ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಧೋಬಿ ಘಾಟ್’: ನೀರಿನ ಕೊರತೆ, ಕಾರ್ಮಿಕರಿಗೆ ಸಂಕಷ್ಟ

* ಅಂತರ್ಜಲ ಕುಸಿತ * ಬತ್ತುತ್ತಿರುವ ಕೊಳವೆ ಬಾವಿಗಳು * ಕಾರ್ಮಿಕರಿಗಿಲ್ಲ ಕೆಲಸ
Published 13 ಮಾರ್ಚ್ 2024, 23:41 IST
Last Updated 13 ಮಾರ್ಚ್ 2024, 23:41 IST
ಅಕ್ಷರ ಗಾತ್ರ

ಬೆಂಗಳೂರು: ‘ದಿನಕ್ಕೆ ₹1,500ದಿಂದ ₹2,000 ದುಡಿಯುತ್ತಿದ್ದ ಜಾಗದಲ್ಲಿ, ಇದೀಗ ₹500 ಸಹ ಕೈಗೆ ಸಿಗುತ್ತಿಲ್ಲ. ಕೊಳವೆ ಬಾವಿಗಳು ಬತ್ತುತ್ತಿದ್ದು, ಹೆಚ್ಚು ಬಟ್ಟೆಗಳಿದ್ದರೂ ಸ್ವಚ್ಚಗೊಳಿಸಲು ಅಗತ್ಯವಿರುವಷ್ಟು ನೀರಿಲ್ಲ. ಸದಾ ನೀರಿನಿಂದ ಹಸಿಯಾಗಿರುತ್ತಿದ್ದ ನಮ್ಮ ಸ್ಥಳ, ಇದೀಗ ಕ್ರಮೇಣ ಒಣಗುತ್ತಿದೆ. ಬೇಸಿಗೆ ಮುಗಿಯುವವರೆಗೂ ನಮಗೆ ಕಷ್ಟಗಳು ತಪ್ಪಿದ್ದಲ್ಲ’

ನಗರದಲ್ಲಿ ಧೋಬಿಘಾಟ್‌ಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕಾರ್ಮಿಕರ ಮಾತುಗಳಿವು.

ಬೇಸಿಗೆ ಆರಂಭವಾಗುತ್ತಿದ್ದಂತೆ ಧೋಬಿಘಾಟ್‌ಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದ್ದು, ಬಟ್ಟೆಗಳ ಕೊಳೆ ತೊಳೆಯುವ ಕಾರ್ಮಿಕರ ದುಡಿಮೆಗೂ ಪೆಟ್ಟು ಬಿದ್ದಿದೆ. ರಾಜಾಜಿನಗರ, ಮಲ್ಲೇಶ್ವರ, ಶ್ರೀನಗರ, ನಾಗರಭಾವಿ, ಕುಮಾರಸ್ವಾಮಿ ಲೇಔಟ್, ಹಲಸೂರು, ದೊಡ್ಡ ಬಿದರಕಲ್ಲು ಹಾಗೂ ಲಗ್ಗೆರೆ ಸೇರಿದಂತೆ ನಗರದ 30ಕ್ಕೂ ಹೆಚ್ಚು ಕಡೆಗಳಲ್ಲಿ ಧೋಬಿಘಾಟ್‌ಗಳಿವೆ. ಎಲ್ಲ ಕಡೆಯೂ ನೀರಿನ ಕೊರತೆ ಎದುರಾಗಿದೆ.

ಬಹುತೇಕ ಧೋಬಿ ಘಾಟ್‌ಗಳಲ್ಲಿರುವ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಬಟ್ಟೆ ಸ್ವಚ್ಛಗೊಳಿಸುವ ಪ್ರಮಾಣವೂ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಮಾರ್ಚ್‌ ಅಂತ್ಯದಿಂದ ಲಭ್ಯವಾಗುವ ನೀರಿನ ಪ್ರಮಾಣ ಕ್ಷೀಣಿಸುವ ಸಾಧ್ಯತೆ ಇದ್ದು, ಕೆಲ ಧೋಬಿ ಘಾಟ್‌ಗಳು ಬಾಗಿಲು ಬಂದ್ ಮಾಡುವ ಪರಿಸ್ಥಿತಿಯೂ ಬರಬಹುದು ಎಂದು ಅಂದಾಜಿಸಲಾಗುತ್ತಿದೆ.

ಕೆಲವು ಕಡೆ ವಾಷಿಂಗ್‌ ಮಷಿನ್‌ ತರಹದ ದೊಡ್ಡ ಯಂತ್ರಗಳನ್ನು ಬಳಸಿ ಬಟ್ಟೆ ಸ್ವಚ್ಛಗೊಳಿಸುತ್ತಿದ್ದರೆ, ಇನ್ನೂ ಕೆಲವು ಕಡೆ ಕೈಯಿಂದಲೂ ಕಾರ್ಮಿಕರು ಬಟ್ಟೆ ತೊಳೆಯುತ್ತಿದ್ದಾರೆ. ಇದೀಗ, ಎರಡೂ ರೀತಿಯ ಕೆಲಸಕ್ಕೆ ನೀರಿನ ಕೊರತೆ ಎದುರಾಗಿದೆ. ಟ್ಯಾಂಕರ್ ನೀರು ಖರೀದಿಸಿ ಕೆಲಸ ಮಾಡುವಷ್ಟು ಆರ್ಥಿಕ ಶಕ್ತಿ ಕಾರ್ಮಿಕರಲ್ಲಿಲ್ಲ.

ಕೊಳವೆ ಬಾವಿಗಳೇ ಆಧಾರ: ನಗರದ ಬಹುತೇಕ ಧೋಬಿ ಘಾಟ್‌ಗಳು ಕೊಳವೆ ಬಾವಿ ನೀರು ನಂಬಿಕೊಂಡು ಕಾರ್ಯನಿರ್ವಹಿಸುತ್ತಿವೆ. ಕೆಲ ಧೋಬಿ ಘಾಟ್‌ಗಳಲ್ಲಿ ತೆರೆದ ಬಾವಿಗಳಿದ್ದು, ಅಲ್ಲಿ ನೀರಿನ ಲಭ್ಯತೆ ತೀರಾ ಕಡಿಮೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಳವೆ ಬಾವಿಗಳಲ್ಲೂ ನೀರಿನ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ.

‘ಧೋಬಿ ಘಾಟ್‌ ಕೆಲಸಗಳಿಗಾಗಿಯೇ ನಾಲ್ಕು ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಅದರಲ್ಲಿ ಮೂರು ಬಂದ್ ಆಗಿವೆ. ಒಂದರಲ್ಲಿ ಮಾತ್ರ ನೀರು ಇದೆ. ಅದರಲ್ಲೂ ಕಡಿಮೆಯಾಗಿದೆ. ಇರುವ ನೀರನ್ನೇ ಮಿತವಾಗಿ ಬಳಸಿ, ಬಟ್ಟೆಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ರಾಜಾಜಿನಗರ ಧೋಬಿಘಾಟ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಹೇಳಿದರು.

ಕಾರ್ಮಿಕರ ಸಂಖ್ಯೆ ಇಳಿಕೆ: ನೀರಿನ ಕೊರತೆ ಆರಂಭವಾದಾಗಿನಿಂದ, ಬಟ್ಟೆ ತೊಳೆಯುವ ಪ್ರಮಾಣವೂ ಕಡಿಮೆಯಾಗಿದೆ. ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದೆ.

‘ನಮ್ಮ ಧೋಬಿಘಾಟ್‌ನಲ್ಲಿ 35ರಿಂದ 40 ಕಾರ್ಮಿಕರಿದ್ದರು. ನೀರಿನ ಕೊರತೆ ಇರುವುದರಿಂದ, ಬಟ್ಟೆ ಸ್ವಚ್ಛತೆ ಕೆಲಸ ಕಡಿಮೆಯಾಗಿದೆ. ಹೀಗಾಗಿ, ಸದ್ಯ 10 ಮಂದಿ ಕಾರ್ಮಿಕರು ಇಲ್ಲಿದ್ದಾರೆ. ನೀರಿನ ಲಭ್ಯತೆ ನೋಡಿಕೊಂಡು ಪಾಳಿ ಪ್ರಕಾರ ಕೆಲಸ ಮಾಡುತ್ತಿದ್ದಾರೆ’ ಎಂದು ಮಹೇಶ್ ಹೇಳಿದರು.

‘ಧೋಬಿ ಘಾಟ್‌ನಿಂದಲೇ ನಾವು ಒಂದು ಹೊತ್ತು ಊಟ ಮಾಡುತ್ತಿದ್ದೇವೆ. ಇದೇ ನಮ್ಮ ಬದುಕಿಗೆ ಆಸರೆ. ನೀರಿನ ಕೊರತೆ ಇರುವುದರಿಂದ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಅಳಲು ತೋಡಿಕೊಂಡರು.

ಕೊಳವೆ ಬಾವಿ ಕೊರೆಸಲು ಮನವಿ: ‘ಎಲ್ಲ ಧೋಬಿ ಘಾಟ್‌ಗಳಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಉಂಟಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು’ ಎಂದು ಕಾರ್ಮಿಕರು ಮನವಿ ಮಾಡುತ್ತಿದ್ದಾರೆ.

‘ಧೋಬಿ ಘಾಟ್‌ ಸಮಸ್ಯೆಗಳ ಬಗ್ಗೆ ಪ್ರತಿ ವರ್ಷವೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಕೆಲ ಬೇಡಿಕೆಗಳು ಈಡೇರುತ್ತಿವೆ. ಉಳಿದ ಬೇಡಿಕೆ ಈಡೇರಿಕೆಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ’ ಎಂದು ಕಾರ್ಮಿಕರು ದೂರಿದರು.

ದೋಬಿಘಾಟ್‌ನಲ್ಲಿ ಒಣಗಲು ಹಾಕಿರುವ ಬಟ್ಟೆಗಳು – ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.
ದೋಬಿಘಾಟ್‌ನಲ್ಲಿ ಒಣಗಲು ಹಾಕಿರುವ ಬಟ್ಟೆಗಳು – ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.
ನಗರದಲ್ಲಿವೆ 30ಕ್ಕೂ ಹೆಚ್ಚು ಧೋಬಿ ಘಾಟ್‌ಗಳು ನೀರಿಗೆ ಕೊಳವೆ ಬಾವಿಗಳೇ ಆಧಾರ ಏಪ್ರಿಲ್, ಮೇನಲ್ಲಿ ಮತ್ತಷ್ಟು ಸಮಸ್ಯೆ
ಧೋಬಿ ಘಾಟ್‌ನಲ್ಲಿ ದುಡಿಯುವವರು ಏನಂತಾರೆ?
ಈ ಹಿಂದೆ ಇಡೀ ದಿನ ಕೆಲಸ ಇರುತ್ತಿತ್ತು. ಈಗ ನೀರು ಇಲ್ಲ. ಕೆಲಸವೂ ಇಲ್ಲ. ಆಸ್ಪತ್ರೆ ವಸತಿಗೃಹಗಳಿಂದ ಹಲವರು ಹೆಚ್ಚು ಬಟ್ಟೆಗಳನ್ನು ತಂದು ಕೊಡುತ್ತಿದ್ದಾರೆ. ಆದರೆ ಅವುಗಳನ್ನು ಸ್ವಚ್ಛಗೊಳಿಸಲು ನೀರು ಕಡಿಮೆ ಇದೆ. ಲಭ್ಯವಿರುವ ನೀರಿನಲ್ಲಿ ಸರದಿ ಪ್ರಕಾರ ಸ್ವಲ್ಪ ಬಟ್ಟೆಗಳನ್ನಷ್ಟೇ ಸ್ವಚ್ಛಗೊಳಿಸಲಾಗುತ್ತಿದ್ದು ದುಡಿಮೆ ತೀರಾ ಕಡಿಮೆಯಾಗಿದೆ. – ಸಿದ್ದರಾಜು ರಾಜಾಜಿನಗರ ಧೋಬಿ ಘಾಟ್ ಕಾರ್ಮಿಕ ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಬಾರಿ ಸ್ವಲ್ಪ ಹೆಚ್ಚಿದೆ. ನಾವೆಲ್ಲರೂ ಈ ವೃತ್ತಿಯನ್ನೇ ನಂಬಿ ಜೀವನ ಕಟ್ಟಿಕೊಂಡಿದ್ದೇವೆ. ನೀರಿಲ್ಲದೇ ಧೋಬಿ ಘಾಟ್ ಬಂದ್ ಆಗುತ್ತದೆ. ಜೀವನ ಕಷ್ಟವಾಗುತ್ತದೆ. ಕಾರ್ಮಿಕರ ಬದುಕು ಬೀದಿಗೆ ಬರುತ್ತದೆ. ನೀರಿನ ಕೊರತೆ ನೀಗಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ – ಮಹೇಶ್ ರಾಜಾಜಿನಗರ ಧೋಬಿ ಘಾಟ್‌ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ
‘ಆಸ್ಪತ್ರೆ ವಸತಿಗೃಹ ಟೆಂಟ್‌ಹೌಸ್‌ಗೂ ತಟ್ಟಿದ ಬಿಸಿ’
ನಗರದ ಹಲವು ಆಸ್ಪತ್ರೆಗಳು ವಸತಿಗೃಹಗಳು ಹೋಟೆಲ್‌ಗಳು ಟೆಂಟ್‌ಹೌಸ್‌ಗಳ ಬಟ್ಟೆಗಳನ್ನು ಧೋಬಿಘಾಟ್‌ನಲ್ಲಿ ಸ್ವಚ್ಛಗೊಳಿಸಲಾಗುತ್ತಿದೆ. ಲಾಂಡ್ರಿ ಬಟ್ಟೆಗಳ ಸ್ವಚ್ಛತೆಗೂ ಧೋಬಿ ಘಾಟ್‌ ಅವಲಂಬಿಸಲಾಗುತ್ತಿದೆ. ಈಗ ನೀರಿನ ಕೊರತೆಯಿಂದಾಗಿ ಇವರೆಲ್ಲರಿಗೂ ತೊಂದರೆಯಾಗಿದೆ.  ‘ಈ ಹಿಂದೆ ಬೆಳಿಗ್ಗೆ ಬಟ್ಟೆಗಳನ್ನು ತಂದುಕೊಟ್ಟರೆ ಸ್ವಚ್ಛಗೊಳಿಸಿ ಮಧ್ಯಾಹ್ನ ವಾಪಸು ಕೊಡುತ್ತಿದ್ದರು. ಆದರೆ ಈಗ ನೀರಿಲ್ಲ. ಲಭ್ಯವಿರುವ ನೀರಿನಲ್ಲಿ ಸ್ವಲ್ಪ ಸ್ವಲ್ಪ ಬಟ್ಟೆ ಸ್ವಚ್ಛಗೊಳಿಸುತ್ತಿದ್ದಾರೆ. ಎರಡು ಅಥವಾ ಮೂರು ದಿನ ಬಿಟ್ಟು ಬಟ್ಟೆ ಸಿಗುತ್ತಿದೆ. ಇದು ನಮ್ಮ ದುಡಿಮೆ ಮೇಲೂ ಪರಿಣಾಮ ಬೀರಿದೆ’ ಎಂದು ಮೆಜೆಸ್ಟಿಕ್‌ನ ವಸತಿಗೃಹವೊಂದರ ಕೆಲಸಗಾರ ಗಂಗಾಧರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT