ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್‌.ನಗರ: ಬಿಬಿಎಂಪಿ ಚುನಾವಣೆಯಲ್ಲಿ ಸೀಟು ಹಂಚಿಕೆ ಸವಾಲು

ಅಸಮಾಧಾನದ ಅಲೆಯಲ್ಲೂ ಗೆಲುವಿನ ನಗೆ ಬೀರಿದ ಮುನಿರತ್ನ * ಬಿಜೆಪಿ ತಳಮಟ್ಟದ ನಾಯಕರಲ್ಲಿ ತಳಮಳ
Last Updated 10 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುನಿರತ್ನ ಅವರು ಮೂಲ ಬಿಜೆಪಿ ಕಾರ್ಯಕರ್ತರಲ್ಲಿದ್ದ ಅಸಮಾಧಾನದ ಅಲೆಯನ್ನು ನಿವಾರಿಸಿಕೊಂಡು ಸತತ ಮೂರನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅವರ ಗೆಲುವಿನ ಅಂತರ ದುಪ್ಪಟ್ಟಾಗಿದೆ.

ಈ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಭರ್ಜರಿ ಜಯಭೇರಿ ಬಿಜೆಪಿಯ ತಳ ಮಟ್ಟದ ನಾಯಕರನ್ನು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿಲ್ಲ. ಅದರ ಬದಲು ಅವರಲ್ಲಿ ಇನ್ನೊಂದು ರೀತಿಯ ತಳಮಳವನ್ನು ಸೃಷ್ಟಿಸಿದೆ. ಮುನಿರತ್ನ ಜೊತೆ ಅವರ ಬೆಂಬಲಿಗರ ಪಡೆಯೂ ಬಿಜೆಪಿಗೆ ಗುಳೆ ಬಂದಿದೆ. ಮುಂಬರುವ ಬಿಬಿಎಂಪಿ ಚುನಾವಣೆ ವೇಳೆ ಟಿಕೆಟ್‌ ಗಿಟ್ಟಿಸಲು ಕಮಲ ಪಕ್ಷದ ಹಳೆ ಹುಲಿಗಳು ಅವರ ಜೊತೆ ಗುದ್ದಾಡಬೇಕಾಗುತ್ತದೆ ಎಂಬುದೇ ಈ ಅಭದ್ರತೆಗೆ ಕಾರಣ. ಮೂಲ ಬಿಜೆಪಿಗರು ಹಾಗೂ ಮುನಿರತ್ನ ಬೆಂಬಲಿಗರ ನಡುವೆ ಎಷ್ಟರಮಟ್ಟಿಗೆ ಸಾಮರಸ್ಯ ಸಾಧ್ಯವಾಗಿದೆ ಎಂಬುದನ್ನು ನಿಜಕ್ಕೂ ಒರೆಗೆ ಹಚ್ಚುವುದು ಮುಂಬರುವ ಬಿಬಿಎಂಪಿ ಚುನಾವಣೆ.

ಈ ಕ್ಷೇತ್ರದಲ್ಲಿ ಒಂಬತ್ತು ವಾರ್ಡ್‌ಗಳಿವೆ. ಹಿಂದಿನ ಬಿಬಿಎಂಪಿ ಚುನಾವಣೆಯಲ್ಲಿ ಈ ವಾರ್ಡ್‌ಗಳಲ್ಲಿ ನೇರ ಹಣಾಹಣಿ ಇದ್ದುದು ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಐದರಲ್ಲಿ ಕಾಂಗ್ರೆಸ್‌, ಒಂದರಲ್ಲಿ ಜೆಡಿಎಸ್‌ ಹಾಗೂಮೂರು ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಕಾಂಗ್ರೆಸ್‌ನಿಂದ ಗೆದ್ದಿದ್ದ ಬಹುತೇಕರು ಈಗ ಮುನಿರತ್ನ ಜೊತೆ ಗುರುತಿಸಿಕೊಂಡಿದ್ದಾರೆ. ತಮ್ಮ ಬೆಂಬಲಿಗರನ್ನು ಮುನಿರತ್ನ ಅವರು ಬಿಟ್ಟುಕೊಡುವುದಿಲ್ಲ. ಹಿಂದಿನಿಂದಲೂ ಪಕ್ಷಕ್ಕಾಗಿ ಕೆಲಸ ಮಾಡುತ್ತಾ ಬಂದವರು ಮೂಲೆಗುಂಪಾಗಬೇಕಾಗುತ್ತದೆ ಎಂಬುದೇ ಬಿಜೆಪಿ ಕಾರ್ಯಕರ್ತರ ತಳಮಳಕ್ಕೆ ಕಾರಣ.

‘ಈ ಚುನಾವಣೆಯಲ್ಲಿ ನಾವು ಅಭ್ಯರ್ಥಿಗಿಂತಲೂ ಪಕ್ಷದ ಗೆಲುವಿಗಾಗಿ ಕೆಲಸ ಮಾಡಿದೆವು. ಪಕ್ಷದ ನಾಯಕರಾದ ಆರ್‌.ಅಶೋಕ, ಅರವಿಂದ ಲಿಂಬಾವಳಿ, ಸತೀಶ ರೆಡ್ಡಿ ಬಂದು ನಮ್ಮ ಮನವೊಲಿಸಿದ್ದರಿಂದ ಪಕ್ಷಕ್ಕಾಗಿ ಮತ ಯಾಚಿಸಿದ್ದೇವೆ. ಈ ನಾಯಕರು ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಗೆಲುವಿಗಾಗಿ ಲಗಾಯ್ತಿನಿಂದ ನಿಸ್ವಾರ್ಥವಾಗಿ ದುಡಿಯುತ್ತಾ ಬಂದಿರುವ ಪಕ್ಷದ ಸ್ಥಳೀಯ ಮುಖಂಡರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಬಿಬಿಎಂಪಿ ಸದಸ್ಯರಾಗಿದ್ದ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬಿಬಿಎಂಪಿಯ ಒಟ್ಟು ಸದಸ್ಯರ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಬಿಬಿಎಂಪಿ ಪ್ರಕಟಿಸಿದ್ದ ವಾರ್ಡ್‌ವಾರು ಮೀಸಲಾತಿ ಪಟ್ಟಿಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ವಾರ್ಡ್‌ಗಳ ಮೀಸಲಾತಿಯನ್ನು ಬದಲಾಯಿಸಲಾಗಿತ್ತು. ಯಶವಂತಪುರ ವಾರ್ಡ್‌ನ ಮೀಸಲಾತಿಯನ್ನು ಹಿಂದುಳಿದ ವರ್ಗ ಎ ನಿಂದ ಪರಿಶಿಷ್ಟ ಜಾತಿಗೆ, ಜಾಲಹಳ್ಳಿ ವಾರ್ಡ್‌ನ ಮೀಸಲಾತಿಯನ್ನು ಹಿಂದುಳಿದ ವರ್ಗ ಬಿ ನಿಂದ ಪರಿಶಿಷ್ಟ ಜಾತಿಗೆ, ಲಕ್ಷ್ಮೀದೇವಿನಗರ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿಯಿಂದ ಸಾಮಾನ್ಯ ವರ್ಗಕ್ಕೆ ಬದಲಾಯಿಸಲಾಗಿತ್ತು. ಇದರಿಂದಾಗಿ, ಮುನಿರತ್ನ ಜೊತೆ ಗುರುತಿಸಿಕೊಂಡಿದ್ದ ಮಾಜಿ ಪಾಲಿಕೆ ಸದಸ್ಯರಾದ ಜಿ.ಕೆ.ವೆಂಕಟೇಶ್‌, ಜೆ.ಎನ್‌.ಶ್ರೀನಿವಾಸ್‌ ಹಾಗೂ ವೇಲು ನಾಯ್ಕರ್‌ ಅವರು ತಮ್ಮ ವಾರ್ಡ್‌ನಲ್ಲಿ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಬೇಕಾಗಿತ್ತು.

ಪಾಲಿಕೆ ವಾರ್ಡ್‌ಗಳ ಸಂಖ್ಯೆ 243ಕ್ಕೆ ಹೆಚ್ಚಳವಾಗಿ ವಾರ್ಡ್‌ ಮರುವಿಂಗಡಣೆಯಾದಾಗ ಈ ಮೀಸಲಾತಿ ಬದಲಾಗಬಹುದು. ಭರ್ಜರಿ ಬಹುಮತದ ಗೆಲುವಿನೊಂದಿಗೆ ಬಲ ಹೆಚ್ಚಿಸಿಕೊಂಡಿರುವ ಮುನಿರತ್ನ ಮೀಸಲಾತಿ ಮರು ನಿಗದಿ ಸಂದರ್ಭದಲ್ಲಿ ತಮ್ಮ ಬೆಂಬಲಿಗರಿಗೆ ಅನುಕೂಲವಾಗುವಂತೆ ನೋಡಿಕೊಂಡರೆ ಬಿಜೆಪಿಯೊಳಗೆ ತಳ ಹಂತದಲ್ಲಿ ಸಂಘರ್ಷ ನಡೆಯುವ ಸಾಧ್ಯತೆ ಇದೆ.

ಮುನಿರತ್ನ ಅವರು ಸಚಿವರಾಗುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚುನಾವಣೆ ಪ್ರಚಾರದ ಕೊನೆಯ ದಿನ ಘೋಷಿಸಿದ್ದರು. ಈ ವಾಗ್ದಾನವನ್ನು ಅವರು ಈಡೇರಿಸಿದ್ದೇ ಆದರೆ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರಾದ ಅರವಿಂದ ಲಿಂಬಾವಳಿ, ಎಸ್‌.ಆರ್‌.ವಿಶ್ವನಾಥ್‌, ಸತೀಶ ರೆಡ್ಡಿ ತಮ್ಮ ಕನಸು ಈಡೇರಿಸಲು ಮತ್ತೆ ಕಾಯಬೇಕಾಗಿ ಬರಬಹುದು.

ಪ್ರಮುಖ ಎರಡು ರಾಜಕೀಯ ಪಕ್ಷಗಳಿಗೆ ಜೆಡಿಎಸ್‌ ಪ್ರಬಲ ಸ್ಪರ್ಧೆ ಒಡ್ಡಬಹುದು ಎಂಬ ನಿರೀಕ್ಷೆ ಇಲ್ಲಿ ಹುಸಿಯಾಗಿದೆ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಈ ಕ್ಷೇತ್ರದ ಲಗ್ಗೆರೆ ವಾರ್ಡ್‌ನಲ್ಲಿ ಜೆಡಿಎಸ್ ಗೆದ್ದಿತ್ತು. ಆ ವಾರ್ಡ್‌ನ ಪಾಲಿಕೆ ಸದಸ್ಯೆಯಾಗಿದ್ದ ಮಂಜುಳಾ ನಾರಾಯಣಸ್ವಾಮಿ ಇತ್ತೀಚೆಗೆ ಬಿಜೆಪಿಗೆ ಸೇರಿದ್ದರು. ಇಲ್ಲಿ ಜೆಡಿಎಸ್‌ ನೆಲೆಯನ್ನೇ ಕಳೆದುಕೊಂಡಿತ್ತು. ಒಕ್ಕಲಿಗ ಮತಗಳನ್ನು ಗಳಿಸುವಲ್ಲೂ ಯಶಸ್ವಿಯಾಗಿಲ್ಲ. ಹಾಗಾಗಿ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಠೇವಣಿಯನ್ನೂ ಉಳಿಸಿಕೊಂಡಿಲ್ಲ.

ಮುಂದೆ ಕಾದಿದೆ ಪಕ್ಷಾಂತರ ಪರ್ವ

ಕಾಂಗ್ರೆಸ್‌ನಿಂದ ಗೆದ್ದಿದ್ದ ಅಭ್ಯರ್ಥಿಯ ಪಕ್ಷಾಂತರದಿಂದಾಗಿ ಈ ಉಪ ಚುನಾವಣೆ ನಡೆದಿದೆ. ಮುಂಬರುವ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ತಳ ಮಟ್ಟದ ನಾಯಕರ ಪಕ್ಷಾಂತರ ಪರ್ವ ಜೋರಾಗಿಯೇ ನಡೆಯುವ ಎಲ್ಲ ಲಕ್ಷಣಗಳು ಇಲ್ಲಿ ಕಾಣಿಸುತ್ತಿವೆ. ಮುಂಬರುವ ಬಿಬಿಎಂಪಿ ಚುನಾವಣೆ ವೇಳೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತಳಮಟ್ಟದಿಂದ ಪಕ್ಷ ಕಟ್ಟಬೇಕಾದ ಅನಿವಾರ್ಯ ಎದುರಿಸುತ್ತಿವೆ. ಈ ಉಪ ಚುನಾವಣೆಯಲ್ಲಿ ತಮಗೆ ಯಾವೆಲ್ಲ ಮತಗಟ್ಟೆಗಳಲ್ಲಿ ಹೊಡೆತ ಬಿದ್ದಿದೆ ಎಂದು ನೋಡಿಕೊಂಡು ಅಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ತಂತ್ರ ರೂಪಿಸಬೇಕಿದೆ. ಈ ವೇಳೆ ಈ ಪಕ್ಷಗಳು ಸ್ಥಳೀಯವಾಗಿ ಪ್ರಬಲರಾಗಿರುವ ಅನ್ಯ ಪಕ್ಷಗಳ ಮುಖಂಡರಿಗೆ ಗಾಳ ಹಾಕುವುದು ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT