ಬುಧವಾರ, ಆಗಸ್ಟ್ 10, 2022
23 °C
ವಿಕ್ರಮ್ ಆಸ್ಪತ್ರೆಯ ವೈದ್ಯರು ಕಳವಳ

ಡೆಲ್ಟಾ ಪ್ಲಸ್‌ನಿಂದ ಕಪ್ಪು ಶಿಲೀಂಧ್ರ ಅ‍ಪಾಯ ಸಾಧ್ಯತೆ: ವಿಕ್ರಮ್ ಆಸ್ಪತ್ರೆ ವೈದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ಗೆ ಕಾರಣವಾಗಿರುವ ಸಾರ್ಸ್–ಕೋವ್–2 ವೈರಾಣುವಿನ ನೂತನ ಡೆಲ್ಟಾ ಪ್ಲಸ್ ತಳಿಯು ಕಪ್ಪು ಶಿಲೀಂಧ್ರ ಸೋಂಕಿನ ಅಪಾಯವನ್ನು ತಂದೊಡ್ಡುವ ಸಾಧ್ಯತೆಯಿದೆ’ ಎಂದು ವಿಕ್ರಮ್ ಆಸ್ಪತ್ರೆಯ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯರು, ‌‘ಡೆಲ್ಟಾ ರೂಪಾಂತರವು ಆಲ್ಫಾ ರೂಪಾಂತರಕ್ಕೆ ಹೋಲಿಸಿದರೆ ಶೇ 40ಕ್ಕಿಂತ ಅಧಿಕ ಪ್ರಸರಣ ದರವನ್ನು ಹೊಂದಿದೆ. ಇದು ಕಾಯಿಲೆಯ ತೀವ್ರತೆ ಹೆಚ್ಚಾಗಲು ಕಾರಣವಾಗಲಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಕೂಡ ಸೋಂಕಿತರಾಗುವ ಸಾಧ್ಯತೆ ಇರುತ್ತದೆ. ವ್ಯಕ್ತಿಯಲ್ಲಿನ ರೋಗನಿರೋಧಕ ಶಕ್ತಿಯನ್ನೂ ಕುಗ್ಗಿಸಲಿದೆ. ಹೀಗಾಗಿ, ಕಪ್ಪು ಶಿಲೀಂಧ್ರದಂತಹ ಕಾಯಿಲೆಗಳು ಅಧಿಕ ಮಂದಿಯಲ್ಲಿ ಕಾಣಿಸಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯ ಇಎನ್‍ಟಿ ತಜ್ಞ ಡಾ. ಶ್ರೀನಿವಾಸ್ ಕೆ., ‘ಕಪ್ಪು ಶಿಲೀಂಧ್ರಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೆ ಅಪಾಯವಾಗಲಿದೆ. ಅನಿಯಂತ್ರಿತ ಮಧುಮೇಹ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತದೆ. ಸೋಂಕು ಕಣ್ಣು, ಮಿದುಳಿಗೆ ವ್ಯಾಪಿಸಿಕೊಂಡ ಬಳಿಕ ಕೆಲವರು ಚಿಕಿತ್ಸೆಗೆ ಬರುತ್ತಿದ್ದಾರೆ. ಈ ಸೋಂಕಿನ ಲಕ್ಷಣಗಳು ಗೋಚರಿಸಿದ ತಕ್ಷಣ ಆಸ್ಪತ್ರೆಗೆ ತೆರಳಿ, ಪರಿಶೀಲನೆಗೆ ಒಳಪಟ್ಟಲ್ಲಿ ಬೇಗ ಕಾಯಿಲೆಯನ್ನು ವಾಸಿ ಮಾಡಲು ಸಾಧ್ಯ’ ಎಂದು ಹೇಳಿದರು.

ಆಂತರಿಕ ಔಷಧದ ಸಲಹೆಗಾರ ಡಾ. ಪ್ರಮೋದ್ ವಿ. ಸತ್ಯ, ‌‘ಕಪ್ಪು ಶಿಲೀಂಧ್ರ ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಲ್ಲಿ ವ್ಯಕ್ತಿಗೆ ಮೂರು ವಾರಗಳ ಚಿಕಿತ್ಸೆ ಸಾಕಾಗುತ್ತದೆ. ಸೋಂಕಿನಿಂದ ಹಾನಿಯಾದ ದೇಹದ ಭಾಗವನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ‘ಲೈಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧ ನೀಡಬೇಕಾಗುತ್ತದೆ’ ಎಂದು ಹೇಳಿದರು.

ನರರೋಗ ತಜ್ಞ ಡಾ. ಪಾರ್ಥ ಪ್ರದೀಪ್ ಶೆಟ್ಟಿ, ‘ಕ್ಯಾನ್ಸರ್ ರೋಗಿಗಳು, ಡಯಾಲಿಸ್‍ಗೆ ಒಳಗಾಗುವ ರೋಗಿಗಳು ಸೇರಿದಂತೆ ವಿವಿಧ ಕಾಯಿಲೆ ಎದುರಿಸುತ್ತಿರುವವರಿಗೆ ಕಪ್ಪು ಶಿಲೀಂಧ್ರ ಕಾಡುವ ಸಾಧ್ಯತೆ ಇರುತ್ತದೆ. ಕಣ್ಣು, ಮಿದುಳು, ಶ್ವಾಸಕೋಶ, ಚರ್ಮ, ಜೀರ್ಣಾಂಗವ್ಯೂಹ ಸೇರಿದಂತೆ ವಿವಿಧ ಭಾಗಗಳಿಗೆ ಈ ಸೋಂಕು ವ್ಯಾಪಿಸಿಕೊಳ್ಳಲಿದೆ. ಮುಖದ ಭಾಗದಲ್ಲಿ ನೋವು, ಕಣ್ಣಿನ ನೋವು, ಮೂಗು ಕಟ್ಟಿಕೊಳ್ಳುವಿಕೆ, ತಲೆನೋವು, ಹಲ್ಲುನೋವು ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸಿಕೊಂಡಾಗ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು