ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ ಒಳಗಾಗಿ ಹಕ್ಕುಪತ್ರ ವಿತರಿಸಿ: ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ

Last Updated 11 ಫೆಬ್ರುವರಿ 2022, 17:36 IST
ಅಕ್ಷರ ಗಾತ್ರ

ಬೆಂಗಳೂರು: ‘ಫಲಾನುಭವಿಗಳು 94ಸಿಸಿ ಅಡಿ ಹಕ್ಕುಪತ್ರ ಪಡೆಯಲು ಅಲೆದಾಡುವುದನ್ನು ತಪ್ಪಿಸಬೇಕು.ಮಾರ್ಚ್‌ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳು ವಿತರಣೆಯಾಗಬೇಕು. ಯಾವ ಕಾರಣಕ್ಕೂ ಗಡುವು ಮೀರಬಾರದು’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಯಶವಂತಪುರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಹಕ್ಕುಪತ್ರ ವಿತರಣೆ, ಸ್ಮಶಾನಕ್ಕೆ ಜಾಗದ ಕೊರತೆ ಸಮಸ್ಯೆ ಹಾಗೂ ಅವುಗಳಿಗೆ ಪರಿಹಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಾಲ್ಕು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿರುವವರಿಗ ಈವರೆಗೆ ಹಕ್ಕುಪತ್ರಗಳು ತಲುಪಿಲ್ಲ. ಸಾಗುವಳಿ ಚೀಟಿಯಲ್ಲಿ ತಾರತಮ್ಯ ಮಾಡಲಾಗಿದೆ. ಸರ್ಕಾರಿ ಭೂಮಿ ಮಂಜೂರು ಮಾಡುವಲ್ಲಿ ತಾರತಮ್ಯ ಬೇಡ.ಬಡವರಿಗಾಗಿ ಸರ್ಕಾರ ರೂಪಿಸಿದ ಕಾರ್ಯಕ್ರಮ ಇದು. ಹಕ್ಕುಪತ್ರ, ಸಾಗುವಳಿ ಚೀಟಿ ಸಮರ್ಪಕವಾಗಿ ವಿತರಣೆಯಾಗಬೇಕು’ ಎಂದರು.

‘ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ಮಶಾನ ಇಲ್ಲದಿರುವುದರಿಂದ ಸರ್ಕಾರಿ ಜಾಗಗಳನ್ನು ಗುರುತಿಸಿ, ಸ್ಮಶಾನಕ್ಕೆ ಜಾಗ ಒದಗಿಸಬೇಕು. ಕೆಲವೆಡೆ ಭೂಮಿ ಲಭ್ಯವಿದ್ದರೂ ಜಾಗ ಮಾಡಿಕೊಟ್ಟಿಲ್ಲ. ನಗರಕ್ಕೆ ಹಲವು ಗ್ರಾಮಗಳು ಹೊಂದಿಕೊಂಡಿವೆ. ಆದರೆ, ಅಂತ್ಯಕ್ರಿಯೆಗೆ ಸೂಕ್ತ ಜಾಗವಿಲ್ಲ. ಸ್ಮಶಾನದ ಜಾಗಗಳಿಗೆಒತ್ತುವರಿಯಾಗದಂತೆ ತಂತಿಬೇಲಿ ಹಾಕಬೇಕು.ಕೋವಿಡ್‌ ಸಮಯದಲ್ಲಿ ಆರಂಭಿಸಿದ ವಿದ್ಯುತ್‌ ಚಿತಾಗಾರಗಳಿಗೆ ಮೂಲ ಸೌಕರ್ಯ ಒದಗಿಸಬೇಕು’ ಎಂದರು.

‘ಮಾಗಡಿ ಮುಖ್ಯರಸ್ತೆಯ ತಾವರೆಕೆರೆ ಗ್ರಾಮದಲ್ಲಿಹೆದ್ದಾರಿ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಸರ್ಕಾರಿ ಶಾಲೆ ಮತ್ತು ದೇವಸ್ಥಾನಗಳಿಗೆ ದಾನಿಗಳು ಜಾಗ ನೀಡಿರುವ ಕುರಿತು ದಾಖಲೆಗಳನ್ನು ಸಿದ್ಧಪಡಿಸಿ, ಪಹಣಿಯಲ್ಲಿ ‘ಸರ್ಕಾರಿ ಜಾಗ’ವೆಂದು ನಮೂದಿಸಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್, ‘ಮಾ.25ರೊಳಗೆ ಹಕ್ಕುಪತ್ರಗಳ ವಿತರಣೆಯಾಗಬೇಕು. ಸ್ಮಶಾನ ಜಾಗಗಳನ್ನು ಗುರುತಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ತ್ವರಿತವಾಗಿ ಬಗೆಹರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT