ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಚೆಲ್ಲಿ ಚುನಾವಣೆ ಗೆಲ್ಲುವುದು ನಿಲ್ಲದಿದ್ದರೆ ಅಪಾಯ: ಎಸ್‌.ಎಂ. ಕೃಷ್ಣ

ಎಸ್‌.ಆರ್‌. ಬೊಮ್ಮಾಯಿ ಜನ್ಮ ಶತಮಾನೋತ್ಸವದ
Published 7 ಜೂನ್ 2023, 5:51 IST
Last Updated 7 ಜೂನ್ 2023, 5:51 IST
ಅಕ್ಷರ ಗಾತ್ರ

ಬೆಂಗಳೂರು: ‘ಹಣ ಹಂಚಿ ಚುನಾವಣೆ ಗೆಲ್ಲುವ ವ್ಯವಸ್ಥೆ ಮುಂದುವರಿದರೆ ಅಪಾಯ. ಇದನ್ನು ನಿಲ್ಲಿಸದೇ ಹೋದರೆ ಪ್ರಜಾಪ್ರಭುತ್ವ ಅರ್ಥವಿಲ್ಲದ ಯಂತ್ರ ಆಗಲಿದೆ‘ ಎಂದು ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ ಆತಂಕ ವ್ಯಕ್ತಪಡಿಸಿದರು.

ಎಸ್‌.ಆರ್‌. ಬೊಮ್ಮಾಯಿ ಜನ್ಮ ಶತಮಾನೋತ್ಸವ ಆಚರಣೆಯ ಉದ್ಘಾಟನೆ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚುನಾವಣಾ ಆಯೋಗ ಈ ಹಣ ಹಂಚುವ ವ್ಯವಸ್ಥೆಯನ್ನು ನಿಯಂತ್ರಿಸಬೇಕು. ಆದರೆ, ಆಯೋಗ ಇದೆ ಎಂಬುದೇ ಗೊತ್ತಾಗುತ್ತಿಲ್ಲ. ಹಿಂದೆ ಟಿ.ಎನ್‌. ಶೇಷನ್‌ ಕಾಲದಲ್ಲಿ ಒಮ್ಮೆ ತನ್ನ ಸಾಮರ್ಥ್ಯವನ್ನು ತೋರಿಸಿತ್ತು. ಆನಂತರ ಹಿಂದಕ್ಕೆ ಸರಿದಿದೆ. ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂಬ ಬಗ್ಗೆ ನಾಡಿನ ಹಿತಚಿಂತಕರು ಅವಲೋಕನ ಮಾಡಬೇಕು ಎಂದು ಸಲಹೆ ನೀಡಿದರು.

‘ರಾಜ್ಯಪಾಲರು ಆಡಿದ್ದೇ ಆಟ ಆಗಿತ್ತು. ಬೂಟಾ ಸಿಂಗ್‌ ಶಾಸಕರನ್ನು ಕರೆಸಿ ರಾಜಭವನದಲ್ಲೇ ಮಲಗಿಸಿದ್ದನ್ನೆಲ್ಲ ನೋಡಿದ್ದೇನೆ. ರಾಜ್ಯಪಾಲರ ಕರ್ತವ್ಯ ಏನು? ವ್ಯಾಪ್ತಿ ಎಷ್ಟು ಎಂಬುದು ನಿರ್ಧಾರವಾಗಲು, ಅವರ ಆಟಗಳಿಗೆ ಕಡಿವಾಣ ಹಾಕಲು ಎಸ್‌.ಆರ್‌. ಬೊಮ್ಮಾಯಿ ಹೋರಾಡಿದರು. ರಾಜ್ಯಪಾಲರ ವಿರುದ್ಧದ ಪ್ರಕರಣದಲ್ಲಿ ಬೊಮ್ಮಾಯಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾದರೂ ಸುಪ್ರೀಂಕೋರ್ಟ್‌ವರೆಗೆ ಹೋಗಿ ಪ್ರಜಾಪ್ರಭುತ್ವದ ಮೌಲ್ಯ ಉಳಿಸಿದರು’ ಎಂದು ನೆನಪು ಮಾಡಿಕೊಂಡರು.

ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ತುರ್ತು ಪರಿಸ್ಥಿತಿಯ ನಂತರ ದೇಶದ ಎಲ್ಲೆಡೆ ಕಾಂಗ್ರೆಸ್‌ ವಿರುದ್ಧದ ಗಾಳಿ ಬೀಸಿದರೂ ಕರ್ನಾಟಕದಲ್ಲಿ ಬದಲಾವಣೆ ಆಗಿರಲಿಲ್ಲ. ಆನಂತರ ಹೋರಾಟದ ಮೂಲಕ ಬದಲಾವಣೆ ತಂದು ಕಾಂಗ್ರಸ್ಸೇತರ ಮೊದಲ ಸರ್ಕಾರ ಬರಲು ಎಸ್‌.ಆರ್‌. ಬೊಮ್ಮಾಯಿ ಕಾರಣರಾದರು’ ಎಂದು ಸ್ಮರಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಆರ್‌.ವಿ. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಆರ್‌.ಬೊಮ್ಮಾಯಿ ಬದುಕು–ಸಾಧನೆ ಹಾಗೂ ‘ದಿ ರ‍್ಯಾಡಿಕಲ್‌ ಹ್ಯೂಮನಿಸ್ಟ್‌’ ಕುರಿತು ಕಾಂಗ್ರೆಸ್‌ ಮುಖಂಡ ಬಿ.ಎಲ್. ಶಂಕರ್ ಮಾತನಾಡಿದರು. 

ವಿಧಾನ ಪರಿಷತ್‌ ಅಧ್ಯಕ್ಷ ಬಸವರಾಜ ಹೊರಟ್ಟಿ, ಮುಖಂಡರಾದ ಪಿ.ಜಿ. ಆರ್‌.ಸಿಂಧ್ಯ, ಸಿ. ಸೋಮಶೇಖರ್‌, ಮಹೇಶ್‌ ಬೊಮ್ಮಾಯಿ, ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಸಂಪಾದಕಿ ಸಾಂತ್ವನ ಭಟ್ಟಾಚಾರ್ಯ ಇದ್ದರು.

ಗದ್ಗದಿತರಾದ ಬಸವರಾಜ ಬೊಮ್ಮಾಯಿ

ಸಮಾರಂಭದಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಎರಡು ಬಾರಿ ಗದ್ಗದಿತರಾದರು. ತಂದೆ ಎಸ್‌.ಆರ್‌. ಬೊಮ್ಮಾಯಿ ಅವರು ಶಾಲೆಯ ಮೊದಲ ದಿನ ಕೈ ಹಿಡಿದು ಕರೆದುಕೊಂಡು ಹೋದ ಘಟನೆಯನ್ನು ನೆನೆದು ಒಮ್ಮೆ ಕಣ್ಣೀರಿಟ್ಟರು. ‘ರಾಜಕೀಯದಲ್ಲಿ ತಂದೆಯ ಮಾರ್ಗದರ್ಶನ ಇದೆ. ಆದರೆ ನನ್ನನ್ನು ಗುರುತಿಸಿ ಮನೆಗೆ ಬಂದು ಕೈ ಹಿಡಿದು ಕರೆದುಕೊಂಡು ಬಂದು ಅವಕಾಶ ನೀಡಿ ಬೆಳೆಸಿದವರು ಯಡಿಯೂರಪ್ಪನವರು‘ ಎಂದು ಎರಡನೇ ಬಾರಿ ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT