ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಕ್ ಒತ್ತುತ್ತಿದ್ದಂತೆ ಸಿಮ್‌ಕಾರ್ಡ್ ಬಂದ್: ₹ 7 ಲಕ್ಷ ಕಿತ್ತ ವಂಚಕರು

Published 2 ಜೂನ್ 2024, 14:30 IST
Last Updated 2 ಜೂನ್ 2024, 14:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವೃದ್ಧರೊಬ್ಬರ ಸಿಮ್‌ಕಾರ್ಡ್‌ ನೆಟ್‌ವರ್ಕ್‌ ಬಂದ್ ಮಾಡಿಸಿ ಅವರ ಖಾತೆಯಲ್ಲಿದ್ದ ₹ 7 ಲಕ್ಷವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ವಸಂತನಗರದಲ್ಲಿ ವಾಸವಿರುವ 78 ವರ್ಷ ವಯಸ್ಸಿನ ವೃದ್ಧರೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ಗಣೇಶ್, ಕಿಷನ್ ಬಾಯಿ, ರಾಜು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರರ ಮೊಬೈಲ್‌ ಸಂಖ್ಯೆಗೆ, 700*****46 ಮೊಬೈಲ್ ಸಂಖ್ಯೆಯಿಂದ ಮೇ 28ರಂದು ಮಧ್ಯಾಹ್ನ ಸಂದೇಶ ಬಂದಿತ್ತು. ‘ನಿಮ್ಮ ಸಿಮ್‌ಕಾರ್ಡ್ ನವೀಕರಣ ಮಾಡಿಕೊಳ್ಳಿ. ಇಲ್ಲದಿದ್ದರೆ, ಸಿಮ್‌ಕಾರ್ಡ್ ನಿಷ್ಕ್ರಿಯ ಆಗುತ್ತದೆ. ಪುನಃ ಅದೇ ಮೊಬೈಲ್ ನಂಬರ್ ಸಿಗುವುದಿಲ್ಲ’ ಎಂಬುದಾಗಿ ಸಂದೇಶದಲ್ಲಿ ಬರೆಯಲಾಗಿತ್ತು. ‘ಸಿಮ್ ಕಾರ್ಡ್ ನವೀಕರಣ ಮಾಡಲು ಇಲ್ಲಿ ಕ್ಲಿಕ್ ಮಾಡಿ’ ಎಂಬುದಾಗಿ ನಮೂದಿಸಿ ಜಾಲತಾಣವೊಂದರ ಲಿಂಕ್‌ ಸಹ ನೀಡಲಾಗಿತ್ತು.’

‘ಸಂದೇಶ ನಿಜವೆಂದು ನಂಬಿದ್ದ ದೂರುದಾರ, ಲಿಂಕ್ ಕ್ಲಿಕ್ ಮಾಡಿದ್ದರು. ನಂತರ, ಸ್ವಯಂಚಾಲಿತವಾಗಿ ಮೊಬೈಲ್‌ಗೆ ಒಟಿ‍ಪಿ ಬಂದು ನಮೂದಾಗಿತ್ತು. ಇದಾದ ಕೆಲ ಕ್ಷಣಗಳಲ್ಲಿ ದೂರುದಾರರ ಮೊಬೈಲ್ ನೆಟ್‌ವರ್ಕ್‌ ಬಂದ್ ಆಗಿತ್ತು. ಎಷ್ಟೇ ಪ್ರಯತ್ನಿಸಿದರೂ ನೆಟ್‌ವರ್ಕ್ ವಾಪಸು ಬಂದಿರಲಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮೊಬೈಲ್‌ನ ನೆಟ್‌ವರ್ಕ್‌ ಇಲ್ಲದಿರುವ ಸಮಯದಲ್ಲಿಯೇ ಆರೋಪಿಗಳು, ದೂರುದಾರರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹ 7 ಲಕ್ಷವನ್ನು ತಮ್ಮ ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ವರ್ಗಾವಣೆ ಗಮನಕ್ಕೆ ಬರುತ್ತಿದ್ದಂತೆ ದೂರುದಾರ, ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದರು. ಯಾರೋ ಅಪರಿಚಿತರು ದೂರುದಾರರ ಹೆಸರಿನಲ್ಲಿ ಹಣ ವರ್ಗಾಯಿಸಿಕೊಂಡು ವಂಚಿಸಿರುವುದು ಗೊತ್ತಾಗಿತ್ತು. ನಂತರವೇ ದೂರುದಾರ, ದಾಖಲೆ ಸಮೇತ ಠಾಣೆಗೆ ದೂರು ನೀಡಿದ್ದಾರೆ’ ಎಂದು ಹೇಳಿವೆ.

‘ಲಿಂಕ್ ಸಹಾಯದಿಂದ ಸಿಮ್‌ಕಾರ್ಡ್‌ ನೆಟ್‌ವರ್ಕ್‌ ಬಂದ್ ಮಾಡಿಸಿ ಹಣ ದೋಚುವ ಜಾಲದ ಕೃತ್ಯ ಇದಾಗಿದೆ. ಸಾರ್ವಜನಿಕರು ಯಾವುದೇ ಲಿಂಕ್ ತೆರೆಯುವ ಮುನ್ನ ಎಚ್ಚರಿಕೆ ವಹಿಸಬೇಕು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT