ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯಗಾಂಧಿ ಟ್ರಾಮ & ಅಸ್ಥಿ ಚಿಕಿತ್ಸಾ ಸಂಸ್ಥೆ: ಫೆಲೋಶಿಪ್ ಪರೀಕ್ಷೆಯಲ್ಲಿ ಅಕ್ರಮ

Published 4 ಸೆಪ್ಟೆಂಬರ್ 2023, 22:39 IST
Last Updated 4 ಸೆಪ್ಟೆಂಬರ್ 2023, 22:39 IST
ಅಕ್ಷರ ಗಾತ್ರ

ಬೆಂಗಳೂರು: ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯು ಫೆಲೋಶಿಪ್ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ತಿದ್ದುಪಡಿ ಮಾಡಿರುವುದು ದೃಢಪಟ್ಟಿದ್ದು, ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ. ಎಂ.ಆರ್. ನಿರಂಜನ್ ಗೌಡ ಅವರನ್ನು ಅಮಾನತ್ತು ಮಾಡಲಾಗಿದೆ.

ಫೆಲೋಶಿಪ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರಭಾರ ನಿರ್ದೇಶಕರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರಗಳನ್ನು ಬರೆದಿದ್ದರು. ಫೆಲೋಶಿಪ್ ಹುದ್ದೆಗೆ ₹ 8 ಲಕ್ಷದಿಂದ ₹ 10 ಲಕ್ಷದವರೆಗೆ ಬೇಡಿಕೆ ಇಡಲಾಗಿದೆ ಎಂದು ಪತ್ರದಲ್ಲಿ ದೂರಿದ್ದರು. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸಿದ ತನಿಖೆಯ ಬಳಿಕ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವುದು ದೃಢಪಟ್ಟಿದೆ. ಇದರಿಂದಾಗಿ ಇಲಾಖೆಯು ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಿ, ಪ್ರಭಾರ ನಿರ್ದೇಶಕರ ಮೇಲೆ ಕ್ರಮ ಕೈಗೊಂಡಿದೆ. 

‘ಆರ್ಥೋಪೆಡಿಕ್ ಟ್ರಾಮಾ’, ‘ಆರ್ಥೋಪ್ಲಾಸ್ಟಿ’, ‘ಸ್ಪೈನ್ ಸರ್ಜರಿ’, ‘ಸ್ಪೋಟ್ಸ್ ಇಂಜುರಿ ಆ್ಯಂಡ್ ಆರ್ಥೋಸ್ಕೋಪಿ’, ‘ಮ್ಯಾಕ್ಸಿಲ್ಲೊ–ಫೆಸಿಯಲ್ ಟ್ರಾಮಾ’, ‘ಅಲ್ಟ್ರಾಸೌಂಡ್ ಆ್ಯಂಡ್ ಇಮ್ಯಾಜ್ ಗೈಡೆಡ್ ಅಡ್ವಾನ್ಸ್ಡ್ ನರ್ವ್ ಬ್ಲಾಕ್ಸ್’ ವಿಭಾಗದಿಂದ ತಲಾ ನಾಲ್ಕು ಸೀಟುಗಳಂತೆ ಒಟ್ಟು 24 ಫೆಲೋಶಿಫ್ ಹುದ್ದೆಗಳಿದ್ದು, ಸಂಸ್ಥೆ ನಡೆಸಿದ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ತಿದ್ದುಪಡಿ ಮಾಡಲಾಗಿದೆ ಎಂದು ಪ್ರಾಧ್ಯಾಪಕರು ಸಹ ದೂರು ನೀಡಿದ್ದರು. 

ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಗೆ ಸದ್ಯ ಪೂರ್ಣಾವಧಿ ನಿರ್ದೇಶಕರಿಲ್ಲ. ವೈದ್ಯಕೀಯ ಅಧೀಕ್ಷಕರಾಗಿದ್ದ ಡಾ. ಎಂ.ಆರ್. ನಿರಂಜನ್ ಗೌಡ ಅವರು ಪ್ರಭಾರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಬಿಎಂಸಿಆರ್‌ಐನಿಂದ ಪರೀಕ್ಷೆ: ಸಂಸ್ಥೆ ನಡೆಸಿದ ಪರೀಕ್ಷೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರಮಾಣೀಕೃತಗೊಂಡಿತ್ತು. ಅಭ್ಯರ್ಥಿಗಳು ಹಾಗೂ ಪ್ರಾಧ್ಯಾಪಕರ ದೂರಿನ ಅನುಸಾರ ಇಲಾಖೆಯು ವಿಚಾರಣಾ ಆಯೋಗ ರಚಿಸಿ, ವರದಿ ಪಡೆದಿತ್ತು. ‘ಪಶ್ನೆ ಪತ್ರಿಕೆ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯು ಅನೈತಿಕ ಹಾಗೂ ಸ್ವೀಕಾರಾರ್ಹವಾದುದ್ದಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಇದರ ಆಧಾರದಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹೊಸದಾಗಿ ಪರೀಕ್ಷೆ ನಡೆಸುವಂತೆ ಬಿಎಂಸಿಆರ್‌ಐ ಡೀನ್ ಅವರಿಗೆ ಆ. 28ರಂದು ಸೂಚಿಸಿದ್ದರು. ಹೀಗಾಗಿ, ಆ. 30ರಂದು ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿದೆ. 

‘ಪ್ರತಿ ಸೀಟಿಗೂ ಮುಂಗಡವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ ಸಂಸ್ಥೆಯ ಸಿಬ್ಬಂದಿ, ಮುಂಗಡವಾಗಿ ಹಣ ನೀಡುವಂತೆ ಸೂಚಿಸಿದರು. ಪರೀಕ್ಷೆಯ ಮುಂಚಿತ ದಿನ ಉತ್ತರ ಪತ್ರಿಕೆ ಒದಗಿಸಲಾಗುತ್ತದೆ ಎಂದೂ ಹೇಳಿದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಬೇಕು’ ಎಂದು ಅಭ್ಯರ್ಥಿಯೊಬ್ಬರು ಇಲಾಖೆ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಡಾ. ನಿರಂಜನ್ ಗೌಡ ಎಂ.ಆರ್. ಅವರು ದೂರವಾಣಿ ಸಂಪರ್ಕಕ್ಕೆ ಲಭ್ಯರಾಗಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT