ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಿಯ ಕಸ ನಿರ್ವಹಣೆಯೂ ಕೆಆರ್‌ಐಡಿಎಲ್‌ಗೆ?

₹184 ಕೋಟಿ ವೆಚ್ಚದಲ್ಲಿ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ
Last Updated 17 ಜುಲೈ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ತಾಲ್ಲೂಕಿನ ಮಾರೇನಹಳ್ಳಿ ಹಾಗೂ ಕೆ.ಆರ್‌.ಪುರ ತಾಲ್ಲೂಕಿನ ಮಿಟಗಾನಹಳ್ಳಿಯ ಕ್ವಾರಿಗಳ ಭೂಭರ್ತಿ ಘಟಕಗಳಲ್ಲಿ ಕಸದ ವೈಜ್ಞಾನಿಕ ವಿಲೇವಾರಿಯ ಸಂಪೂರ್ಣ ಹೊಣೆಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗೆ (ಕೆಆರ್‌ಐಡಿಎಲ್‌) ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.

'ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ'ಯಡಿ 2018–19 ಹಾಗೂ 2019–20ರಲ್ಲಿ ಮಂಜೂರಾದ ಅನುದಾನದ ಕಾಮಗಾರಿಗಳು ಹಾಗೂ ವಾರ್ಡ್‌ ಮಟ್ಟದ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಮೂಲಕ ನಡೆಸಲು ಪಾಲಿಕೆ ಇತ್ತೀಚೆಗೆ ತೀರ್ಮಾನ ಕೈಗೊಂಡಿತ್ತು. ಅದರ ಬೆನ್ನಲ್ಲೇ, ಕಸ ಘಟಕದ ಹೊಣೆಯನ್ನೂ ಈ ಸಂಸ್ಥೆಗೆ ವಹಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

‘ಪ್ರವಾಹ, ಬರ ಸಂದರ್ಭದಲ್ಲಿನ ತುರ್ತು ಕಾಮಗಾರಿಗಳಿಗಷ್ಟೇ ಕೆಟಿ‍ಪಿಪಿ ಕಾಯ್ದೆ 1999ರಡಿ 4 ಎ ವಿನಾಯಿತಿ ನೀಡಬಹುದು. ಆದರೆ, ಈಗ ಅಂತಹ ತುರ್ತು ಸಂದರ್ಭ ಇಲ್ಲ. ಆದರೂ, ಈ ಘಟಕಗಳ ಕಾಮಗಾರಿಗಳನ್ನು ನಿರ್ವಹಿಸಲು 4 ಎ ವಿನಾಯಿತಿ ಕೋರಲಾಗಿದೆ. ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಅಂತಹ ಸಂದರ್ಭದಲ್ಲಿ, ತರಾತುರಿಯಲ್ಲಿ ಪ್ರಸ್ತಾವ ಸಿದ್ಧಪಡಿಸುವ ಅಗತ್ಯ ಏನಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ಮಾರೇನಹಳ್ಳಿ ಘಟಕಕ್ಕೆ ₹120 ಕೋಟಿ ಹಾಗೂ ಮಿಟಗಾನಹಳ್ಳಿ ಘಟಕಕ್ಕೆ ₹64 ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಇದರಲ್ಲಿ ಘಟಕದ ಆರಂಭ, ಅಭಿವೃದ್ಧಿ, ಕಾರ್ಯಾಚರಣೆ ಹಾಗೂ ನಿರ್ವಹಣೆ ಸೇರಿದೆ.

ಎರಡು ಘಟಕಗಳ ಸ್ಥಾಪನೆಗೆ ಅನುಮೋದನೆ ಹಾಗೂ ಕೆಟಿಪಿಪಿ ಕಾಯ್ದೆಯಿಂದ ವಿನಾಯಿತಿ ಕೋರಿ ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಈ ವರ್ಷದ ಫೆಬ್ರುವರಿಯಲ್ಲಿ ಪತ್ರ ಬರೆದಿತ್ತು. ‘ಇದಕ್ಕೆ ಯಾವ ಅನುದಾನ ಬಳಸಲಾಗುತ್ತದೆ. ಟೆಂಡರ್ ಕರೆಯಲು ಸಾಕಷ್ಟು ಕಾಲಾವಕಾಶ ಇತ್ತು. ಆದರೂ, ಪಾಲಿಕೆ ಟೆಂಡರ್‌ ಕರೆದಿಲ್ಲ. ಕೆಟಿಪಿಪಿ ಕಾಯ್ದೆಯಿಂದ ವಿನಾಯಿತಿ ಕೋರುವ ಬದಲು ಅಲ್ಪಾವಧಿ ಟೆಂಡರ್‌ ಕರೆಯುವುದು ಸೂಕ್ತ ಅಲ್ಲವೇ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಪ್ರಶ್ನಿಸಿದ್ದರು. ಅದರ ಬಳಿಕವೂ, ತುರ್ತು ಕಾಮಗಾರಿಗೆ ವಿನಾಯಿತಿ ನೀಡಬೇಕು ಎಂದು ಕೋರಿ ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಎರಡು ಪತ್ರಗಳನ್ನು ಬರೆದಿತ್ತು.

ಅದರ ನಡುವೆಯೇ, ಎರಡು ಘಟಕಗಳ ಸ್ಥಾಪನೆ ಸಂಬಂಧ ಬಿಬಿಎಂಪಿಯು 2019ರ ಜೂನ್‌ 29ರಂದು ಟೆಂಡರ್‌ ಕರೆದಿತ್ತು. ಆ ಬಳಿಕವೂ ಈ ಘಟಕಗಳ ಸಂಪೂರ್ಣ ಹೊಣೆಯನ್ನು ಕೆಆರ್‌ಐಡಿಎಲ್‌ಗೆ ವಹಿಸುವ ವಿಷಯ ಮುನ್ನೆಲೆಗೆ ಬಂದಿದೆ. ಸಂಸ್ಥೆಗೆ ವಹಿಸುವ ತುರ್ತು ಅಗತ್ಯಗಳ ಬಗ್ಗೆ ವಿವರಣೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಯು ಪಾಲಿಕೆಗೆ ಇದೇ 11ರಂದು ಪತ್ರ ಬರೆದಿದೆ.

ಕಪ್ಪುಪಟ್ಟಿಗೆ ಸೇರಿಸಿದ್ದ ಪಾಲಿಕೆ: ಕಳಪೆ ಕಾಮಗಾರಿಗಳ ಕಾರಣದಿಂದ ಬಿಬಿಎಂಪಿ 2010ರಲ್ಲಿ ಕೆಆರ್‌ಐಡಿಎಲ್‌ ಅನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ‘ತುರ್ತು ಕಾಮಗಾರಿಗಳನ್ನು ಸಹ ಟೆಂಡರ್‌ ಕರೆದೇ ಮಾಡಬೇಕು. ನಿಗಮಕ್ಕೆ ಯಾವುದೇ ಕಾಮಗಾರಿಯ ಹೊಣೆ ವಹಿಸಬಾರದು’ ಎಂದು ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಟಿ.ಎಂ.ವಿಜಯಭಾಸ್ಕರ್ 2015ರಲ್ಲಿ ಆದೇಶ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT