ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರಂಗಾ ಯಾತ್ರೆ: ಕಾಸರಗೋಡಿನ ಅಮೃತಾಗೆ ಸನ್ಮಾನ

Last Updated 2 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದಾದ್ಯಂತ ‘ತಿರಂಗಾ ಯಾತ್ರೆ’ ಕೈಗೊಂಡಿರುವ ಕಾಸರಗೋಡಿನ ಅಮೃತಾ ಜೋಶಿ ನಗರಕ್ಕೆ ಆಗಮಿಸಿದ್ದು, ಅವರನ್ನು ಬಿಬಿಎಂಪಿ ವತಿಯಿಂದ ಸನ್ಮಾನಿಸಲಾಯಿತು.

ನಾಲ್ಕು ತಿಂಗಳಿನಿಂದ 22 ಸಾವಿರ ಕಿ.ಮೀ. ಸಂಚರಿಸುತ್ತಿರುವ ಕನ್ನಡತಿ ಅಮೃತಾ, ‘ಹರ್‌ ಘರ್‌ ತಿರಂಗಾ’ ಅಭಿಯಾನದ ಮಹತ್ವವನ್ನು ಜನರಿಗೆ ತಿಳಿಸಲು ಈ ಯಾತ್ರೆ ನಡೆಸುತ್ತಿದ್ದಾರೆ. ಬೆಂಗಳೂರಿಗೆ ಮಂಗಳವಾರ ಬಂದಾಗ, ಬಿಬಿಎಂಪಿ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ವಿಕಾಸ ಟ್ರಸ್ಟ್‌ನಿಂದ ಸನ್ಮಾನಿಸಲಾಯಿತು.

ರಾಜ್‌ಕುಮಾರ್ ಗಾಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ಮಾತನಾಡಿ, ’ದೇಶದ ಎಲ್ಲ ಭಾಗಗಳಿಗೆ ಹೋಗಿ ಎಲ್ಲ ಸಂಸ್ಕೃತಿಯನ್ನು ಕಂಡಿದ್ದಾರೆ. ಉತ್ತರ ಭಾರತ ಸೇರಿದಂತೆ ಎಲ್ಲ ಭಾಗಗಳ ಮಹತ್ವವನ್ನೂ ತಿಳಿಸುತ್ತಿರುವುದು ಒಳ್ಳೆಯ ಕೆಲಸ’ ಎಂದು ಶ್ಲಾಘಿಸಿದರು.

‘ಚಿಕ್ಕವಳಿದ್ದಾಗಿನಿಂದ ಮೇಘಾಲಯ ನೋಡಬೇಕೆಂಬ ಆಸೆ ಇತ್ತು. ಕ್ಲಬ್‌ನವರಿಗೆ ಈ ಬಗ್ಗೆ ತಿಳಿಸಿದಾಗ ಅವರು ಈಶಾನ್ಯ ಭಾರತ ಚೆನ್ನಾಗಿದೆ. ಅಲ್ಲಿ ಪ್ರವಾಸ ಮಾಡಿ ಎಂದು ಹೇಳಿದರು. ನನ್ನ ಪ್ಯಾಷನ್‌ ಬೈಕ್‌. ಪ್ರಾಂತೀಯ ತಾರತಮ್ಯದ ವಿಷಯವಾಗಿ ಎಲ್ಲೆಡೆ ಅರಿವು ಮೂಡಿಸುವ ಗುರಿಯೊಂದಿಗೆ ಈ ಸಂಚಾರ ಆರಂಭಿಸಿದೆ’ ಎಂದು ಅಮೃತಾ ತಿಳಿಸಿದರು.

‘ಈಶಾನ್ಯ ಭಾರತದಲ್ಲಿ ಸಂಚಾರ ಮುಗಿಯುವ ವೇಳೆಗೆ ಅಲ್ಲಿನ ಜನರು ತುಂಬಾ ಆಪ್ತರಾದರು. ಅವರು ಎಲ್ಲರಿಗೂ ಸಹಾಯ ಮಾಡುತ್ತಾರೆ. ಅವರ ಪ್ರೀತಿ ಕಂಡಮೇಲೆ 8 ಸಾವಿರ ಕಿ.ಮೀಗೆ ಮುಗಿಸಬೇಕಿದ್ದ ಸಂಚಾರವನ್ನು ವಿಸ್ತರಿಸಿದೆ. ಬಾಂಗ್ಲಾದೇಶ, ಮ್ಯಾನ್ಮಾರ್‌, ಚೀನಾ ಗಡಿಗಳಲ್ಲೂ ಸಂಚಾರ ಮಾಡಿದೆ. ಬಿಎಸ್‌ಎಫ್‌ನವರ ಕರ್ತವ್ಯವನ್ನು ಕಂಡು ಬೆರಗಾದೆ’ ಎಂದರು.

‘ಏಪ್ರಿಲ್‌ 25ಕ್ಕೆ ಉತ್ತರ ಪ್ರದೇಶದಲ್ಲಿ ಅಪಘಾತವಾಯಿತು. ಹಿಂದಿನಿಂದ ಕಾರ್‌ ಗುದ್ದಿತು. ಹೀಗಾಗಿ ನಾನು ಒಂದು ತಿಂಗಳು ವಿಶ್ರಾಂತಿ ತೆಗೆದುಕೊಂಡೆ. ಈ ಪ್ರವಾಸವನ್ನು ಮುಗಿಸಲೇಬೇಕು ಎಂದು ಅದೇ ಸ್ಥಳದಿಂದ ಸಂಚಾರ ಆರಂಭಿಸಿದೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಕಡೆಯವರು ಸಹಾಯ ಮಾಡಿದರು. ಇನ್ನೊಂದು ವಾರವಷ್ಟೆ ಸಂಚಾರ ಇದೆ. ಶಿವಮೊಗ್ಗಗೆ ಹೋಗುತ್ತೇನೆ’ ಎಂದು ಹೇಳಿದರು.

ಮಣಿಪಾಲ್‌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಟಿ.ವಿ.ಮೋಹನ್ ದಾಸ್ ಪೈ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿ. ಸೋಮಶೇಖರ್‌ ಇದ್ದರು.

ಬಿಬಿಎಂಪಿ ಅಧಿಕಾರಿ/ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಮೃತಾ ಜೋಶಿ ಅವರಿಗೆ ₹1 ಲಕ್ಷ ಗೌರವ ಸಹಾಯಧನ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಅಮೃತ್‌ ರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT