ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವ್ಹೀಲಿ’ | ಕಠಿಣ ಕ್ರಮ ಭರವಸೆ: ಕಮಿಷನರ್ ಬಿ.ದಯಾನಂದ

ನಗರ ಸಂಚಾರ ಪೊಲೀಸರಿಂದ ಚಿಕ್ಕಪೇಟೆಯಲ್ಲಿ ‘ಸಂಚಾರ ಸಂಪರ್ಕ ದಿವಸ’
Published 9 ಜೂನ್ 2024, 0:10 IST
Last Updated 9 ಜೂನ್ 2024, 0:10 IST
ಅಕ್ಷರ ಗಾತ್ರ

ಬೆಂಗಳೂರು: ‘ವ್ಹೀಲಿ’ ಮಾಡುತ್ತಿರುವ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಪಾದಚಾರಿ ಮಾರ್ಗದಲ್ಲಿ ಅತಿಕ್ರಮಣ ತೆರವು ಸೇರಿ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಸಂಚಾರ ಸಂಪರ್ಕ ಸಭೆಯಲ್ಲಿ ಪೊಲೀಸರನ್ನು ಸಾರ್ವಜನಿಕರು ಒತ್ತಾಯಿಸಿದರು.

ನಗರ ಸಂಚಾರ ಪೊಲೀಸರು ಚಿಕ್ಕಪೇಟೆಯಲ್ಲಿ ಶನಿವಾರ ಆಯೋಜಿಸಿದ್ದ ‌‘ಸಂಚಾರ ಸಂಪರ್ಕ ದಿವಸ’ ಸಭೆಯಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.

‘ಪಾದಚಾರಿ ಮಾರ್ಗ ಇರುವುದು ನಾಗರಿಕರ ಓಡಾಟಕ್ಕೆ. ಆದರೆ, ಬೀದಿ ಬದಿ ವ್ಯಾಪಾರಿಗಳು ಇದನ್ನು ಆಕ್ರಮಿಸಿಕೊಂಡು ವ್ಯಾಪಾರ–ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ವೃದ್ಧರು, ಮಕ್ಕಳು, ಮಹಿಳೆಯರು ಸೇರಿ ಸಾರ್ವಜನಿಕರು ಮುಖ್ಯರಸ್ತೆಯಲ್ಲಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು
ಸಾರ್ವಜನಿಕರೊಬ್ಬರು ದೂರಿದರು.

‘ಎಂ.ಎ. ಸಲೀಂ ಅವರು ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತರಾಗಿದ್ದ ವೇಳೆ ಮೈಸೂರು ಬ್ಯಾಂಕ್‌ ವೃತ್ತದಿಂದ ವಿಕ್ಟೋರಿಯಾ ಆಸ್ಪತ್ರೆವರೆಗಿನ ಪಾದಚಾರಿ ಮಾರ್ಗದಲ್ಲಿದ್ದ ವ್ಯಾಪಾರಿಗಳನ್ನು ತೆರವುಗೊಳಿಸಿದ್ದರು.

ಆದರೆ, ಈಗ ಮತ್ತೆ ಅಲ್ಲಿ ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡು ವ್ಯಾಪಾರ ಮಾಡಲಾಗುತ್ತಿದೆ.

ಇದರಿಂದ, ಸಾರ್ವಜನಿಕರ ಓಡಾಟ ಅನನುಕೂಲವಾಗಿದೆ. ಕೂಡಲೇ ಇದನ್ನು ನಿಯಂತ್ರಿಸಬೇಕು’ ಎಂದರು.

ರಾಜರಾಜೇಶ್ವರಿನಗರದ ಲಲಿತ್ ಕಾಸ್ಟಲ್‌ ಅಂತರರಾಷ್ಟ್ರೀಯ ಶಾಲೆಯ ಮುಂಭಾಗದಲ್ಲಿರುವ ಮುಖ್ಯ
ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ, ಇಲ್ಲೊಂದು ಝೀಬ್ರಾ ಕ್ರಾಸ್‌ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು ಎಂದು ಶಾಲೆಯ ಸಿಬ್ಬಂದಿಯೊಬ್ಬರು ಮನವಿ ಮಾಡಿದರು.

ಚಾಮರಾಜಪೇಟೆಯಲ್ಲಿ ಟಿ.ಆರ್.ಮಿಲ್‌ ಪಕ್ಕದಲ್ಲಿರುವ ಪೆಟ್ರೋಲ್‌ ಬಂಕ್‌ಗೆ ಪ್ರತಿದಿನ ಬೆಳಿಗ್ಗೆ 5.30ರಿಂದ 9.30ರವರೆಗೆ ನೂರಾರು ಖಾಸಗಿ ಬಸ್‌ಗಳು ಪೆಟ್ರೋಲ್‌ ಹಾಕಿಸಿಕೊಳ್ಳುವುದಕ್ಕೆ ಬರುತ್ತವೆ. ಇಲ್ಲಿನ
ಮುಖ್ಯರಸ್ತೆಯಲ್ಲಿ ಬಸ್‌ಗಳನ್ನು ನಿಲ್ಲಿಸುವುದರಿಂದ, ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಯೊಬ್ಬರು
ಆಗ್ರಹಿಸಿದರು.

ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಮಾತನಾಡಿ, ‘ವ್ಹೀಲಿ’ ಸವಾರರ ವಿರುದ್ಧ ಕಠಿಣ ಕ್ರಮ
ಕೈಗೊಳ್ಳಲಾಗುವುದು. ಚಾಮರಾಜ ಪೇಟೆಯಲ್ಲಿ ಖಾಸಗಿ ಬಸ್‌ಗಳಿಂದ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಸಂಚಾರ ಸಂಪರ್ಕ ಸಭೆಯಲ್ಲಿ ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ.ಎಚ್. ಕಮಿಷನರ್‌ ಬಿ. ದಯಾನಂದ ಬೆಂಗಳೂರು ಸಂಚಾರ ವಿಭಾಗ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್. ಅನುಚೇತ್ ಭಾಗವಹಿಸಿದ್ದರು
ಸಂಚಾರ ಸಂಪರ್ಕ ಸಭೆಯಲ್ಲಿ ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ.ಎಚ್. ಕಮಿಷನರ್‌ ಬಿ. ದಯಾನಂದ ಬೆಂಗಳೂರು ಸಂಚಾರ ವಿಭಾಗ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್. ಅನುಚೇತ್ ಭಾಗವಹಿಸಿದ್ದರು
ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವಿಗೆ ಮನವಿ ಖಾಸಗಿ ಬಸ್‌ಗಳಿಂದ ಆಗುತ್ತಿರುವ ಸಮಸ್ಯೆ ಪರಿಹಾರ ಭರವಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT