟುವಟಿಕೆಗಳಿಂದ ಅರಣ್ಯ ಅಥವಾ ವನ್ಯಜೀವಿಗಳಿಗೆ ಸಂಬಂಧಿಸಿದ ಕಾನೂನು ಉಲ್ಲಂಘನೆ ಆಗುವುದಿಲ್ಲವಾದರೆ, ಅದನ್ನು ಹತ್ತಿಕ್ಕಲು ಅರಣ್ಯ ಇಲಾಖೆಗೆ ಯಾವುದೇ ಕಾನೂನುಬದ್ಧ ಅಧಿಕಾರ ಇಲ್ಲ’

‘ಬಂಡಿಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳ ಆಸುಪಾಸಿನಲ್ಲಿ ವೈಲ್ಡ್‌ ಸೇವೆ ಮೂಲಕ 6,505 ಫಲಾನುಭವಿಗಳ ಪರವಾಗಿ 13,702 ಅರ್ಜಿಗಳನ್ನು ಸಲ್ಲಿಸಿದ್ದೆವು. ಕೆಲವರು ಮಾಧ್ಯಮಗಳಲ್ಲಿ ಆರೋಪ ಮಾಡಿರುವಂತೆ, ಈ ಕಾರ್ಯಕ್ರಮದ ಮೂಲಕ ನಾವೇ ನೇರವಾಗಿ ಪರಿಹಾರ ಪಾವತಿಸಿದ್ದೇವೆ ಎಂದು ನಾವೆಲ್ಲೂ ಹೇಳಿಕೊಂಡಿಲ್ಲ. ನಮ್ಮ ನೆರವಿಲ್ಲದೆಯೂ ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುವ ಪ್ರಕರಣಗಳೂ ಇರಬಹುದು. ಅಂತಹವನ್ನು ನಾವೇ ಮಾಡಿದ್ದೇವೆ ಎಂದು ಎಲ್ಲೂ ಹೇಳಿಲ್ಲ.’

35 ವರ್ಷಗಳಿಂದ ಸಿಡಬ್ಲ್ಯುಎಸ್‌ ನಡೆದು ಬಂದ ದಾರಿಯೇ ಈ ಸಂಸ್ಥೆ ಏನೆಂಬುದನ್ನು ವಿವರಿಸುತ್ತದೆ. ವನ್ಯಜೀವಿ ಆವಾಸ ಸ್ಥಾನಗಳ ಬಗ್ಗೆ ಸಹಿಷ್ಣುತೆ ಬೆಳೆಸುವ ನಿಟ್ಟಿನಲ್ಲಿ ಆಸಕ್ತಿ ಹೊಂದಿರುವವರ ಜೊತೆ ಹಾಗೂ ವನ್ಯಜೀವಿ ಸಂಘರ್ಷದ ಸಂತ್ರಸ್ತ ಜೊತೆ ವೈಲ್ಡ್‌ ಸೇವೆ ಇನ್ನು ಮುಂದೆಯೂ ಕೆಲಸ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT