ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಿತಾವಧಿ ತೆರಿಗೆ ವಿಧಿಸುವುದನ್ನು ವಿರೋಧಿಸಿ ಲಾರಿ ಮಾಲೀಕರ ಮುಷ್ಕರ: ಅಂತ್ಯ

Published 31 ಆಗಸ್ಟ್ 2023, 20:03 IST
Last Updated 31 ಆಗಸ್ಟ್ 2023, 20:03 IST
ಅಕ್ಷರ ಗಾತ್ರ

ಬೆಂಗಳೂರು: ಜೀವಿತಾವಧಿ ತೆರಿಗೆ ವಿಧಿಸುವುದನ್ನು ವಿರೋಧಿಸಿ ಬುಧವಾರ ರಾತ್ರಿ ಆರಂಭವಾಗಿದ್ದ ಲಾರಿ ಮಾಲೀಕರ ಮುಷ್ಕರವು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿದ್ದರಿಂದ ಗುರುವಾರ ರಾತ್ರಿ ಅಂತ್ಯಗೊಂಡಿದೆ.

ಕರ್ನಾಟಕ ರಾಜ್ಯ ಲಾರಿ ಮಾಲಿಕರ ಹಾಗೂ ಎಜೆಂಟರ ಸಂಘದ ದಿಢೀರ್ ಕರೆಯಂತೆ ರಾಜ್ಯದಲ್ಲಿ 6,000 ಲಾರಿಗಳ ಮಾಲೀಕರು ಮುಷ್ಕರ ಹೂಡಿದ್ದರು. ಇದರಿಂದ, ಬೆಂಗಳೂರಿನಲ್ಲಿಯೇ 1,100 ಲಾರಿಗಳ ಸಂಚಾರ ಸ್ಥಗಿತಗೊಂಡಿತ್ತು. ನೂರಾರು ಲಾರಿಗಳನ್ನು ಶಾಂತಿನಗರದಲ್ಲಿರುವ ಸಾರಿಗೆ ಆಯುಕ್ತರ ಕಚೇರಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ತಂದು ನಿಲ್ಲಿಸಲಾಗಿತ್ತು. ಇದರಿಂದ ಕೆಂಗಲ್‌ ಹನುಂತರಾಯ ರಸ್ತೆ, ಬಿಎಂಟಿಸಿ ಎದುರಿನ ರಸ್ತೆ ಸಹಿತ ಸುತ್ತಲಿನ ಎಲ್ಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಗುರುವಾರ ಸಂಜೆ ಸಾರಿಗೆ ಸಚಿವರು ಲಾರಿ ಮಾಲೀಕರ ಹಾಗೂ ಎಜೆಂಟರ ಸಂಘದ ಪದಾಧಿಕಾರಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

‘ಒಮ್ಮೆಲೆ ತೆರಿಗೆ ಕಟ್ಟಬೇಕು ಎಂಬ ಆದೇಶದಿಂದ ಲಾರಿ ಮಾಲೀಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈಗಿರುವಂತೆ ಮೂರು ತಿಂಗಳಿಗೆ, ಆರು ತಿಂಗಳಿಗೆ, ವರ್ಷಕ್ಕೆ ಒಮ್ಮೆ ತೆರಿಗೆ ಕಟ್ಟುವ ಪದ್ಧತಿಯನ್ನೇ ಮುಂದುವರಿಸಬೇಕು’ ಎಂದು ಲಾರಿ ಮಾಲೀಕರು ಆಗ್ರಹಿಸಿದರು.

ಡಿಸೆಂಬರ್‌ವರೆಗೆ ಈಗಿರುವ ಪದ್ಧತಿಯನ್ನೇ ಮುಂದುವರಿಸಲಾಗುವುದು. ಅಲ್ಲಿವರೆಗೆ ತೆರಿಗೆ ಪಾವತಿ ಮಾಡಿ ಎಂದು ಸಚಿವರು ಸೂಚಿಸಿದರು.

‘ಈಗ ತೆರಿಗೆ ಬಾಕಿ ಇರುವುದನ್ನು ಇನ್ನೆರಡು ದಿನಗಳಲ್ಲಿ ಪಾವತಿ ಮಾಡಲಾಗುವುದು. ಜೀವಿತಾವಧಿ ತೆರಿಗೆ ಕಟ್ಟುವುದನ್ನು ಡಿಸೆಂಬರ್‌ವರೆಗೆ ಮುಂದೂಡಿದ್ದನ್ನು ಸದ್ಯಕ್ಕೆ ಒಪ್ಪಿ ಮುಷ್ಕರವನ್ನು ಹಿಂಪಡೆಯುತ್ತೇವೆ. ಡಿಸೆಂಬರ್‌ 29ಕ್ಕೆ ಮತ್ತೆ ಸಭೆ ನಡೆಸಿ ಈ ಆದೇಶವನ್ನು ಇನ್ನೂ ಒಂದು ವರ್ಷ ಮುಂದೂಡುವಂತೆ ಒತ್ತಾಯಿಸುತ್ತೇವೆ. ಒಂದು ವರ್ಷ ಮುಂದೂಡಲು ಅವಕಾಶ ಇದೆ’ ಎಂದು ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ತಿಳಿಸಿದರು.

ಸಚಿವರು ಮತ್ತು ಅಧಿಕಾರಿಗಳು ಸಮ್ಮತಿ ಸೂಚಿಸಿದ್ದರಿಂದ ಮುಷ್ಕರವನ್ನು ಹಿಂಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT