ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸ್ಫೂರ್ತಿಯ ನಡೆ’ಗೆ ಅನುದಾನ ಕೊರತೆ

ಯೋಜನೆ ಸ್ಥಗಿತ l ಗ್ರಾಮೀಣ ವಿದ್ಯಾರ್ಥಿಗಳಿಗಿಲ್ಲ ಸ್ಪೋಕನ್‌ ಇಂಗ್ಲಿಷ್‌, ವ್ಯಕ್ತಿತ್ವ ವಿಕಸನದ ತರಬೇತಿ
Published 10 ಜೂನ್ 2024, 3:09 IST
Last Updated 10 ಜೂನ್ 2024, 3:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ‘ಸ್ಫೂರ್ತಿಯ ನಡೆ’ ಯೋಜನೆಗೆ 2023–24ನೇ ಸಾಲಿನಲ್ಲಿ ಅನುದಾನ ನಿಗದಿಪಡಿಸದ ಕಾರಣ ಯೋಜನೆ ಸ್ಥಗಿತಗೊಂಡಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ‘ಸ್ಪೋಕನ್‌ ಇಂಗ್ಲಿಷ್‌ ಹಾಗೂ ವ್ಯಕ್ತಿತ್ವ ವಿಕಸನ’ ತರಬೇತಿಯಿಂದ ವಂಚಿತರಾಗಿದ್ದಾರೆ.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 1,165 ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳಿದ್ದು, ಅದರಲ್ಲಿ 84,432 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಈ ಪೈಕಿ ಗ್ರಾಮೀಣ ಪ್ರದೇಶದ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಉದ್ಯೋಗಾವಕಾಶಗಳನ್ನು ಪಡೆಯಲು ಅನುವು ಮಾಡಿಕೊಡುವ ಉದ್ದೇಶದಿಂದ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 2022–23ರಲ್ಲಿ ‘ಸ್ಫೂರ್ತಿಯ ನಡೆ’ ಯೋಜನೆಯನ್ನು ಜಾರಿಗೊಳಿಸಿತ್ತು. ಇದಕ್ಕಾಗಿ ₹5 ಕೋಟಿ ಅನುದಾನ ಮೀಸಲಿಟ್ಟಿತ್ತು. ಆದರೆ, ಈ ಬಾರಿ ಅನುದಾನ ನಿಗದಿಪಡಿಸದ ಕಾರಣ ಈ ಯೋಜನೆ ಸ್ಥಗಿತಗೊಂಡಿದೆ.

‘ಮೆಟ್ರಿಕ್‌ವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಸಂವಹನ ನಡೆಸಲು ಕಷ್ಟವಾಗುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಉದ್ಯೋಗ ಪಡೆಯಲು ಇಂಗ್ಲಿಷ್ ಭಾಷೆಯ ಜ್ಞಾನ, ವ್ಯಕ್ತಿತ್ವ ವಿಕಸನ ಅಗತ್ಯವಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ವಸತಿನಿಲಯಗಳಿಗೆ ದಾಖಲಾತಿ ಪಡೆಯುವ ಗ್ರಾಮೀಣ ವಿದ್ಯಾರ್ಥಿಗಳಿಗೆ ‘ಸ್ಪೋಕನ್‌ ಇಂಗ್ಲಿಷ್ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿ’ ನೀಡುವ ಯೋಜನೆ ಜಾರಿಗೊಳಿಸಿತ್ತು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.

‘ಪ್ರತಿ ತಿಂಗಳು 15 ಸ್ಪೋಕನ್ ಇಂಗ್ಲಿಷ್‌ ಹಾಗೂ 4 ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ 1 ಗಂಟೆಯ ಅವಧಿಯ ತರಗತಿಗಳಿದ್ದವು. ಸ್ಪೋಕನ್‌ ಇಂಗ್ಲಿಷ್‌ ತರಬೇತಿ ನೀಡುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಿಗೆ 10 ತಿಂಗಳಿಗೆ ₹30 ಸಾವಿರ ಹಾಗೂ ವ್ಯಕ್ತಿತ್ವ ವಿಕಸನ ಬೋಧಿಸುವ ವಿಷಯ ತಜ್ಞರಿಗೆ ₹14 ಸಾವಿರ ಗೌರವಧನ ನಿಗದಿಪಡಿಸಲಾಗಿತ್ತು’ ಎಂದರು.

‘ವಿದ್ಯಾರ್ಥಿಸ್ನೇಹಿಯಾಗಿದ್ದ, ಈ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವುದಕ್ಕಿಂತ ಮೊದಲೇ ಅನುದಾನದ ಕೊರತೆಯಿಂದ ನಿಲ್ಲಿಸಿರುವುದು, ನಮ್ಮಂತಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ನಷ್ಟವಾಗಿದೆ’ ಎಂದು ವಸತಿನಿಲಯದ ವಿದ್ಯಾರ್ಥಿಯೊಬ್ಬರು ತಿಳಿಸಿದರು. 

ಈ ಬಗ್ಗೆ ಪ್ರತಿಕ್ರಿಯೆಗಾಗಿ ಹಿಂದುಳಿದ ವರ್ಗಗಳ ಆಯುಕ್ತ ಕೆ.ಎ. ದಯಾನಂದ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತರಬೇತಿ ನೀಡುವ ವಿಷಯಗಳು
ಆರ್ಥಿಕ ಸಾಕ್ಷರತೆ ಮತ್ತು ಹೂಡಿಕೆ ಅವಕಾಶಗಳು ನಾಗರಿಕ ಹಕ್ಕುಗಳು ಮತ್ತು ಜವಾಬ್ದಾರಿಗಳು ಬೇಸಿಕ್‌ ಕಂಪೂಟರ್‌ ಜ್ಞಾನ ಕಾನೂನು ಸಾಕ್ಷರತೆ ಪ್ರಾಥಮಿಕ ಚಿಕಿತ್ಸೆ ಆಹಾರ ಮತ್ತು ಪೋಷಣೆ ಭಾರತ ಸಂವಿಧಾನ ಮತ್ತು ನಾಗರಿಕತೆ ಸಾಮಾಜಿಕ ಮಾಧ್ಯಮ ನಿರ್ವಹಣೆ ಮತ್ತು ಅಂತರ್ಜಾಲ ಬಳಕೆ ಉದ್ಯೋಗವಕಾಶಗಳು ಸೇರಿದಂತೆ 10 ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT