ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯಕ್ಕೆ ಪಾವತಿಸುವ ಪರಿಹಾರವೆಷ್ಟು: ಗ್ರಾಫೈಟ್‌ ಇಂಡಿಯಾಗೆ ಸುಪ್ರೀಂ ಪ್ರಶ್ನೆ

ತಕ್ಕ ಬೆಲೆ ತೆರಲು ಸೂಚನೆ
Last Updated 23 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ನವದೆಹಲಿ/ ಬೆಂಗಳೂರು: ಗ್ರಾಫೈಟ್‌ ಇಂಡಿಯಾ ಲಿಮಿಟೆಡ್‌ (ಜಿಐಎಲ್‌) ಕಂಪನಿ ಬೆಂಗಳೂರಿನ ವೈಟ್‌ಫೀಲ್ಡ್‌ ಘಟಕದಲ್ಲಿ ಮಾಡಿದ ಮಾಲಿನ್ಯಕ್ಕೆ ತಕ್ಕ ಬೆಲೆ ತೆರಬೇಕು. ಎಷ್ಟು ಮೊತ್ತ ಪಾವತಿಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತಾಕೀತು ಮಾಡಿದೆ. ಈ ಸೂಚನೆಯ ಬೆನ್ನಲ್ಲೇ ಕಂಪನಿಯು ನವೆಂಬರ್‌ ಅಂತ್ಯದಲ್ಲಿ ತನ್ನ ಘಟಕವನ್ನು ಮುಚ್ಚಲಿದೆ ಎಂದು ಜಿಐಎಲ್‌ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.

ಕೋರ್ಟ್‌ ತೀರ್ಮಾನ ಕೇಳಿ ವೈಟ್‌ಫೀಲ್ಡ್‌ ಸುತ್ತಮುತ್ತಲಿನ ನಾಗರಿಕರು ನಿಟ್ಟುಸಿರುಬಿಟ್ಟಿದ್ದಾರೆ. ಪ್ರತಿದಿನ ಕಪ್ಪು ದೂಳಿನ ಕಣಗಳನ್ನು ಉಸಿರಾಡಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದು ಹಾಗೂ ವ್ಯಾಪಕವಾಗಿ ವಾಯುಮಾಲಿನ್ಯ ಉಂಟಾಗುತ್ತಿರುವುದಕ್ಕೆ ಇನ್ನಾದರೂ ಪೂರ್ಣವಿರಾಮ ಬೀಳಲಿದೆ ಎಂದು ನಿರಾಳಭಾವ ವ್ಯಕ್ತಪಡಿಸಿದ್ದಾರೆ. ಸುದೀರ್ಘ ಕಾನೂನು ಹೋರಾಟವೊಂದು ಜನಪರ ನಿಲುವು ತಳೆಯುವಲ್ಲಿ ಅಂತ್ಯಗೊಂಡಿರುವುದು ಸ್ವಾಗತಾರ್ಹ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯ ಸದಸ್ಯರು ಪ್ರತಿಕ್ರಿಯಿಸಿದರು.

ನೀಡ್ಲ್‌ ಪೆಟ್ರೋಲಿಯಂ ಕೋಕ್‌ ಅನ್ನು (ಪೆಟ್‌ ಕೋಕ್‌– ಪೆಟ್ರೋಲಿಯಂ ತೈಲಗಳನ್ನು ತೆಗೆಯುವಾಗ ತಳದಲ್ಲಿ ಉಳಿಯುವ ಕಿಟ್ಟದಂಥ ಪದಾರ್ಥ) ಇಂಧನವಾಗಿ ಬಳಸುವುದರಿಂದಇಲ್ಲಿ ಕಪ್ಪು ದೂಳಿನ ಕಣಗಳನ್ನೊಳಗೊಂಡ ಹೊಗೆ ಹರಡುತ್ತಿದೆ. ಆದ್ದರಿಂದ ಅದರ ಬಳಕೆಯನ್ನು ನಿಲ್ಲಿಸಬೇಕು ಎಂದು ಕೋರ್ಟ್‌ ಹೇಳಿತ್ತು. ಅದು ಮಾಲಿನ್ಯಕಾರಕವಲ್ಲ ಎಂದು ಕಂಪನಿ ಸಮರ್ಥಿಸುತ್ತಲೂ ಇತ್ತು.

2012–13ರಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಘಟಕವನ್ನು ಮುಚ್ಚುವಂತೆ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ತಡೆಯಾಜ್ಞೆ ತಂದ ಕಂಪನಿ, ತನ್ನ ಕಾರ್ಯಾಚರಣೆ ಮುಂದುವರಿಸಿತ್ತು. ವೈಟ್‌ಫೀಲ್ಡ್‌ ರೈಸಿಂಗ್‌ ಸೇರಿದಂತೆ ವಿವಿಧ ಸರ್ಕಾರೇತರ ಸಂಘಟನೆಗಳು ರಾಷ್ಟ್ರೀಯ ಹಸಿರುಪೀಠದ ಮೊರೆ ಹೋಗಿದ್ದವು. ಇಲ್ಲಿಯೂ ಕಂಪನಿ ಮೇಲುಗೈ ಸಾಧಿಸಿತ್ತು. 2016ರಲ್ಲಿ ಮತ್ತೊಮ್ಮೆ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸಿ ಘಟಕ ಮುಚ್ಚಲು ಆದೇಶಿಸಿತ್ತು. ಆಗಲೂ ತಡೆಯಾಜ್ಞೆ ತಂದು ಉತ್ಪಾದನೆ ಮುಂದುವರಿಸಿತ್ತು. ಹೀಗೆ ದೀರ್ಘಕಾಲದ ಕಾನೂನು ತಿಕ್ಕಾಟ ಮತ್ತು ಜನರ ಆಕ್ರೋಶವನ್ನು ಕಂಪನಿ ಎದುರಿಸಿತ್ತು.

ಮಂಗಳವಾರ ನಡೆದ ವಿಚಾರಣೆಯಲ್ಲಿ, ಪೆಟ್‌ಕೋಕ್‌ ಬಳಕೆ,ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರವು ಈ ಕಂಪನಿಯು ಮಾಡುತ್ತಿರುವ ಮಾಲಿನ್ಯದ ಬಗ್ಗೆ ನೀಡಿದ ವರದಿಯ ಅಂಶಗಳು ಎಲ್ಲವನ್ನೂ ಗಮನಿಸಿದ ಕೋರ್ಟ್‌, ‘ಮಾಲಿನ್ಯಕಾರಕರಾದ ನೀವು ಅಲ್ಲಿ ಉಂಟಾದ ನಷ್ಟ, ಪರಿಸರ, ಆರೋಗ್ಯ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಒದಗಿಸಬೇಕು. ಅದರಂತೆ ಎಷ್ಟು ಮೊತ್ತ ಪಾವತಿಸುತ್ತೀರಿ’ ಎಂದು ಪ್ರಶ್ನಿಸಿತು.

ಜಿಐಎಲ್‌ ಪರ ಹಾಜರಿದ್ದ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಪ್ರತಿಕ್ರಿಯಿಸಿ, ನಾವು ಸುಪ್ರೀಂ ಕೋರ್ಟ್‌ ಜತೆ ಹೋರಾಡಲು ಬಯಸುವುದಿಲ್ಲ. ಕಂಪನಿಯ ಬೆಂಗಳೂರು ಘಟಕವನ್ನು ನವೆಂಬರ್‌ ಅಂತ್ಯಕ್ಕೆ ಪೂರ್ಣವಾಗಿ ಮುಚ್ಚಲಾಗುವುದು. ಮಾಲಿನ್ಯ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಮೌಲ್ಯ ಪಾವತಿಸಲು ಕಂ‍ಪನಿಯಿಂದ ಸೂಚನೆ ಪಡೆದು ತಿಳಿಸುವುದಾಗಿ ಹೇಳಿದರು.

ವಿಚಾರಣೆಯನ್ನು ಅಕ್ಟೋಬರ್‌ 29ಕ್ಕೆ ಕೋರ್ಟ್‌ ನಿಗದಿಪಡಿಸಿದೆ.

ಬೆಂಗಳೂರಿನಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಏನೂ ಕ್ರಮ ಕೈಗೊಂಡಿಲ್ಲ ಎಂದ ಕೋರ್ಟ್‌ ಮಾಲಿನ್ಯ ನಿಯಂತ್ರಣ ಮಂಡಳಿಯನ್ನೂ ಇದೇ ವೇಳೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

‘ಹೆಚ್ಚುತ್ತಿರುವ ವಲಸಿಗರ ಸಂಖ್ಯೆ ಹಾಗೂ ಅತಿಯಾದ ನಿರ್ಮಾಣ ಕಾಮಗಾರಿಗಳು ಮಾಲಿನ್ಯಕ್ಕೆ ಕಾರಣವಾಗಿವೆ’ ಎಂಬ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಪೀಠವು, ‘ಪರಿಸರ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳದ ನೀವು ಇದಕ್ಕಾಗಿ ವಲಸಿಗರನ್ನು ದೂಷಿಸುವುದು ಎಷ್ಟು ಸೂಕ್ತ’ ಎಂದು ಪ್ರಶ್ನಿಸಿತು.

******

ನೀವು ಬೆಂಗಳೂರಿಗೆ ಹೋಗಿದ್ದೀರಾ? ಅಲ್ಲಿ ಎಷ್ಟು ಮಾಲಿನ್ಯವಿದೆ ನೋಡಿ. ಮಾಲಿನ್ಯ ನಿಯಂತ್ರಣ ಮಂಡಳಿ ಏನು ಮಾಡುತ್ತಿದೆ? ನೀವು ಆ ನಗರವನ್ನು ಹಾಳು ಮಾಡುತ್ತಿದ್ದೀರಿ.

– ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಮತ್ತು ದೀಪಕ್‌ ಗುಪ್ತಾ (ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರಿಗೆ ಹೇಳಿದ್ದು)

ನಾವು 2012 ಮತ್ತು 2016ರಲ್ಲಿ ಎರಡು ಬಾರಿ ಆ ಘಟಕವನ್ನು ಮುಚ್ಚಲು ಆದೇಶಿಸಿದ್ದೆವು. ಕಂಪನಿಯವರು ತಡೆಯಾಜ್ಞೆ ತಂದರು. ಈಗಿನ ಪರಿಸ್ಥಿತಿಯ ಬಗೆಗೂ ಸುಪ್ರೀಂ ಕೋರ್ಟ್‌ಗೆ ವರದಿ ಕೊಟ್ಟಿದ್ದೇವೆ. ಅದರ ಆಧಾರದಲ್ಲಿಯೇ ಕೋರ್ಟ್‌ ತೀರ್ಪು ನೀಡಿದೆ.

– ಲಕ್ಷ್ಮಣ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

ಕಾರ್ಖಾನೆಯನ್ನು ಮುಚ್ಚುವಂತೆ ಇಲ್ಲವೆ ವೈಟ್‌ಫೀಲ್ಡ್ ವಸತಿ ಪ್ರದೇಶದಿಂದ ಅದನ್ನು ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದೆ. ಇಂದಿನ ಕೋರ್ಟ್ ತೀರ್ಪು ಸ್ವಾಗತಾರ್ಹ.

– ಪಿ.ಸಿ.ಮೋಹನ್‌, ಸಂಸದ

ನಾವು 2012 ಮತ್ತು 2016ರಲ್ಲಿ ಎರಡು ಬಾರಿ ಆ ಘಟಕವನ್ನು ಮುಚ್ಚಲು ಆದೇಶಿಸಿದ್ದೆವು. ಕಂಪನಿಯವರು ತಡೆಯಾಜ್ಞೆ ತಂದರು. ಈಗಿನ ಪರಿಸ್ಥಿತಿಯ ಬಗೆಗೂ ಸುಪ್ರೀಂ ಕೋರ್ಟ್‌ಗೆ ವರದಿ ಕೊಟ್ಟಿದ್ದೇವೆ. ಅದರ ಆಧಾರದಲ್ಲಿಯೇ ಕೋರ್ಟ್‌ ತೀರ್ಪು ನೀಡಿದೆ.

– ಲಕ್ಷ್ಮಣ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

ಕಾರ್ಖಾನೆಯನ್ನು ಮುಚ್ಚುವಂತೆ ಇಲ್ಲವೆ ವೈಟ್‌ಫೀಲ್ಡ್ ವಸತಿ ಪ್ರದೇಶದಿಂದ ಅದನ್ನು ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದೆ. ಇಂದಿನ ಕೋರ್ಟ್ ತೀರ್ಪು ಸ್ವಾಗತಾರ್ಹ.

– ಪಿ.ಸಿ.ಮೋಹನ್‌, ಸಂಸದ

ಕಾರ್ಖಾನೆಯಿಂದ ಏನಾಗುತ್ತಿತ್ತು?

ಕಾರ್ಖಾನೆ ವಿರುದ್ಧ ಹೋರಾಟ ನಡೆಸುತ್ತಾ ಬಂದಿರುವ ಸಂಘಟನೆಗಳ ಪ್ರಕಾರ, ಅದರಿಂದ ಆಗುತ್ತಿದ್ದ ಪ್ರಮುಖ ತೊಂದರೆಗಳು ಹೀಗಿವೆ:

ದೂಳಿನ ಕಪ್ಪು ದಟ್ಟ ಕಣಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡುತ್ತಿದ್ದವು. ಪೆನ್ಸಿಲ್‌ ಮೊನೆ ಹರಿತಗೊಳಿಸುವಾಗ ಉದುರುವಂಥ ಕಪ್ಪು ಕಣಗಳು ಈ ಪ್ರದೇಶದ ಗಾಳಿಯಲ್ಲಿದ್ದವು. ಕೆಟ್ಟ ವಾಸನೆ, ದೂಳು ಕಾರ್ಖಾನೆಯ ಒಂದು ಕಿಲೋಮೀಟರ್‌ ವ್ಯಾಪ್ತಿಗೆ ಹರಡುತ್ತಿತ್ತು. ಉಸಿರಾಟ ಸಂಬಂಧಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು.

ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪ್ರತಿ ಮಿಲಿಯನ್‌ ಪ್ರಮಾಣದ ಗಾಳಿಯಲ್ಲಿ 2.5 ಮೈಕ್ರಾನ್‌ಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಇಂಥ ದೂಳು ಇರಬಹುದು. ಆದರೆ, ಈ ಪ್ರದೇಶದಲ್ಲಿ 10 ಮೈಕ್ರಾನ್‌ಗಿಂತ ದೊಡ್ಡ ಗಾತ್ರದ ದೂಳಿನ ಕಣಗಳು ಇದ್ದವು.

ಹೋರಾಟದ ಹಾದಿ

* 1997ರಿಂದ ನಿವಾಸಿಗಳಿಂದ ಹೋರಾಟ ಆರಂಭ

* 2012ರಲ್ಲಿ ಘಟಕ ಮುಚ್ಚಲು ಆದೇಶಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ

* 2013 ಮೇಲ್ಮನವಿ ಸಲ್ಲಿಸಿ ಆದೇಶದ ವಿರುದ್ಧ ತಡೆಯಾಜ್ಞೆ ತಂದು ಮತ್ತೆ ಕಾರ್ಯಾರಂಭಿಸಿದ ಕಂಪನಿ

* 2014 ತಡೆಯಾಜ್ಞೆ ವಿರುದ್ಧ ಹಸಿರು ಪೀಠದ ಮೊರೆಹೋದ ಸ್ಥಳೀಯ ನಿವಾಸಿಗಳು

* 2016ರಲ್ಲಿ ಘಟಕ ಮುಚ್ಚಲು ಮತ್ತೆ ಸೂಚಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ

* ಸೆ. 18, 2018 ಘಟಕದ ಪರವಾನಗಿ ನವೀಕರಿಸದಂತೆ ಸಂಸದ ಪಿ.ಸಿ. ಮೋಹನ್ ನೇತೃತ್ವದಲ್ಲಿ ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆ ಮನವಿ

* ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶಕರಿಂದ ಪರಿಶೀಲನೆ, ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಕೆ

*****

ಮಾಲಿನ್ಯ ಹರಡದಂತೆ ನಿಯಮ ಪ್ರಕಾರ ಕಾರ್ಯಾಚರಿಸಿದರೆ ನಮ್ಮ ಅಭ್ಯಂತವಿಲ್ಲ. ಕಾರ್ಖಾನೆ ಈಗ ಮಾಡಿರುವ ಅನಾಹುತಗಳು ಕೆಟ್ಟ ಪರಿಣಾಮ ಬೀರಿವೆ. ಇದು ನಿಲ್ಲಬೇಕು.
- ಶ್ರೀನಿವಾಸ್‌ ರಾವ್‌, ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT