ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದ್ದ ಟ್ಯಾನರಿ ರಸ್ತೆ ವಿಸ್ತರಣೆ: ವಾಹನ ಸವಾರರು ಹೈರಾಣು

ಇಕ್ಕಟ್ಟಾದ ರಸ್ತೆಯಲ್ಲಿ ಸಂಚಾರ ಕಿರಿಕಿರಿ
Last Updated 2 ಮೇ 2022, 18:57 IST
ಅಕ್ಷರ ಗಾತ್ರ

ಬೆಂಗಳೂರು: ಸದಾ ವಾಹನಗಳಿಂದ ಗಿಜಿಗಿಡುವ ರಸ್ತೆ, ಸಂಚಾರಕ್ಕೆ ಹರಸಾಹಸಪಡುವ ವಾಹನ ಸವಾರರು, ಕಿರಿದಾದ ಪಾದಚಾರಿ ಮಾರ್ಗ, ರಸ್ತೆ ವಿಸ್ತರಣೆ ಯೋಜನೆಯೂ ನನೆಗುದಿಗೆ...

ಇದು ನಗರದ ಟ್ಯಾನರಿ ರಸ್ತೆಯ ಚಿತ್ರಣ. ನಗರದ ಕಂಟ್ಮೊನೆಂಟ್‌ನ ಈಶಾನ್ಯ ಭಾಗದಲ್ಲಿರುವ ಟ್ಯಾನರಿ ರಸ್ತೆ ಸುಮಾರು ನಾಲ್ಕು ಕಿಲೋ ಮೀಟರ್‌ ಉದ್ದ ಇದೆ. ಟ್ಯಾನರಿ ರಸ್ತೆಯನ್ನು ಸಂಚಾರ ಸ್ನೇಹಿಯನ್ನಾಗಿ ಮಾಡಬೇಕು ಎನ್ನುವ ಯೋಜನೆ ಮಾತ್ರ ಗ್ರಹಣ ಹಿಡಿದಿದೆ.

ಈ ರಸ್ತೆಯನ್ನು ಯೋಜನಾಬದ್ಧವಾಗಿ ನಿರ್ಮಿಸಿಲ್ಲ. ದಿನೇ ದಿನೇ ವಾಹನಗಳ ಸಂಚಾರ ಹೆಚ್ಚುತ್ತಿದೆ. ಹೀಗಾಗಿ, ಇಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕು. ಇಲ್ಲದಿದ್ದರೆ ಅಪಘಾತಗಳು ಖಚಿತ. ವಾಹನಗಳ ಪಾರ್ಕಿಂಗ್‌ ಸಹ ವ್ಯವಸ್ಥಿತವಾಗಿ ಇಲ್ಲ. ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿರುವುದು ಸಹ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ ಎನ್ನುವುದು ಸ್ಥಳೀಯರ ದೂರು.

ಈ ರಸ್ತೆಯನ್ನು ವಿಸ್ತರಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆ. ಆದರೆ, ರಸ್ತೆ ವಿಸ್ತರಣೆಗೆ ವಿಘ್ನಗಳೇ ಹೆಚ್ಚು. ನಿತ್ಯ ವಾಹನ ದಟ್ಟಣೆಯಿಂದ ಈ ಭಾಗದ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದರು. ಬಿಎಂಟಿಸಿ ಬಸ್‌ಗಳ ಸಂಚಾರಕ್ಕೂ ತೊಡಕಾಗುತ್ತಿದೆ. ಹೀಗಾಗಿ, ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲು ಹಲವು ವರ್ಷಗಳ ಹಿಂದೆಯೇ ತೀರ್ಮಾನಿಸಲಾಗಿತ್ತು. ಆದರೆ, ವಿಸ್ತರಣೆಗೆ ಅಗತ್ಯವಿರುವ ಜಾಗವನ್ನು ಬಿಟ್ಟುಕೊಡಲು ಆಸ್ತಿ ಮಾಲೀಕರು ಒಪ್ಪದಿರುವುದು ಯೋಜ
ನೆಗೆ ಅಡ್ಡಿಯಾಗಿದೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಎಂ.ಎಂ.ರಸ್ತೆಯಿಂದ ಹೊರ ವರ್ತುಲ ರಸ್ತೆವರೆಗಿನ ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆಯನ್ನು (ಟ್ಯಾನರಿ ರಸ್ತೆ) ಅಗಲಗೊಳಿಸುವುದಕ್ಕೆ ಬಿಬಿಎಂಪಿ ಉದ್ದೇಶಿಸಿತ್ತು.ಆಟೋಗಳು, ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತವೆ. ರಸ್ತೆಯಲ್ಲಿ ವಿಭಜಕ ಅಳವಡಿಕೆಗೆ ವಿಸ್ತರಣೆ ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ.

ಒಟ್ಟು 4.16 ಕಿ.ಮೀ.ಉದ್ದದ ರಸ್ತೆಯನ್ನು ₹30.92 ಕೋಟಿ ವೆಚ್ಚದಲ್ಲಿ ವಿಸ್ತರಿಸಲು ನಿರ್ಧರಿಸಲಾಗಿತ್ತು.ಇದಕ್ಕಾಗಿ 3,140 ಚದರ ಮೀಟರ್‌ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ರಸ್ತೆಯ ಎರಡೂ ಬದಿಯಲ್ಲಿರುವ 653 ಆಸ್ತಿಗಳನ್ನು ಇದಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕಿದೆ.

ಈಗಿರುವ ರಸ್ತೆಯು ಕೆಲವೆಡೆ ಚಿಕ್ಕದಾಗಿದೆ. ರಸ್ತೆಯ ಅಗಲ 7 ಮೀಟರ್‌ನಿಂದ 15 ಮೀಟರ್‌ನಷ್ಟಿದೆ. 4.16 ಕಿ.ಮೀ.ಉದ್ದಕ್ಕೂ 24 ಮೀಟರ್‌ (80 ಅಡಿ) ರಸ್ತೆ ನಿರ್ಮಿಸುವ ಯೋಜನೆ ಇದೆ. ಎರಡೂ ಬದಿಯಲ್ಲೂ ತಲಾ 2.40 ಮೀಟರ್‌ ಅಗಲದ ಪಾದಚಾರಿ ಮಾರ್ಗವನ್ನೂ ನಿರ್ಮಿಸಲು ಉದ್ದೇಶಿಸಲಾಗಿತ್ತು. ಯೋಜನೆ ಪ್ರಕಾರ ಕಾಮಗಾರಿ ಪೂರ್ಣಗೊಂಡ ಬಳಿಕ ಟ್ಯಾನರಿ ರಸ್ತೆಯ ಎಂ.ಎಂ.ರಸ್ತೆ, ಅಂಬೇಡ್ಕರ್ ಕಾಲೇಜು ನಡುವಿನ ರಸ್ತೆಯಲ್ಲಿ ವಾಹನ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅಧಿಕಾರಿಗಳು ಪ್ರತಿಪಾದಿಸುತ್ತಾರೆ.

7ರಂದು ಪುಲಿಕೇಶಿನಗರದಲ್ಲಿ ಜನಸ್ಪಂದನ

ಪುಲಿಕೇಶಿನಗರ ವಿಧಾನ ಸಭಾ ಕ್ಷೇತ್ರದ ಜನರ ಅಹವಾಲು ಆಲಿಸುವ ಸಲುವಾಗಿ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಇದೇ ಮೇ 7ರಂದು ಸುಲ್ತಾನಪಾಳ್ಯದ ಗಣೇಶ ಬ್ಲಾಕ್‌ನ ಒಂದನೇ ಅಡ್ಡರಸ್ತೆಯ ಪಾನಿಪುರ ಮೈದಾನದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಪೊಲೀಸ್‌ ಇಲಾಖೆಯ ಅಧಿಕಾರಿಗಳು

ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ. ಈ ಕ್ಷೇತ್ರದ ನಿವಾಸಿಗಳು ಸ್ಥಳೀಯ ಸಮಸ್ಯೆಗಳನ್ನು ನೇರವಾಗಿ ಶಾಸಕರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬಹುದು.

ಆಸಕ್ತರು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಮೊದಲು ನೋಂದಣಿ ಮಾಡಿಸಿದವರಿಗೆ ಆದ್ಯತೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.

ಸಂಪರ್ಕ: 9916674666

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT