ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲು: ಕಾರಿಡಾರ್‌–4- ಹಸ್ತಾಂತರವಾಗದ ಜಮೀನು

ಕೆ–ರೈಡ್‌ಗೆ ನೈರುತ್ಯ ರೈಲ್ವೆಯಿಂದ 193 ಎಕರೆ ಭೂಮಿ; ಪ್ರಕ್ರಿಯೆ ವಿಳಂಬ
Published 13 ಜನವರಿ 2024, 20:21 IST
Last Updated 13 ಜನವರಿ 2024, 20:21 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್‌–4ಕ್ಕೆ ಟೆಂಡರ್‌ ಆಗಿದೆ. 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿದೆ. ಆದರೆ, ಜಮೀನು ಇನ್ನೂ ಹಸ್ತಾಂತರವಾಗಿಲ್ಲ.

ಹೀಲಲಿಗೆಯಿಂದ ರಾಜಾನುಕುಂಟೆಗೆ (ಕನಕ ಮಾರ್ಗ) ಸಂಪರ್ಕಿಸುವ ಈ ಕಾರಿಡಾರ್ 9 ಕಿ.ಮೀ. ಎತ್ತರಿಸಿದ ಮಾರ್ಗ ಮತ್ತು 38 ಕಿ.ಮೀ. ನೆಲಮಟ್ಟದ ಮಾರ್ಗ ಒಳಗೊಂಡಿದೆ. ನೈರುತ್ಯ ರೈಲ್ವೆಯಿಂದ ಕರ್ನಾಟಕ ರೈಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್ ಕಂಪನಿಗೆ (ಕೆ–ರೈಡ್‌) 193 ಎಕರೆ ಭೂಮಿ ಹಸ್ತಾಂತರವಾಗಬೇಕಿತ್ತು. ಈ ಪ್ರಕ್ರಿಯೆ ವಿಳಂಬದಿಂದ ಟೆಂಡರ್‌ ಕಾರ್ಯ ತಡವಾಗಿತ್ತು.

‘ಷರತ್ತಿನ ಪ್ರಕಾರ, 2023ರ ಡಿಸೆಂಬರ್‌ ಅಂತ್ಯದ ಒಳಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಬೇಕಿತ್ತು. ನಂತರದ ಎರಡು ವಾರಗಳಲ್ಲಿ ಹಸ್ತಾಂತರ ಮಾಡಲಾಗುವುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದರು. ಅದರಂತೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಎರಡು ವಾರ ಕಳೆದರೂ ಭೂಮಿ ಹಸ್ತಾಂತರವಾಗಿಲ್ಲ’ ಎಂದು ಕೆ–ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ರಾಜಾನಕುಂಟೆ, ಮುದ್ದನಹಳ್ಳಿ, ಯಲಹಂಕ (ಎಲಿವೇಟೆಡ್ ಇಂಟರ್‌ಚೇಂಜ್), ಜಕ್ಕೂರು, ಹೆಗಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ (ಇಂಟರ್‌ಚೇಂಜ್), ಕಗ್ಗದಾಸಪುರ, ಮಾರತ್ತಹಳ್ಳಿ (ಎಲಿವೇಟೆಡ್), ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಅಂಬೇಡ್ಕರ್‌ ನಗರ, ಹುಸ್ಕೂರು, ಸಿಂಗೇನ ಅಗ್ರಹಾರ, ಬೊಮ್ಮಸಂದ್ರ ಮತ್ತು ಹೀಲಲಿಗೆಯಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ನಿಲ್ದಾಣ ನಿರ್ಮಾಣಕ್ಕೆ ಪ್ರತ್ಯೇಕ ಪ್ಯಾಕೇಜ್‌ ಮಾಡಲಾಗಿದೆ.

ಎಲ್‌ ಆ್ಯಂಡ್‌ ಟಿ ಕಂಪನಿ ₹1040.51 ಕೋಟಿಗೆ ಗುತ್ತಿಗೆ ಪಡೆದಿದ್ದು, 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಆದರೆ, ಕಾಮಗಾರಿಗೆ ಶೇ 85ರಷ್ಟು ಜಮೀನು ರೈಲ್ವೆ ಹಳಿಗಳಿಗೆ ಹೊಂದಿಕೊಂಡಿದ್ದಾಗಿದೆ. ನೈರುತ್ಯ ರೈಲ್ವೆ ಭೂಮಿ ಹಸ್ತಾಂತರಿಸಬೇಕು. ಉಳಿದ ಶೇ 15ರಷ್ಟು (34 ಎಕರೆ) ಜಮೀನು ಖಾಸಗಿಯಾಗಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕೆ–ರೈಡ್‌ ಸ್ವಾಧೀನ ಪಡಿಸಿಕೊಳ್ಳಬೇಕಿದೆ.

‘ನಾಲ್ಕು ಕಾರಿಡಾರ್‌ಗಳಲ್ಲಿ 2ನೇ ಕಾರಿಡಾರ್‌ (ಚಿಕ್ಕಬಾಣಾವರ–ಬೈಯಪ್ಪನಹಳ್ಳಿ) ಕಾಮಗಾರಿ ಮಾತ್ರ ನಡೆಯುತ್ತಿದೆ. ಇತ್ತೀಚೆಗೆ ಸ್ವಲ್ಪ ವೇಗ ಪಡೆದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ತಿಂಗಳಿಗೆ ಶೇ 5ರಷ್ಟು ಕಾಮಗಾರಿಯಾದರೂ ಪೂರ್ಣಗೊಳಿಸಬೇಕು. ಕಾರಿಡಾರ್‌–2 ಟೆಂಡರ್‌ ಪಡೆದಿರುವ ಎಲ್‌ ಆ್ಯಂಡ್‌ ಟಿ ಕಂಪನಿಯೇ ಕಾರಿಡಾರ್‌–4 ಅನ್ನೂ ಪಡೆದಿದೆ. ಅವರು 2026ರ ಜೂನ್‌ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಜಮೀನು ಹಸ್ತಾಂತರಕ್ಕೆ ನೈರುತ್ಯ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ರೈಲ್ವೆ ಹೋರಾಟಗಾರ, ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಘಟನೆಯ ಸಂಸ್ಥಾಪಕ ರಾಜಕುಮಾರ್‌ ದುಗರ್‌ ಆಗ್ರಹಿಸಿದರು.

ಕುಸುಮಾ ಹರಿಪ್ರಸಾದ್‌
ಕುಸುಮಾ ಹರಿಪ್ರಸಾದ್‌

ಪರಿಶೀಲನೆಯಲ್ಲಿದೆ...

‘ಕಾರಿಡಾರ್‌–4 ನಿರ್ಮಾಣಕ್ಕೆ ಕೆ–ರೈಡ್‌ ಹೆಚ್ಚುವರಿ ಜಮೀನಿನ ಪ್ರಸ್ತಾವನೆ ಇಟ್ಟಿದೆ. ಮತ್ತೆ ಅಲೈನ್‌ಮೆಂಟ್‌ ಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ವರದಿ ನೀಡಿದ್ದು ಪರಿಶೀಲನೆ ನಡೆದಿದೆ. ಶೀಘ್ರದಲ್ಲಿ ನೈರುತ್ಯ ರೈಲ್ವೆಯಿಂದ ಕೆ–ರೈಡ್‌ಗೆ ಜಮೀನು ಹಸ್ತಾಂತರಿಸಲಾಗುವುದು’ ಎಂದು ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT