ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗೆ ₹100 ತ್ಯಾಜ್ಯ ಸೇವಾ ಶುಲ್ಕ

Published 10 ಜೂನ್ 2024, 20:20 IST
Last Updated 10 ಜೂನ್ 2024, 20:20 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗೆ ತ್ಯಾಜ್ಯ ನಿರ್ವಹಣೆಗಾಗಿ ತಿಂಗಳಿಗೆ ₹100 ಸೇವಾ ಶುಲ್ಕ ವಿಧಿಸಲು  ಸರ್ಕಾರ ಮುಂದಾಗಿದೆ.

ಜೂನ್ 1ರಿಂದ ನಗರದ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಕಂಪನಿ (ಬಿಎಸ್‌ಡಬ್ಲ್ಯೂಎಂಎಲ್) ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಈ ಸೇವಾ ಶುಲ್ಕವನ್ನು ಜೂನ್‌ನಿಂದಲೇ ಸಂಗ್ರಹಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದೆ. ಇದಕ್ಕೆ ಸರ್ಕಾರ ಒಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಸತಿ ಪ್ರದೇಶದಲ್ಲಿ ಪ್ರತಿ ಮನೆಗೆ ತಿಂಗಳಿಗೆ ₹100, ಒಂದೇ ಕಟ್ಟಡದಲ್ಲಿ ಮೂರ್ನಾಲ್ಕು ಮನೆಗಳಿದ್ದರೆ ಪ್ರತಿ ಮನೆಗೆ ತಲಾ ₹100 ಹಾಗೂ ಅಪಾರ್ಟ್‌ಮೆಂಟ್‌ನಲ್ಲಿ ಪ್ರತಿ ಫ್ಲ್ಯಾಟ್‌ಗೆ ₹100 ವಿಧಿಸಲು ನಿರ್ಧರಿಸಲಾಗಿದೆ. ವಾಣಿಜ್ಯ ಹಾಗೂ ಸಂಘ-ಸಂಸ್ಥೆಗಳಿಗೆ ತಿಂಗಳಿಗೆ ತಲಾ ₹200 ತ್ಯಾಜ್ಯ ಸೇವಾ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿದೆ. 

ಕೊಳೆಗೇರಿ ಪ್ರದೇಶಗಳಲ್ಲಿ ತ್ಯಾಜ್ಯ ಸೇವಾ ಶುಲ್ಕ ವಿಧಿಸದಿರಲು ನಿರ್ಧರಿಸಲಾಗಿದೆ. ಅತಿ ಹೆಚ್ಚು ತ್ಯಾಜ್ಯ ಉತ್ಪಾದಿಸುವ ದೊಡ್ಡ ಕಟ್ಟಡದವರು ಗೊಬ್ಬರ ತಯಾರಿಕೆ ವ್ಯವಸ್ಥೆ ಹೊಂದಿದ್ದರೆ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತದೆ. 

ಬೆಸ್ಕಾಂನ ವಿದ್ಯುತ್ ಬಿಲ್‌ನಲ್ಲಿ ಈ ತ್ಯಾಜ್ಯ ಸೇವಾ ಶುಲ್ಕವನ್ನು ವಿಧಿಸಿ, ಸಂಗ್ರಹಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಬೆಸ್ಕಾಂ ಇದಕ್ಕೆ ಸಮ್ಮತಿ ನೀಡಿಲ್ಲ. ಹೀಗಾಗಿ, ಆಸ್ತಿ ತೆರಿಗೆಯಲ್ಲಿ ಸಂಗ್ರಹಿಸುವುದೇ ಅಥವಾ ವೈಯಕ್ತಿಕವಾಗಿ ಬಿಲ್ ನೀಡಿ ಸಂಗ್ರಹ ಮಾಡಬೇಕೆ ಎಂಬ ಬಗ್ಗೆ ಪಾಲಿಕೆ ಯೋಚಿಸುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಇದನ್ನು ಅಂತಿಮಗೊಳಿಸಲಾಗುವುದು ಎಂದು ಕಂಪನಿ ಅಧಿಕಾರಿಗಳು ತಿಳಿಸಿದರು. 

ಬಿಬಿಎಂಪಿ ಈಗಾಗಲೇ ತ್ಯಾಜ್ಯ ನಿರ್ವಹಣೆ ಕರ ಎಂದು ಆಸ್ತಿ ತೆರಿಗೆಯಲ್ಲಿ ಸಂಗ್ರಹ ಮಾಡುತ್ತಿದೆ. ಇದೀಗ ಮತ್ತೆ ಸೇವಾ ಶುಲ್ಕ ಎಂದು ಪ್ರತಿ ಮನೆಗೆ ವಿಧಿಸಲು ಮುಂದಾಗಿದೆ. 

ಈ ತ್ಯಾಜ್ಯ ನಿರ್ವಹಣೆ ಸೇವಾ ಶುಲ್ಕದಿಂದ ಪಾಲಿಕೆಗೆ ವಾರ್ಷಿಕವಾಗಿ ಸುಮಾರು ₹800 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದನ್ನು ತ್ಯಾಜ್ಯ ನಿರ್ವಹಣೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಲೋಕಸಭೆ ಚುನಾವಣೆಗೆ ಮುನ್ನವೇ  ಬಿಎಸ್‌ಡಬ್ಲ್ಯೂಎಂಎಲ್ ಕಂಪನಿ ತ್ಯಾಜ್ಯ ನಿರ್ವಹಣೆ ಸೇವಾ ಶುಲ್ಕ ಸಂಗ್ರಹಿಸಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಸರ್ಕಾರ ಸೇವಾ ಶುಲ್ಕ ಸಂಗ್ರಹಿಸಲು ಸಮ್ಮತಿಸಿದೆ. ಆದರೆ ಇನ್ನೂ ಅಧಿಕೃತ ಆದೇಶ ಹೊರಬಿದ್ದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT