ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಂಪಿನಲ್ಲಿ ತೇಲುತ್ತಿತ್ತು ಪತಿಯ ಶವ

ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ l ಕೊಲೆ ಶಂಕೆ l ಪತ್ನಿಯೇ ಕಾರಣವೆಂದ ಪತಿಯ ಸಹೋದರರು
Last Updated 9 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಾಜಿ ಕೃಪಾ ಲೇಔಟ್ ಬಳಿಯ ಹೆಗಡೆ ನಗರದಲ್ಲಿ ಅಪ್ರೋಜ್ ಖಾನ್ (36) ಎಂಬುವರ ಶವ, ಅವರ ಮನೆಯ ಮುಂಭಾಗದ ನೀರಿನ ಸಂಪಿನಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಸ್ಥಳೀಯ ನಿವಾಸಿ ಅಫ್ರೋಜ್ ಖಾನ್, ಈ ಹಿಂದೆ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಬೇರೆಡೆ ಕೆಲಸಕ್ಕೆ ಸೇರಿದ್ದರು.

‘ಸ್ಥಳೀಯ ನೂರ್ ನಗರದ ನಿವಾಸಿ ಮೆಹರಾಜ್ ಎಂಬುವರನ್ನು ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ. ತಮ್ಮ ಸಹೋದರರು ವಾಸವಿದ್ದ ಮನೆಯಲ್ಲೇ ಅಫ್ರೋಜ್ ಖಾನ್ ಪತ್ನಿಯೊಂದಿಗೆ ನೆಲೆಸಿದ್ದರು’ ಎಂದು ಸಂಪಿಗೆ ಹಳ್ಳಿ ಠಾಣೆಯ ಪೊಲೀಸರು ಹೇಳಿದರು.

‘ಸರಿಯಾಗಿ ಕೆಲಸಕ್ಕೆ ಹೋಗದಿದ್ದರಿಂದ ಪತಿ ಜೊತೆ ಜಗಳ ಮಾಡಿದ್ದ ಮೆಹರಾಜ್, ಮಗುವಿನ ಜೊತೆ ಕಳೆದ ತಿಂಗಳು ಮನೆ ಬಿಟ್ಟು ತವರು ಮನೆಗೆ ಹೋಗಿದ್ದರು. ವಾಪಸ್ ಬಂದಿರಲಿಲ್ಲ. ಜೂನ್ 5ರಂದು ರಂಜಾನ್ ದಿನ ಅಫ್ರೋಜ್‌ ಪತ್ನಿ ಮನೆಗೆ ಹೋಗಿ ಬಂದಿದ್ದರು. ಮರುದಿನದಿಂದಲೇ ನಾಪತ್ತೆಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಪತಿ ಅವರ ಮೊಬೈಲ್‌ಗೆ ಪತ್ನಿ ಹಲವು ಬಾರಿ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ಅತ್ತೆ –ಮಾವನಿಗೆ ಕರೆ ಮಾಡಿ ವಿಚಾರಿಸಿದ್ದರು. ‘ಗೊತ್ತಿಲ್ಲ’ ಎಂಬ ಉತ್ತರ. ಶನಿವಾರ ಕರೆ ಮಾಡಿದಾಗ ಸಹೋದರ ಇಮ್ರಾನ್ ಖಾನ್ ಸ್ವೀಕರಿಸಿ, ‘ನೀರಿನ ಸಂಪಿನಲ್ಲಿ ಅವರ ಶವ ಬಿದ್ದಿದೆ’ ಎಂದಿದ್ದರು. ಸಂಬಂಧಿಕರ ಜೊತೆ ಸ್ಥಳಕ್ಕೆ ಬಂದ ಪತ್ನಿ, ಠಾಣೆಗೂ ಈ ವಿಷಯ ತಿಳಿಸಿದ್ದರು’ ಎಂದುವಿವರಿಸಿದರು.

ದೂರು ನೀಡಿದ ಮೆಹರಾಜ್, ‘ಪತಿಯನ್ನು ಯಾರೋ ಕೊಲೆ ಮಾಡಿ ನೀರಿನ ಸಂಪಿನಲ್ಲಿ ಹಾಕಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಅನ್ಯೋನ್ಯವಾಗಿದ್ದೆವು. ರಂಜಾನ್‌ಗೆ ಬಂದಾಗ ಸಹೋದರರು ಕಿರುಕುಳ ನೀಡುತ್ತಿದ್ದಾರೆ. ಸರಿಯಾಗಿ ಊಟ ಕೊಡದೆ ಬಹಳ ಹಿಂಸೆ ನೀಡುತ್ತಿದ್ದಾರೆ ಎಂದಿದ್ದರು. ಸಹೋದರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ’ ಎಂದು ಮೆಹರಾಜ್ ಕೋರಿದ್ದಾರೆ. ಅಫ್ರೋಜ್‌ ಸಹೋದರರು, ‘ತವರಿಗೆ ಹೋಗಿದ್ದ ಪತ್ನಿ ವಾಪಸ್‌ ಬಂದಿರಲಿಲ್ಲ. ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಪತ್ನಿಯೇ ಕಾರಣ’ ಎಂದು ದೂರಿದ್ದಾರೆ.

ಪೊಲೀಸರು, ‘ಆರೋಪ– ಪ್ರತ್ಯಾರೋಪಗಳಿವೆ. ಮರಣೋತ್ತರ ಪರೀಕ್ಷೆ ಮಾಡಿಸಲಾಗಿದ್ದು, ಅದರ ವರದಿ ಬಂದ ಬಳಿಕನಿಖರ ಕಾರಣ ತಿಳಿಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT