ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜಾಪುರ–ಹೆಬ್ಬಾಳ ಮೆಟ್ರೊ: ಸಿದ್ಧವಾದ ಡಿಪಿಆರ್‌

ನಗರದಲ್ಲಿ ಜನದಟ್ಟಣೆ, ವಾಹನದಟ್ಟಣೆಯನ್ನು ಕಡಿಮೆಗೊಳಿಸುವ ಯೋಜನೆ
Published 17 ಜನವರಿ 2024, 16:16 IST
Last Updated 17 ಜನವರಿ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಜಾಪುರ–ಹೆಬ್ಬಾಳ ಸಂಪರ್ಕಿಸುವ ಹೊಸ ಮೆಟ್ರೊ ರೈಲು ಮಾರ್ಗಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಬಿಎಂಆರ್‌ಸಿಎಲ್‌ ಸಿದ್ಧಪಡಿಸಿದ್ದು, ಸರ್ಕಾರಕ್ಕೆ ಈ ತಿಂಗಳ ಅಂತ್ಯದೊಳಗೆ ಸಲ್ಲಿಸಲಿದೆ.

37 ಕಿಲೋ ಮೀಟರ್‌ ಉದ್ದದ ಈ ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾಧೀನ ಸೇರಿದಂತೆ ₹16,543 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಯೋಜನೆ ಅನುಷ್ಠಾನಗೊಂಡರೆ ಟೆಕ್‌ ವಲಯ ಮತ್ತು ಹೊರಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.

ವಿಸ್ತೃತ ಯೋಜನಾ ವರದಿಯ ಕರಡು ಪ್ರಕಾರ ಸರ್ಜಾಪುರದ ಐಟಿ ಕಾರಿಡಾರ್ ಬಳಿಯಿಂದ ಜಕ್ಕಸಂದ್ರವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳಲಿದೆ. ಕೋರಮಂಗಲದಲ್ಲಿ ಭೂಗತ ಮಾರ್ಗವಾಗಿ ಪರಿವರ್ತನೆಗೊಳ್ಳಲಿದೆ. ಅಲ್ಲಿಂದ ಸುರಂಗದ ಮೂಲಕ ನಗರದಲ್ಲಿ ಹಾದು ಹೋಗಲಿದೆ. ಬಳ್ಳಾರಿ ಮಾರ್ಗದಲ್ಲಿ ಗಂಗಾನಗರದಿಂದ ಹೆಬ್ಬಾಳದವರೆಗೆ ಮತ್ತೆ ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳಲಿದೆ. 

ಈಗಾಗಲೇ ಚಾಲನೆಯಲ್ಲಿರುವ ಮೆಟ್ರೊ ನೇರಳೆ ಮಾರ್ಗ ಮತ್ತು ಕಾಮಗಾರಿ ನಡೆಯುತ್ತಿರುವ ನೀಲಿ, ಗುಲಾಬಿ ಮಾರ್ಗಗಳೊಂದಿಗೆ ಪ್ರಸ್ತಾವಿತ ಸರ್ಜಾಪುರ–ಹೆಬ್ಬಾಳ ಮಾರ್ಗವು ಸಂಪರ್ಕಿಸುವುದರಿಂದ ಪ್ರಯಾಣಿಕರಿಗೆ ಮಾರ್ಗ ಬದಲಾವಣೆಗೆ ಸುಲಭವಾಗಲಿದೆ.  ಹಾಗೆಯೇ, ಸಿಲ್ಕ್‌ ಬೋರ್ಡ್‌– ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನೀಲಿ ಮಾರ್ಗವನ್ನು ಇಬ್ಲೂರಿನಲ್ಲಿ ಸಂಪರ್ಕಿಸಲಿದೆ. ಕಾಳೇನ ಅಗ್ರಹಾರ–ನಾಗವಾರ ನಡುವೆ ನಿರ್ಮಾಣಗೊಳ್ಳುತ್ತಿರುವ ಗುಲಾಬಿ ಮಾರ್ಗವನ್ನು ಡೇರಿ ಸರ್ಕಲ್‌ನಲ್ಲಿ ಕೂಡಲಿದೆ. ಚಲ್ಲಘಟ್ಟ–ವೈಟ್‌ಫೀಲ್ಡ್‌ ನಡುವಿನ ನೇರಳೆ ಮಾರ್ಗವನ್ನು ಕೆ.ಆರ್. ಸರ್ಕಲ್‌ ಬಳಿ (ಸರ್‌.ಎಂ. ವಿಶ್ವೇಶ್ವರಯ್ಯ ನಿಲ್ದಾಣ) ಸಂಪರ್ಕಿಸಲಿದೆ. 

ಅಲ್ಲದೇ ಉಪನಗರ ರೈಲು ಯೋಜನೆಯ ಚಿಕ್ಕಬಾಣಾವರ–ಬೈಯಪ್ಪನಹಳ್ಳಿ ಮಾರ್ಗವನ್ನು ಹೆಬ್ಬಾಳದಲ್ಲಿ ಸಂಪರ್ಕಿಸುತ್ತದೆ. ಈ ರೀತಿ ನಗರದ ಬಹುತೇಕ ಸಂಪರ್ಕ ಜಾಲಗಳೊಂದಿಗೆ ಕೊಂಡಿಯಾಗುವ ವಿಶಿಷ್ಟ ಯೋಜನೆ ಇದಾಗಿದ್ದು, ನಗರದಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಬಜೆಟ್‌ನಲ್ಲಿ ಘೋಷಣೆ?: ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗಿದೆ. ಎರಡು ವಾರದೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರವು ಈ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಜಾಪುರ ರಸ್ತೆ, ಬಳ್ಳಾರಿ ರಸ್ತೆ (ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ) ಸಹಿತ ಹಲವು ಕಡೆಗಳಲ್ಲಿ ಉಂಟಾಗುತ್ತಿರುವ ವಾಹನದಟ್ಟಣೆಯನ್ನು ಈ ಯೋಜನೆ ನಿವಾರಿಸಲಿದೆ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT