ಶುಕ್ರವಾರ, ಜನವರಿ 27, 2023
26 °C

ವಿಧಾನಸೌಧದ ಮುಂಭಾಗ ಫೆಬ್ರುವರಿ ಅಂತ್ಯದೊಳಗೆ ಕೆಂಪೇಗೌಡರ ಪ್ರತಿಮೆ: ಆರ್. ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಧಾನಸೌಧದ ಮುಂಭಾಗದಲ್ಲಿ ಮುಂದಿನ ಫೆಬ್ರುವರಿ ತಿಂಗಳ ಒಳಗೆ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳುತ್ತಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಭವ್ಯ ಪ್ರತಿಮೆ ಹಾಗೂ ಕೆಂಪೇಗೌಡ ಥೀಮ್ ಪಾರ್ಕ್ ಉದ್ಘಾಟನೆ ಅಂಗವಾಗಿ ಸಂಗ್ರಹವಾದ ಮೃತ್ತಿಕೆ ಹಾಗೂ ಕೆಂಪೇಗೌಡ ರಥಗಳಿಗೆ ಚಾಲನೆ ನೀಡಿ ಮಾತನಾಡಿದರು.

‘ಇಡೀ ದೇಶಕ್ಕೆ ಮಾದರಿಯಾದ ವಿಧಾನಸೌಧದಲ್ಲಿ ಕೆಂಪೇಗೌಡರ ಪ್ರತಿಮೆ ಇಲ್ಲದಿರುವುದು ಬೆಂಗಳೂರಿಗೆ ಅರ್ಥ ಇಲ್ಲ. ವಿಧಾನಸೌಧ ನಿರ್ಮಾಣವಾಗಿ 75 ವರ್ಷಗಳು ಕಳೆದರೂ ವಿಧಾನಸೌಧದ ಮುಂದೆ ಕೆಂಪೇಗೌಡರ ಪ್ರತಿಮೆ ಸ್ಥಾಪನೆಯಾಗಿಲ್ಲ. ಹೀಗಾಗಿ, ವಿಧಾನಸೌಧದ ಮುಂದೆ ಕೆಂಪೇಗೌಡರ ಪುತ್ಥಳಿಯನ್ನು ಅನಾವರಣ ಮಾಡಲಾಗುವುದು’ ಎಂದರು.

‘ಇದೇ 11ರಂದು ನಡೆಯಲಿರುವ ಕೆಂಪೇಗೌಡ ಪ್ರತಿಮೆಯ ಅನಾವರಣ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರನ್ನು ಕಟ್ಟಿದಂತಹ ಮಹಾಪುರುಷನನ್ನು ನೆನಪು ಮಾಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೆಂಪೇಗೌಡರು ಕಟ್ಟಿರುವ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ದು, ಪ್ರಪಂಚದಲ್ಲೇ 25ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ’ ಎಂದು ಹೇಳಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ‘ರಾಜ್ಯದ ಎಲ್ಲ ಜಿಲ್ಲೆಗಳಿಂದ ಮೃತ್ತಿಕೆಯನ್ನು ಸಂಗ್ರಹಿಸಿ ಸಕಲ ಗೌರವಗಳೊಂದಿಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಬೆಂಗಳೂರಿನ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿಂದ ಸಹ ಮೃತ್ತಿಕೆಯನ್ನು ಗೌರವಗಳೊಂದಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸುವ ಅಪರೂಪದ ಕಾರ್ಯಕ್ರಮ ಇದಾಗಿದೆ’ ಎಂದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್. ಬಚ್ಚೇಗೌಡ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂಗಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು