ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಪನಗರ ವರ್ತುಲ ರಸ್ತೆ: ₹4,750 ಕೋಟಿ ಕಾಮಗಾರಿಗೆ ಟೆಂಡರ್

Published : 11 ಸೆಪ್ಟೆಂಬರ್ 2024, 20:40 IST
Last Updated : 11 ಸೆಪ್ಟೆಂಬರ್ 2024, 20:40 IST
ಫಾಲೋ ಮಾಡಿ
Comments

ನವದೆಹಲಿ: ಬೆಂಗಳೂರಿನ ಉಪನಗರ ವರ್ತುಲ ರಸ್ತೆ ಯೋಜನೆಯ (ಎಸ್‌ಟಿಆರ್‌ಆರ್) ಐದು ಪ್ಯಾಕೇಜ್‌ಗಳ (144 ಕಿ.ಮೀ) ₹4,750 ಕೋಟಿಯ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೆಂಡರ್ ಆಹ್ವಾನಿಸಿದೆ. 

ನಾಲ್ಕರಿಂದ ಆರು ಪಥಗಳ ಈ ಯೋಜನೆಯು ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ ಮತ್ತು ಮಾಗಡಿ ಸೇರಿದಂತೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಉಪನಗರ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇದು ತಮಿಳುನಾಡಿನ ಹೊಸೂರನ್ನೂ ಸಂಪರ್ಕಿಸುತ್ತದೆ. ಇದೀಗ ಪಶ್ಚಿಮ ಭಾಗದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ ‍‍‍‍ಪ್ರಕ್ರಿಯೆ ಐದಾರು ವರ್ಷಗಳಲ್ಲಿ ನನೆಗುದಿಗೆ ಬಿದ್ದಿತ್ತು.

’ಟೆಂಡರ್‌ ಪ್ರಕ್ರಿಯೆಯನ್ನು ಅಕ್ಟೋಬರ್ ಅಂತ್ಯದೊಳಗೆ ಅಂತಿಮಗೊಳಿಸಲಾಗುತ್ತದೆ. ಕಾಮಗಾರಿಗಳು 2026–27ರಲ್ಲಿ ಪೂರ್ಣಗೊಳ್ಳಲಿವೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. 

ಈ ಯೋಜನೆಯಡಿ ₹17 ಸಾವಿರ ಕೋಟಿ ಮೊತ್ತದಲ್ಲಿ 285 ಕಿ.ಮೀ. ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ದಾಬಸ್‌ಪೇಟೆ–ದೊಡ್ಡಬಳ್ಳಾಪುರ ನಡುವಿನ ಪ್ಯಾಕೇಜ್‌ 1ರ (42 ಕಿ.ಮೀ), ದೊಡ್ಡಬಳ್ಳಾಪುರ–ಹೊಸಕೋಟೆ ನಡುವಿನ ಕಾಮಗಾರಿ (37 ಕಿ.ಮೀ) ಈಗಾಗಲೇ ಪೂರ್ಣಗೊಂಡಿದೆ. ಕರ್ನಾಟಕ ಹಾಗೂ ತಮಿಳುನಾಡು ಗಡಿಯ 20 ಕಿ.ಮೀ. ಕಾಮಗಾರಿ ಶೇ 42ರಷ್ಟು ಪ್ರಗತಿ ಸಾಧಿಸಿದೆ. ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇಯ 6 ಕಿ.ಮೀ ಕಾಮಗಾರಿ ಬಹುತೇಕ ಮುಗಿದಿದೆ. 

30 ದಿನಗಳಲ್ಲಿ ಅನುಮೋದನೆ: 4-5 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗೆ ಚಾಲನೆ ನೀಡಬೇಕೆಂದು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್‌.ಮಂಜುನಾಥ್ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಸಂಸತ್‌ ಅಧಿವೇಶನದ ಸಂದರ್ಭದಲ್ಲಿ ಮನವಿ ಮಾಡಿದ್ದರು. 45 ದಿನಗಳಲ್ಲಿ ಅನುಮೋದನೆ ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು. ಸಚಿವರು 30 ದಿನಗಳಲ್ಲೇ ಅನುಮೋದನೆ ನೀಡಿದ್ದಾರೆ ಎಂದು ಮಂಜುನಾಥ್ ಸಂತಸ ವ್ಯಕ್ತಪಡಿಸಿದರು. 

ಈ ಯೋಜನೆಯು ಬೆಂಗಳೂರಿನ ಸುತ್ತಮುತ್ತಲಿನ ಪಟ್ಟಣಗಳಿಗೆ ಗಣನೀಯ ಪ್ರಯೋಜನ ನೀಡುತ್ತದೆ. ಇದು ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ. ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ದೀರ್ಘಕಾಲಿಕ ಪರಿಹಾರ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಐದು ಪ್ಯಾಕೇಜ್‌ಗಳು ಯಾವುವು? 

  • ಮೊದಲ ಪ್ಯಾಕೇಜ್‌: ನೆಲಮಂಗಲ ತಾಲ್ಲೂಕಿನ ಓಬಳಾಪುರದಿಂದ ಮಾಗಡಿ ತಾಲ್ಲೂಕಿನ ಸೋಮಕ್ಕನಮುತ್ತದ ವರೆಗೆ. ಒಟ್ಟು 46.30 ಕಿ.ಮೀ. ಟೆಂಡರ್ ಮೊತ್ತ ₹1,419 ಕೋಟಿ. 

  • ಎರಡನೇ ಪ್ಯಾಕೇಜ್‌: ಸೋಮಕ್ಕನಮುತ್ತದಿಮದ ಕುಣಿಗಲ್‌ವರೆಗೆ. 32.7 ಕಿ.ಮೀ. ಟೆಂಡರ್‌ ಮೊತ್ತ ₹825 ಕೋಟಿ.

  • ಮೂರನೇ‍ ಪ್ಯಾಕೇಜ್‌: ಕುಣಿಗಲ್‌ನಿಂದ ಕನಕಪುರ ತಾಲ್ಲೂಕಿನ ತಟ್ಟೆಕೆರೆ ವರೆಗೆ 33.64 ಕಿ.ಮೀ. ಕಾಮಗಾರಿ. ಟೆಂಡ‌ರ್ ಮೊತ್ತ ₹978 ಕಿ.ಮೀ. 

  • ನಾಲ್ಕನೇ ಪ್ಯಾಕೇಜ್‌: ತಟ್ಟೆಕೆರೆಯಿಂದ ಆನೇಕಲ್‌ ತಾಲ್ಲೂಕಿನ ಬಗ್ಗನದೊಡ್ಡಿವರೆಗೆ 8.34 ಕಿ.ಮೀ. ಕಾಮಗಾರಿ. ಟೆಂಡರ್ ಮೊತ್ತ ₹1,018 ಕೋಟಿ. 

  • ಐದನೇ ಪ್ಯಾಕೇಜ್‌: ಬಗ್ಗನದೊಡ್ಡಿಯಿಂದ ತಮಿಳುನಾಡಿನ ಹೊಸೂರು ತಾಲ್ಲೂಕಿನ ಎಸ್‌.ಮುದುಗದಪಲ್ಲಿವರೆಗೆ 23.27 ಕಿ.ಮೀ. ಕಾಮಗಾರಿ. ಟೆಂಡರ್‌ ಮೊತ್ತ ₹507 ಕೋಟಿ.

ರಾಷ್ಟ್ರೀಯ ಉದ್ಯಾನದಲ್ಲಿ ಎತ್ತರಿಸಿದ ಮಾರ್ಗ

ನಾಲ್ಕನೇ ಪ್ಯಾಕೇಜ್‌ನ ರಸ್ತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಮೂಲಕ ಹಾದು ಹೋಗಲಿದೆ. ಇಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸಲಾಗುತ್ತದೆ. ಇದಕ್ಕೆ ಅರಣ್ಯ ಅನುಮೋದನೆ ಪಡೆಯಬೇಕಿದೆ. ಕಾಡು ಪ್ರಾಣಿಗಳಿಗೆ ತೊಂದರೆಯಾಗದಂತೆ ಉಪಕ್ರಮಗಳನ್ನು ಕೈಗೊಂಡು ಈ ರಸ್ತೆ ನಿರ್ಮಿಸಲಾಗುತ್ತದೆ. ಪರಿಸರದ ಮೇಲಿನ ಹಾನಿ ಕಡಿಮೆ ಮಾಡಲು ರಾತ್ರಿ ಹೊತ್ತಿನಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು. 

ಯೋಜನೆಯ ಹಾದಿ

  • 2005ರಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು. 

  • 2017ರಲ್ಲಿ ಈ ಯೋಜನೆಯನ್ನು ಭಾರತ್‌ ಮಾಲಾ ಪರಿಯೋಜನಾದಡಿ ಸೇರ್ಪಡೆ ಮಾಡಲಾಗಿತ್ತು. 

  • ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜೂನ್‌ನಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. 

  • ಮೊದಲ ಹಂತದ 80 ಕಿ.ಮೀ.ಗಳ ಕಾಮಗಾರಿಯನ್ನು ಮೋದಿ ಅವರು 2024ರ ಮಾರ್ಚ್‌ನಲ್ಲಿ ಉದ್ಘಾಟಿಸಿದ್ದರು. ಇದರಲ್ಲಿ ದಾಬಸ್‌ಪೇಟೆ–ದೊಡ್ಡಬಳ್ಳಾಪುರ ಬೈಪಾಸ್‌ (₹1,438 ಕೋಟಿ) ಹಾಗೂ ದೊಡ್ಡಬಳ್ಳಾಪುರ ಬೈಪಾಸ್‌–ಹೊಸಕೋಟೆ (₹1,317 ಕೋಟಿ) ಕಾಮಗಾರಿಗಳು ಸೇರಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT