ಪ್ರಾಂಶುಪಾಲರಿಂದ ಕಿರುಕುಳ; ಸಿಎಸ್‌ಐ ಅಧ್ಯಕ್ಷರಿಗೆ ಪತ್ರ

7
ನರ್ಸಿಂಗ್ ವಿದ್ಯಾರ್ಥಿನಿಯರ ಪರ ಮಾತನಾಡಿದ್ದಕ್ಕೆ ಉಪನ್ಯಾಸಕಿ ಅಮಾನತು: ಆರೋಪ

ಪ್ರಾಂಶುಪಾಲರಿಂದ ಕಿರುಕುಳ; ಸಿಎಸ್‌ಐ ಅಧ್ಯಕ್ಷರಿಗೆ ಪತ್ರ

Published:
Updated:

ಬೆಂಗಳೂರು: ಶಿವಾಜಿನಗರದಲ್ಲಿರುವ ಚರ್ಚ್ ಆಫ್‌ ಸೌತ್ ಇಂಡಿಯಾದ (ಸಿಎಸ್‌ಐ) ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಲಾಗಿದ್ದು, ಆ ಸಂಬಂಧ ನೊಂದ ವಿದ್ಯಾರ್ಥಿಗಳು ಸಂಸ್ಥೆಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

‘ಪ್ರಾಂಶುಪಾಲರಾದ ಅಮೋದಾ ಸುಂದರಿ, ನಾವು ಕಾಲೇಜಿಗೆ ಸೇರಿದಾಗಿನಿಂದಲೂ ಕಿರುಕುಳ ನೀಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾರೆ. ಕಾಲೇಜಿನಿಂದ ಹೊರಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ವಿದ್ಯಾರ್ಥಿನಿಯರು ಪತ್ರದಲ್ಲಿ ದೂರಿದ್ದಾರೆ.

‘ಕಾಲೇಜಿನ ಹಾಸ್ಟೆಲ್‌ನಲ್ಲೇ ನಾವೆಲ್ಲರೂ ಉಳಿದುಕೊಂಡಿದ್ದೇವೆ. ಬಟ್ಟೆ ಸೇರಿದಂತೆ ದಿನಬಳಕೆ ವಸ್ತುಗಳ ಖರೀದಿಗಾಗಿ ಹೊರಗೆ ಹೋಗಲು ಸಹ ಪ್ರಾಂಶುಪಾಲರು ಬಿಡುತ್ತಿಲ್ಲ. ಪೋಷಕರ ಜೊತೆ ಮೊಬೈಲ್‌ನಲ್ಲೇ ಮಾತನಾಡಲು ಅವಕಾಶವನ್ನೂ ನೀಡುತ್ತಿಲ್ಲ. ಜೈಲಿನಲ್ಲಿರುವ ಕೈದಿಗಳಂತೆ ನಮ್ಮನ್ನು ನಡೆಸಿಕೊಳ್ಳುತ್ತಿದ್ದಾರೆ. ಇದರಿಂದ ಸಾಕಷ್ಟು ನೊಂದಿದ್ದು, ನ್ಯಾಯ ಒದಗಿಸಬೇಕು’ ಎಂದು  ಅವರು ಒತ್ತಾಯಿಸಿದ್ದಾರೆ.

‘ಕಾಲೇಜಿಗೆ ಪ್ರವೇಶ ಪಡೆದಾಗ, ಸಮವಸ್ತ್ರ ಹಾಗೂ ಪುಸ್ತಕಗಳಿಗಾಗಿ ₹7,000 ನೀಡಲಾಗಿತ್ತು. ಅದಕ್ಕೆ ಯಾವುದೇ ರಶೀದಿ ಕೊಟ್ಟಿಲ್ಲ. ಆ ಬಗ್ಗೆ ಪ್ರಶ್ನಿಸಿದರೆ, ಯಾವುದೇ ಉತ್ತರ ಸಿಗುತ್ತಿಲ್ಲ’ ಎಂದಿದ್ದಾರೆ.

‘ಮೊದಲ ವರ್ಷದ ನರ್ಸಿಂಗ್‌ನಲ್ಲಿ ಸುಮಾರು 30 ವಿದ್ಯಾರ್ಥಿನಿಯರಿದ್ದಾರೆ. ಎರಡು ಹಾಗೂ ಮೂರನೇ ವರ್ಷದಲ್ಲಿ ಸುಮಾರು 90 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಮೊದಲ ವರ್ಷದ ವಿದ್ಯಾರ್ಥಿನಿಯರಿಗೇ ಹೆಚ್ಚು ಕಿರುಕುಳ ನೀಡಲಾಗುತ್ತಿದೆ. ಅದರಿಂದಾಗಿ ಇಬ್ಬರೂ ವಿದ್ಯಾರ್ಥಿನಿಯರು ಆತ್ಮಹತ್ಯೆಗೂ ಯತ್ನಿಸಿದ್ದರು. ಆ ಸಂಬಂಧ ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು’ ಎಂದು ಪತ್ರದಲ್ಲಿ ಬರೆದಿದ್ದಾರೆ.

ಉಪನ್ಯಾಸಕಿ ಅಮಾನತು: ‘ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿಗಳು, ಉಪನ್ಯಾಸಕಿ ಹೀನಾ ಈಸ್ಟರ್ ಎಂಬುವರಿಗೂ ಪತ್ರ ಬರೆದಿದ್ದರು. ಅದಕ್ಕೆ ಸ್ಪಂದಿಸಿದ ಹೀನಾ, ವಿದ್ಯಾರ್ಥಿನಿಯರ ಪರ ಹೋರಾಟ ಆರಂಭಿಸಿದ್ದರು. ಅದೇ ಕಾರಣಕ್ಕೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ’ ಎಂದು ವಿದ್ಯಾರ್ಥಿನಿಯರ ಪರ ಹೋರಾಟ ಮಾಡುತ್ತಿರುವ ಜೀವನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ವರ್ಷಗಳಿಂದ ಪ್ರಾಂಶುಪಾಲರು, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದಾರೆ. ಸಂಸ್ಥೆಯ ನಿಯಮಾವಳಿಗಳನ್ನು ಧಿಕ್ಕರಿಸಿ, ಕಾಲೇಜಿನ ಸಿಬ್ಬಂದಿಯವರ ಮೇಲೂ ದಬ್ಬಾಳಿಕೆ ಮಾಡುತ್ತಿದ್ದಾರೆ. ಕಿರುಕುಳ ಸಹಿಸಿಕೊಂಡೇ ಬಂದಿದ್ದ ವಿದ್ಯಾರ್ಥಿನಿಯರು, ಈಗ ಧ್ವನಿ ಎತ್ತಿದ್ದಾರೆ. ಪ್ರಾಂಶುಪಾಲರ ವಿರುದ್ಧ ಸಿಎಸ್‌ಐ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪತ್ರದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಾಂಶುಪಾಲರಾದ ಅಮೋದಾ ಸುಂದರಿ ಲಭ್ಯರಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !