ಮಂಗಳವಾರ, ನವೆಂಬರ್ 19, 2019
23 °C
ಪಠ್ಯದಿಂದ ಟಿಪ್ಪು ಅಧ್ಯಾಯ ಕೈಬಿಡುವ ವಿಷಯ– ಗೋಪ್ಯ ಸಭೆ

ಅಪ್ಪಚ್ಚು ರಂಜನ್‌–ಇತಿಹಾಸಕಾರರ ವಾಗ್ವಾದ?

Published:
Updated:

ಬೆಂಗಳೂರು: ಪಠ್ಯದಿಂದ ಟಿಪ್ಪು ಅಧ್ಯಾ ಯವನ್ನು ತೆಗೆದು ಹಾಕುವ ಸಂಬಂಧ ಗುರುವಾರ ಇಲ್ಲಿ ನಡೆದ ಪಠ್ಯಪುಸ್ತಕ ರಚನಾ ಸಮಿತಿಯ ಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್‌ ಮತ್ತು ಇತಿಹಾಸಕಾರರ ನಡುವೆ ಭಾರಿ ವಾಗ್ವಾದ ನಡೆಯಿತು ಎಂದು ಹೇಳಲಾಗಿದೆ.

ಶಾಸಕರ ವಾದವನ್ನು ಬಹುತೇಕ ಎಲ್ಲ ಇತಿಹಾಸಕಾರರು ತಳ್ಳಿ ಹಾಕಿದರು, ಬ್ರಿಟನ್‌ ಮೂಲದ ಪ್ರಕಾಶಕರೊಬ್ಬರ ಭಾಷಾಂತರಗೊಂಡ ಪತ್ರಗಳನ್ನು ಆಧರಿಸಿ ಶಾಸಕರು ನೀಡಿದ ಸಾಕ್ಷ್ಯವನ್ನು ಒಪ್ಪಲು ಅವರು ಸಿದ್ಧರಿರಲಿಲ್ಲ ಎಂದು ಗೊತ್ತಾಗಿದೆ.

15 ದಿನದ ಗಡುವು: ವಾದ, ಪ್ರತಿವಾದ ಆಲಿಸಿದ ಕರ್ನಾಟಕ ಪಠ್ಯಪುಸ್ತಕ ಸೊಸೈ ಟಿಯ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಎನ್‌. ಗೋಪಾಲಕೃಷ್ಣ ಅವರು, ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ, 15 ದಿನದೊಳಗೆ ವರದಿ ಸಲ್ಲಿಸಲು ವಿಷಯ ತಜ್ಞರಿಗೆ ಸೂಚನೆ ನೀಡಿದರು.

ಮಾಧ್ಯಮದವರ ಕಣ್ತಪ್ಪಿಸುವ ಸಲುವಾಗಿ ಹೊಸಕೆರೆಹಳ್ಳಿಯಲ್ಲಿ ನಡೆದ ಸಭೆಯ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗಿತ್ತು.

ಅತಿರಂಜನೆಗೆ ಅವಕಾಶ ಕೊಡುವುದಿಲ್ಲ: ಸಭೆಯ ಬಳಿಕ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್‌, ‘ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಟಿಪ್ಪುಸುಲ್ತಾನ್‌ಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಪಠ್ಯಗಳಿಂದ ತೆಗೆದುಹಾಕಬೇಕು ಮತ್ತು ಆತನನ್ನು ವೈಭವೀಕರಿಸುವ ಅಂಶಗಳನ್ನೂ ತೆಗೆದುಹಾಕಬೇಕು. ನನ್ನ ವಾದಕ್ಕೆ ಪೂರಕವಾಗಿ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ’ ಎಂದರು.

‘ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ಅದಕ್ಕೆ ಹೆದರಿ ನನ್ನ ನಿಲುವು ಬದಲಿಸುವುದಿಲ್ಲ. ಪೊಲೀಸರಿಗೆ ಈ ಬಗ್ಗೆ ದೂರು ಕೊಟ್ಟಿದ್ದೇನೆ’ ಎಂದರು.

ಪ್ರತಿಕ್ರಿಯಿಸಿ (+)