ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಲಾರಿ ಸದೃಢತಾ ಪ್ರಮಾಣಪತ್ರ ಇಲ್ಲವಾದರೆ ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ

ಬಿಬಿಎಂಪಿ ಮುಖ್ಯ ಆಯುಕ್ತ ಎಚ್ಚರಿಕೆ
Last Updated 19 ಏಪ್ರಿಲ್ 2022, 16:31 IST
ಅಕ್ಷರ ಗಾತ್ರ

ಬೆಂಗಳೂರು: ‘ಕಸ ಸಾಗಿಸುವ ಲಾರಿಗಳಿಗೆ ಸದೃಢತಾ ಪ್ರಮಾಣಪತ್ರ ಪಡೆಯುವುದು ಗುತ್ತಿಗೆದಾರರ ಜವಾಬ್ದಾರಿ. ಈ ಪ್ರಮಾಣಪತ್ರವಿಲ್ಲದೇ ಕಸದ ಲಾರಿಗಳನ್ನು ರಸ್ತೆಗಿಳಿಸಿದರೆ ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ ನೀಡಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕಸ ಸಾಗಿಸುವ ಗುತ್ತಿಗೆದಾರರಿಗೆ ಪಾಲಿಕೆ ಪ್ರತಿ ತಿಂಗಳೂ ಹಣ ಪಾವತಿ ಮಾಡುತ್ತದೆ. ಒಳ್ಳೆಯ ವಾಹನಗಳನ್ನು ಪೂರೈಸುವುದು, ಅದರ ಬಳಕೆಗೆ ‌ತಾಂತ್ರಿಕ ಅರ್ಹತೆಗಳನ್ನು ಕಾಯ್ದುಕೊಳ್ಳುವುದು ಗುತ್ತಿಗೆದಾರರ ಕರ್ತವ್ಯ. ಕಸದ ಲಾರಿ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದು ದುರದೃಷ್ಟಕರ. ಇಂತಹ ಘಟನೆ ಮರುಕಳಿಸದಂತೆ ತಡೆಯಲು ದುಪ್ಪಟ್ಟು ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ಕಸದ ಲಾರಿಗಳ ಎಲ್ಲ ಚಾಲಕರು ಹಿರಿಯರು ಹಾಗೂ ಅನುಭವಿಗಳು. ಅವರಿಗೆ ಇನ್ನಷ್ಟು ತರಬೇತಿಯ ಅವಶ್ಯಕತೆ ಇದ್ದರೆ, ಅದನ್ನು ಕೊಡಿಸಲು ಕ್ರಮಕೈಗೊಳ್ಳುತ್ತೇವೆ’ ಎಂದರು.

ಕಸದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟವರ ಕುಟುಂಬಗಳಿಗೆ ರಸ್ತೆ ಅಪಘಾತದ ವಿಮೆಯ ಜೊತೆಗೆ ಮಾನವೀಯ ನೆಲೆಯಿಂದಲೂ ಪರಿಹಾರ ನೀಡಲಾಗುತ್ತದೆ ಎಂದರು.

‘ನಗರದಲ್ಲಿ ವಿಶೇಷವಾಗಿ ಮೇಲ್ಸೇತುವೆಗಳಿರುವಲ್ಲಿ, ಪ್ರಮುಖ ಜಂಕ್ಷನ್‌ಗಳ ಬಳಿ ವಾಹನಗಳು ವೇಗವಾಗಿ ಚಲಿಸುತ್ತವೆ ಎಂಬ ದೂರುಗಳಿವೆ. ಇಂತಹ ಕಡೆ ಪಾದಚಾರಿಗಳು ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ. ಅವರು ನಿರ್ಭೀತಿಯಿಂದ ರಸ್ತೆ ದಾಟಲು ವ್ಯವಸ್ಥೆ ಮಾಡಬೇಕು. ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ವ್ಯವಸ್ಥೆ ಮಾಡಬೇಕು. ಅಗತ್ಯ ಇರುವ ಕಡೆರಸ್ತೆ ವಿಭಜಕಗಳ ಎತ್ತರವನ್ನು ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT