ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್ ನಂಟು: ಇಬ್ಬರು ಶಂಕಿತ ಉಗ್ರರ ಬಂಧನ

ಎನ್‌ಐಎ ಕಾರ್ಯಾಚರಣೆ * ಯುವಕರ ಸೆಳೆಯಲು ‘ಕುರಾನ್ ಸರ್ಕಲ್’
Last Updated 9 ಅಕ್ಟೋಬರ್ 2020, 6:14 IST
ಅಕ್ಷರ ಗಾತ್ರ

ಬೆಂಗಳೂರು: ‘ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಜತೆ ಸಂಪರ್ಕವಿಟ್ಟುಕೊಂಡು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಡಿ ಉಗ್ರರೆಂದು ಶಂಕಿಸಲಾದ ಇಬ್ಬರನ್ನು ಬುಧವಾರ ಬಂಧಿಸಲಾಗಿದೆ’ ಎಂದು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಫ್ರೇಜರ್‌ ಟೌನ್‌ ನಿವಾಸಿ ಇರ್ಫಾನ್ ನಾಸೀರ್ ಸತ್ತಾರ್ (33) ಹಾಗೂ ತಮಿಳುನಾಡಿನ ರಾಮನಾಥಪುರ ನಿವಾಸಿ ಅಹಮದ್ ಅಬ್ದುಲ್ ಖಾದರ್ (40) ಬಂಧಿತರು.

‘ಆರೋಪಿ ಇರ್ಫಾನ್, ಅಕ್ಕಿ ವ್ಯಾಪಾರಿ. ಅಹಮದ್ ಖಾದರ್, ಚೆನ್ನೈನ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ. ಅವರಿಬ್ಬರಿಗೆ ಸೇರಿದ್ದ ಗುರಪ್ಪನಪಾಳ್ಯ ಹಾಗೂ ಫ್ರೇಜರ್‌ಟೌನ್‌ನಲ್ಲಿರುವ ಜಾಗಗಳ ಮೇಲೆ ಬುಧವಾರ ದಾಳಿ ಮಾಡಲಾಯಿತು. ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿ ಇಬ್ಬರನ್ನೂ ಬಂಧಿಸಲಾಗಿದೆ. ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಎನ್‌ಐಎ ಅಧಿಕಾರಿಯೊಬ್ಬರು ಹೇಳಿದರು.

‘ದೆಹಲಿಯಲ್ಲಿ ನಡೆದಿದ್ದ ಸಿಎಎ ಪ್ರತಿಭಟನೆ ವೇಳೆ ಬಾಂಬ್ ಸ್ಫೋಟ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ದಂಪತಿ ಸೇರಿ ಹಲವರನ್ನು ಬಂಧಿಸಲಾಗಿತ್ತು. ಅವರೆಲ್ಲರೂ ಐಎಸ್‌ ಹಾಗೂಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾಂತ್ಯ (ಐಎಸ್‌ಕೆಪಿ) ಸಂಘಟನೆಜೊತೆ ಸಂಪರ್ಕವಿಟ್ಟುಕೊಂಡಿದ್ದ ಮಾಹಿತಿ ಲಭ್ಯವಾಗಿತ್ತು. ಅದನ್ನು ಆಧರಿಸಿ, ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಡಾ. ಅಬ್ದುರ್ ರಹಮಾನ್ ಅಲಿಯಾಸ್ ಡಾ. ಬಾವ್ರೆ ಎಂಬಾತನನ್ನು ಬಸವನಗುಡಿಯಲ್ಲಿ ಇತ್ತೀಚೆಗಷ್ಟೇ ಬಂಧಿಸಲಾಗಿತ್ತು’

‘2013– 14ರಲ್ಲಿ ಸಿರಿಯಾಗೆ ಹೋಗಿ ಐಎಸ್ ಸಂಘಟನೆ ಉಗ್ರರಿಂದ ತರಬೇತಿ ಪಡೆದಿರುವುದಾಗಿ ಅಬ್ದುರ್ ಬಾಯ್ಬಟ್ಟಿದ್ದ. ತನ್ನನ್ನು ಸಿರಿಯಾಗೆ ಕಳುಹಿಸಿದವರ ಮಾಹಿತಿಯನ್ನೂ ನೀಡಿದ್ದ. ಅದರನ್ವಯ ಸೆ. 19ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅದರ ತನಿಖೆ ಕೈಗೊಂಡು ಇದೀಗ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ’ ಎಂದೂ ಅಧಿಕಾರಿ ತಿಳಿಸಿದರು.

‘ಸಿರಿಯಾದ ಐಎಸ್ ಸಂಘಟನೆ ಕ್ಯಾಂಪ್‌ನಲ್ಲಿ ಉಗ್ರ ತರಬೇತಿ ಪಡೆದುಕೊಂಡು ಬಂದಿದ್ದ ಇರ್ಫಾನ್ ಹಾಗೂ ಅಹಮದ್ ಖಾದರ್, ಹಿಜಬ್–ಉತ್–ತಹ್ರೀರ್ ಎಂಬ ಸಂಘಟನೆ ಸದಸ್ಯರಾಗಿದ್ದರು. ಐಎಸ್ ಸಹೋದರ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾಂತ್ಯ ಸಂಘಟನೆಯಲ್ಲೂ ಸಕ್ರಿಯರಾಗಿದ್ದರು’ ಎಂದೂ ಅವರು ಹೇಳಿದರು.

‘ಕುರಾನ್ ಸರ್ಕಲ್’ ಹೆಸರಿನಲ್ಲಿ ಗುಂಪು ಕಟ್ಟಿಕೊಂಡಿದ್ದ ಉಗ್ರರು, ಬೆಂಗಳೂರಿನಲ್ಲಿರುವ ಮುಸ್ಲಿಂ ಯುವಕರನ್ನು ತಮ್ಮತ್ತ ಸೆಳೆಯಲಾರಂಭಿಸಿದ್ದರು. ಕೆಲ ಯುವಕರ ಮನ ಪರಿವರ್ತನೆ ಮಾಡಿ, ಅವರನ್ನು ಉಗ್ರ ತರಬೇತಿಗಾಗಿ ಸಿರಿಯಾಕ್ಕೆ ಕಳುಹಿಸಿಕೊಟ್ಟಿದ್ದರು. ವಿಧ್ವಂಸಕ ಕೃತ್ಯ ಎಸಗಲು ಐಎಸ್ ಉಗ್ರರಿಗೆ ಸಹಾಯ ಮಾಡುವುದು ‘ಕುರಾನ್ ಸರ್ಕಲ್’ ಪ್ರಮುಖ ಉದ್ದೇಶವಾಗಿತ್ತೆಂದು ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ’ ಎಂದೂ ಅಧಿಕಾರಿ ವಿವರಿಸಿದರು.

ಹಣ ದೇಣಿಗೆ; ‘ಐಎಸ್‌ ಸಂಘಟನೆಗೆ ಯುವಕರನ್ನು ನೇಮಕ ಮಾಡಿಕೊಳ್ಳುವುದು ಹಾಗೂ ನೇಮಕವಾದವರನ್ನು ಸಿರಿಯಾಗೆ ಕಳುಹಿಸಲು ಬೇಕಾಗುವ ಹಣವನ್ನು ದೇಣಿಗೆ ಸಂಗ್ರಹಿಸುವ ಕೆಲಸವನ್ನು ಇರ್ಫಾನ್ ಮತ್ತು ಖಾದರ್ ಮಾಡುತ್ತಿದ್ದರು’ ಎಂದೂ ಅಧಿಕಾರಿ ಹೇಳಿದರು.

‘ಇಬ್ಬರು ಯುವಕರನ್ನು ಕೊಂದಿರುವ ಉಗ್ರರು’

‘ಶಂಕಿತ ಉಗ್ರರ ಮಾತಿಗೆ ಮರಳಾಗಿ ಸಿರಿಯಾಗೆ ಹೋಗಿದ್ದ ಬೆಂಗಳೂರಿನ ಇಬ್ಬರು ಯುವಕರನ್ನು ಐಎಸ್‌ ಸಂಘಟನೆ ಉಗ್ರರೇ ಕೊಂದು ಹಾಕಿದ್ದಾರೆ. ಈ ಬಗ್ಗೆಯೂ ಬಂಧಿತರು ಮಾಹಿತಿ ನೀಡಿದ್ದಾರೆ’ ಎಂದು ಎನ್‌ಐಎ ಅಧಿಕಾರಿ ಹೇಳಿದರು.

‘ಧರ್ಮವನ್ನೇ ಮುಂದಿಟ್ಟುಕೊಂಡು ಮುಸ್ಲಿಂ ಯುವಕರನ್ನು ಸೆಳೆದು ಐಎಸ್ ಸೇರಿಸುವ ಉದ್ದೇಶ ಶಂಕಿತ ಉಗ್ರರದ್ದಾಗಿತ್ತು. ಹೊಸ ಇಸ್ಲಾಮಿಕ್ ದೇಶ ಕಟ್ಟುವುದು ಇವರ ಗುರಿಯಾಗಿದೆ ಎಂಬ ಸಂಗತಿ ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ’ ಎಂದೂ ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT