ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ದಿಕ್ಕನ್ನು ತಪ್ಪಿಸಲು ಅಸಹಿಷ್ಣುತೆ: ಸಾಹಿತಿ ಬರಗೂರು ರಾಮಚಂದ್ರಪ್ಪ

Published 11 ಜನವರಿ 2024, 16:07 IST
Last Updated 11 ಜನವರಿ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ‘ಸೌಹಾರ್ದತೆಯು ಸಮಾನತೆಗೆ ವಿರೋಧವಲ್ಲ. ಸಮಾನತೆಯತ್ತ ಸಾಗಬೇಕಾದ ಈ ದೇಶದ ದಿಕ್ಕು ತಪ್ಪಿಸುವುದಕ್ಕಾಗಿಯೇ ಅಸಹಿಷ್ಣುತೆ ಉಂಟುಮಾಡಲಾಗಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. 

ಸೌಹಾರ್ದ ಕರ್ನಾಟಕ ನಗರದಲ್ಲಿ ಗುರುವಾರ ಹಮ್ಮಿಕೊಂಡ ‘ಸೌಹಾರ್ದ ಪರಂಪರೆ ಮತ್ತು ಸಮಕಾಲೀನತೆ’ ರಾಜ್ಯ ಸಮಾವೇಶದಲ್ಲಿ ಆಶಯ ನುಡಿಗಳನ್ನಾಡಿದ ಅವರು, ‘ದ್ವೇಷವಾದ ಮುನ್ನೆಲೆಗೆ ಬಂದಿರುವಾಗ ಸೌಹಾರ್ದತೆಯನ್ನು ಸ್ಥಾಪಿಸುವ ಮೂಲಕ ಸಮಾನತೆಯ ಹಾದಿಯನ್ನು ಸುಲಭ ಮಾಡಿಕೊಳ್ಳಬೇಕು. ಸೌಹಾರ್ದ ಭಾರತ ಇಲ್ಲಿದೆ ಎಂಬ ಸತ್ಯವನ್ನು ಜನರಿಗೆ ತಿಳಿಸಬೇಕು. ಸೌಹಾರ್ದ ಸಮಾಜ ನಿರ್ಮಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಹೇಳಿದರು. 

‘ಸೌಹಾರ್ದತೆ ಮತ್ತು ಸಮಾನತೆ ಪರಸ್ಪರ ವಿರುದ್ಧವಾದವಲ್ಲ. ಸೌಹಾರ್ದತೆ ಸ್ಥಾಪನೆಯಾಗಲು ಮೊದಲು ಸಮಾನತೆ ಬರಬೇಕು. ಸೌಹಾರ್ದ ಪರಂಪರೆ ಸದಾ ಸಮಕಾಲೀನವಾದದ್ದಾಗಿದೆ. ಸೌಹಾರ್ದ ಭಾರತ, ಕರ್ನಾಟಕವನ್ನು ನೋಡಲು ಸೈದ್ಧಾಂತಿಕ ಸೌಹಾರ್ದ ಸಾಧ್ಯವಾಗಬೇಕು. ದೇಶದ ಜನರ ನಿಲುವು ಬೇರೆ ಬೇರೆಯಾಗಿದೆ. ಆದರೆ, ಸೌಹಾರ್ದದ ವಿಷಯ ಬಂದಾಗ ಒಂದಾಗಬೇಕು’ ಎಂದು ತಿಳಿಸಿದರು. 

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್, ‘ಇತ್ತೀಚಿನ ದಿನಗಳಲ್ಲಿ ಸಂವಿಧಾನಕ್ಕೆ ಧಕ್ಕೆ ಬಂದಿದೆ. ಈ ಧಕ್ಕೆಯು ಭಯೋತ್ಪಾದನೆ, ಕೋಮುವಾದ, ಮೂಲಭೂತವಾದ, ಭ್ರಷ್ಟಾಚಾರ, ಸಾಂಸ್ಕೃತಿಕ ದಿವಾಳಿತನದಿಂದ ಬಂದಿದೆ. ರಾಮ ಸಸ್ಯಹಾರಿಯೋ, ಮಾಂಸಹಾರಿಯೋ ಎಂದು ಹೇಳಲೂ ಭಯ ಪಡಬೇಕಾಗಿದೆ. ಇಡೀ ಸಮಾಜ ಅಭದ್ರತೆಯಲ್ಲಿದೆ. ಜಗತ್ತಿನ ಎಲ್ಲ ಧರ್ಮಗಳ ಆಶಯವೂ ಕಣ್ಣೀರು ಒರೆಸುವುದು, ದುಃಖ ದುಮ್ಮಾನ ನಿವಾರಣೆ ಮಾಡುವುದಾಗಿದೆ. ನಾವು ಧರ್ಮದ ವಿರೋಧಿ ಆಗಬೇಕಿಲ್ಲ. ಆದರೆ, ಧರ್ಮವನ್ನು ಅಪ್ರಜಾಪ್ರಭುತ್ವಗೊಳಿಸುವ ಪ್ರಕ್ರಿಯೆಗೆ ಸೆಡ್ಡು ಹೊಡೆಯಬೇಕು’ ಎಂದು ಹೇಳಿದರು. 

ಮತಾಂಧತೆ ಅಪಾಯಕಾರಿ

ಸಾಹಿತಿ ಅರವಿಂದ ಮಾಲಗತ್ತಿ, ‘ಅಲ್ಪಸಂಖ್ಯಾತರ ಮತಾಂಧತೆ ಅವರಿಗೆ ಅಪಾಯಕಾರಿಯಾದರೆ,  ಬಹುಸಂಖ್ಯಾತರ ಮತಾಂಧತೆ ದೇಶಕ್ಕೆ ಗಂಡಾಂತರಕಾರಿಯಾಗಿದೆ. ಧರ್ಮಕ್ಕೆ ಮೊದಲ ಆದ್ಯತೆ ಸಹ್ಯವಲ್ಲ. ದೇಶ ಮೊದಲು ನಂತರ ಧರ್ಮವೆಂಬ ಮನೋಭಾವ ಮೂಡಬೇಕು’ ಎಂದು ತಿಳಿಸಿದರು. 

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ‘ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಕೋಮು ಸಾಮರಸ್ಯ ಅಗತ್ಯ. ಕೆಲ ವರ್ಷಗಳಿಂದ ಸಮಾಜ ಒಡೆಯುವ ಕೆಲಸಗಳು ನಡೆಯುತ್ತಿವೆ. ಯುವಜನರು ಸ್ವಾತಂತ್ರ್ಯ ಹೋರಾಟವನ್ನು ಮರೆತಿದ್ದು, ಅವರಿಗೆ ದೇಶಾಭಿಮಾನ ಮೂಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು. 

‘ಮಹಾಪುರುಷರಿಗೆ ಜಾತಿ ಧರ್ಮದ ಲೇಪ’

‘ಚುನಾವಣೆಗಳು ಸಮೀಪಿಸಿದಂತೆ ರಾಜಕೀಯ ಪಕ್ಷಗಳು ಹೊಸ ಹೊಸ ವಿಷಯಗಳನ್ನು ಮುನ್ನೆಲೆಗೆ ತರುತ್ತಿವೆ. ಉತ್ತರ ಭಾರತದಲ್ಲಿ ಶಿವ ಹೆಚ್ಚು ಪ್ರಚಲಿತದಲ್ಲಿದ್ದಾನೆ. ಅಲ್ಲಿ ಸಣ್ಣ ಸಣ್ಣ ಶಿವನ ದೇವಾಲಯಗಳನ್ನು ನೋಡಬಹುದು. ಅಲ್ಲಿ ಈಗ ಬಲವಂತವಾಗಿ ರಾಮನನ್ನು ಹೇರಲಾಗುತ್ತಿದೆ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಹೇಳಿದರು. ‘ಕುವೆಂಪು ಅವರು ವಿಶ್ವಮಾನವ ಪರಿಕಲ್ಪನೆ ನೀಡಿದರು. ಆದರೆ ಅವರನ್ನು ಒಕ್ಕಲಿಗರು ಎಂದು ಬಿಂಬಿಸಲಾಗುತ್ತಿದೆ. ಅದೇ ರೀತಿ ಬಸವಣ್ಣ ಅಂಬೇಡ್ಕರ್‌ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಜ.30ರಂದು ಮಾನವ ಸರಪಳಿ

ಗಾಂಧೀಜಿ ಹತ್ಯೆಯಾದ ಜ.30ರಂದು ರಾಜ್ಯದೆಲ್ಲೆಡೆ ನಾಡಿನ ಸೌಹಾರ್ದ ಪರಂಪರೆಯನ್ನು ಮೇಲೆತ್ತಿ ಹಿಡಿಯಲು ಸೌಹಾರ್ದ ಮಾನವ ಸರಪಳಿ ನಿರ್ಮಿಸಬೇಕು. ಇದರಲ್ಲಿ ಲಕ್ಷಾಂತರ ಜನರನ್ನು ಸೇರಿಸಬೇಕು ಎಂಬ ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು. 

ದೇಶದಲ್ಲಿ ಬಹುತ್ವಕ್ಕೆ ಧಕ್ಕೆ ತರುವ ಕೆಲಸವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸೌಹಾರ್ದ ಪರಂಪರೆ ಬೆಳೆಸುವ ಬಗ್ಗೆ ಯೋಚಿಸಬೇಕು.
ಕೆ. ಮರುಳಸಿದ್ದಪ, ಸಾಹಿತಿ
ಒಂದು ದೇಶ ಒಂದು ಸಂಸ್ಕೃತಿ ಎನ್ನುವುದು ಸರ್ವಾಧಿಕಾರಿ ಮನೋಭಾವ. ಬಹುಸಂಸ್ಕೃತಿಗೆ ಧಕ್ಕೆ ಒದಗಿ ಬಂದಿದೆ.
ಬಡಗಲಪುರ ನಾಗೇಂದ್ರ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT