ಸ್ಯಾಂಟ್ರೊ ರವಿ ಪ್ರಕರಣ: ತನಿಖಾಧಿಕಾರಿ ದಿಢೀರ್ ವರ್ಗಾವಣೆ

ಬೆಂಗಳೂರು: ‘ಕಾಟನ್‌ಪೇಟೆ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಸಹೋದರಿಯರನ್ನು ಬಂಧಿಸಿದ್ದ’ ಪ್ರಕರಣದ ತನಿಖೆ ನಡೆಸುತ್ತಿರುವ ಎಚ್.ಎನ್. ಧರ್ಮೇಂದ್ರ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಪೊಲೀಸ್ ವಿಶೇಷ ಘಟಕದ ಎಸಿಪಿ ಆಗಿರುವ ಧರ್ಮೇಂದ್ರ ಅವರನ್ನು ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಗೆ ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಆದೇಶ ಹೊರಡಿಸಿದೆ. ಇದರ ಜೊತೆಯಲ್ಲಿ ರಾಜ್ಯದ ಹಲವು ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ಗಳನ್ನೂ ವರ್ಗಾವಣೆ ಮಾಡಲಾಗಿದೆ.
ವಿಚಾರಣೆ ಬಾಕಿ ಇರುವಾಗಲೇ ವರ್ಗ: ‘ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ, ತನ್ನ ಪತ್ನಿ ಹಾಗೂ ಅವರ ಸಹೋದರಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಸಂಚು ರೂಪಿಸಿದ್ದರು. ಕಾಟನ್‌ಪೇಟೆ ಇನ್‌ಸ್ಪೆಕ್ಟರ್ ಪ್ರವೀಣ್, ವರ್ಗಾವಣೆ ಆಸೆಗಾಗಿ ಸುಳ್ಳು ಪ್ರಕರಣ ದಾಖಲಿಸಿ ಸಹೋದರಿಯರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸುಳ್ಳು ಪ್ರಕರಣದ ವಿರುದ್ಧ ಮೈಸೂರು ಪೊಲೀಸರಿಗೆ ಸಂತ್ರಸ್ತೆ ಮಾಹಿತಿ ನೀಡಿದ್ದರು. ತನಿಖೆಗೆ ಆದೇಶಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಡಿಸಿಪಿ ವರದಿ ಆಧರಿಸಿ ಇನ್‌ಸ್ಪೆಕ್ಟರ್ ಪ್ರವೀಣ್ ಅವರನ್ನು ಅಮಾನತು ಮಾಡಿದ್ದರು. ನಂತರ, ಸುಳ್ಳು ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ತನಿಖಾಧಿಕಾರಿಯಾಗಿ ಧರ್ಮೇಂದ್ರ ಅವರನ್ನು ನೇಮಿಸಲಾಗಿತ್ತು’ ಎಂದು ತಿಳಿಸಿವೆ.
‘ಸಂತ್ರಸ್ತೆ ಹೇಳಿಕೆ ಪಡೆದಿದ್ದ ಧರ್ಮೇಂದ್ರ, ಸ್ಯಾಂಟ್ರೊ ರವಿ ಹಾಗೂ ಇನ್‌ಸ್ಪೆಕ್ಟರ್ ಪ್ರವೀಣ್ ವಿಚಾರಣೆಗೆ ಸಿದ್ಧತೆ ನಡೆಸುತ್ತಿದ್ದರು. ಇದರ ನಡುವೆಯೇ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.