ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ಉಗ್ರರ ಪತ್ತೆಗೆ ವ್ಯಾಪಕ ಕಾರ್ಯಾಚರಣೆ

Last Updated 25 ಮೇ 2019, 19:49 IST
ಅಕ್ಷರ ಗಾತ್ರ

ಕೊಲಂಬೊ: ಈಸ್ಟರ್‌ ಭಾನುವಾರ ನಡೆದ ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ ಉಗ್ರರ ಪತ್ತೆಗಾಗಿ ಶ್ರೀಲಂಕಾದ ಸೇನೆ ಶನಿವಾರ ವ್ಯಾಪಕ ಶೋಧಕಾರ್ಯ ನಡೆಸಿದೆ.

ಕೊಲೊಂಬೊ ಮತ್ತು ಉಪನಗರಗಳಲ್ಲಿ ಯೋಧರು ಶೋಧಕಾರ್ಯ ನಡೆಸಿದ್ದಾರೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಾಯವ್ಯ ಶ್ರೀಲಂಕಾದಲ್ಲಿ ಈಚೆಗೆ ಮುಸ್ಲಿಂ ವಿರೋಧಿ ಗಲಭೆ ನಡೆದ ಸಂದರ್ಭದಲ್ಲೂ ಇದೇ ರೀತಿಯ ಕಾರ್ಯಾಚರಣೆ ನಡೆದಿತ್ತು. ಬಾಂಬ್‌ ದಾಳಿ ಮತ್ತು ಮುಸ್ಲಿಂ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ಭದ್ರತಾಪಡೆಗಳು ಈಗಾಗಲೇ ಹಲವರನ್ನು ಬಂಧಿಸಿವೆ.

ಆತ್ಮಾಹುತಿ ದಾಳಿ ನಡೆದ ಬಳಿಕ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಮತ್ತೆ ಒಂದು ತಿಂಗಳ ವರೆಗೆ ವಿಸ್ತರಿಸಿದ್ದಾರೆ. ಸ್ಥಳೀಯ ಉಗ್ರ ಸಂಘಟನೆ ನ್ಯಾಷನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಸಂಘಟನೆಯ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದರು.

’ತಮಿಳುನಾಡಿನ ಉಗ್ರ ಸಂಘಟನೆಯಿಂದ ಪ್ರೇರಣೆ’:‘ಆತ್ಮಾಹುತಿ ದಾಳಿಕೋರರು ತಮಿಳುನಾಡು ಮೂಲದ ಉಗ್ರ ಸಂಘಟನೆಯಿಂದ ಪ್ರೇರಿತರಾಗಿದ್ದರು’ ಎಂದು ಜೈಲಿನಿಂದ ಬಿಡುಗಡೆಗೊಂಡಿರುವ ಶ್ರೀಲಂಕಾದ ವಿವಾದಿತ ಬೌದ್ಧ ಸನ್ಯಾಸಿ ಗಲಗೋದಾತ್ತೆ ಜ್ಞಾನಸಾರ ಶುಕ್ರವಾರ ಹೇಳಿದ್ದಾರೆ.

ತಮಿಳುನಾಡು ತೌಹೀತ್‌ ಜಮಾತ್‌(ಟಿಎನ್‌ಟಿಜೆ) ಸಂಘಟನೆಯ ಆಯೂಬ್‌ ಮತ್ತು ಅಬ್ದೀನ್‌ ಎಂಬವರು ಶ್ರಿಲಂಕಾಕ್ಕೆ ಭೇಟಿ ನೀಡಿದ್ದರು ಎಂದೂ ಜ್ಞಾನಸಾರ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಈ ಇಬ್ಬರು ಇಲ್ಲಿನ ಅಬ್ದುಲ್‌ ರಜೀಕ್‌ ಎಂಬಾತನನ್ನು ಭೇಟಿಯಾಗಿದ್ದರು. ಮುಸ್ಲಿಮರ ಮೇಲೆ ದಾಳಿ ನಡೆಸುವಂತೆ ಬೌದ್ಧರನ್ನು ಪ್ರಚೋದಿಸುವುದು ಅವರ ಉದ್ದೇಶವಾಗಿತ್ತು. ಬುದ್ಧನನ್ನು ಅವಹೇಳನ ಮಾಡುವ ಕಥೆಗಳನ್ನು ಅವರು ಪ್ರಚಾರ ಮಾಡಿದ್ದರು’ ಎಂದೂ ಆರೋಪಿಸಿದ್ದಾರೆ.

ಏಪ್ರಿಲ್‌ 21ರಂದು 9 ಮಂದಿ ಆತ್ಮಾಹುತಿ ದಾಳಿಕೋರರುಮೂರು ಚರ್ಚ್‌ ಮತ್ತು ಹಲವು ಐಷಾರಾಮಿ ಹೋಟೆಲ್‌ಗಳನ್ನು ಗುರಿಯಾಗಿಸಿ ನಡೆಸಿದ ದಾಳಿಗೆ 260 ಮಂದಿ ಬಲಿಯಾಗಿದ್ದರು.

ಬ್ಯಾಂಕ್‌ ಖಾತೆ ಮುಟ್ಟುಗೋಲು:ಎನ್‌ಟಿಜೆ ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವ 41 ಮಂದಿ ಶಂಕಿತ ಉಗ್ರರ ಬ್ಯಾಂಕ್‌ ಖಾತೆಗಳನ್ನು ಸರ್ಕಾರ ಮುಟ್ಟುಗೋಲು ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT