ಶುಕ್ರವಾರ, ಮಾರ್ಚ್ 5, 2021
27 °C
ಆರೋಗ್ಯ ಇಲಾಖೆ ಪ್ರವೇಶದ್ವಾರದಲ್ಲೇ ರಾಜಾರೋಷವಾಗಿ ತಂಬಾಕು ಉತ್ಪನ್ನ ಮಾರಾಟ

ಇಲ್ಲಿ ಧೂಮಪಾನಕ್ಕಿಲ್ಲ ನಿಯಂತ್ರಣ!

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಆನಂದರಾವ್ ವೃತ್ತದ ಬಳಿ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿ ಆವರಣದಲ್ಲಿ ‘ತಂಬಾಕು ಉತ್ಪನ್ನ ಸೇವನೆ ಆರೋಗ್ಯಕ್ಕೆ ಅಪಾಯಕರ’ ಎಂಬ ಸಂದೇಶಗಳೇನೋ ಕಾಣಿಸುತ್ತವೆ. ಆದರೆ, ಪ್ರವೇಶದ್ವಾರದ ಬಳಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಧೂಮಪಾನ ರಾಜಾರೋಷವಾಗಿಯೇ ನಡೆಯುತ್ತಿದೆ. 

ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯಿದೆ-2003ರ (ಕೋಟ್ಪಾ) ಪ್ರಕಾರ ಸಾರ್ವಜನಿಕ ಸ್ಥಳ ಹಾಗೂ ಕಚೇರಿಗಳಲ್ಲಿ ಧೂಮಪಾನ ಕಾನೂನು ಬಾಹಿರ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಪಡೆಯಬೇಕಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿದಲ್ಲಿ ದಂಡ ಹಾಕಿ, ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ರಾಜ್ಯದಾದ್ಯಂತ ಅರಿವು ಮೂಡಿಸುತ್ತಿದ್ದಾರೆ. ಆದರೆ, ಇಲಾಖೆಯ ಆಯುಕ್ತರ ಕಚೇರಿ ಆವರಣದಲ್ಲಿಯೇ ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನ ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಕಣ್ಣು  ಮುಚ್ಚಿಕೊಂಡಿದ್ದಾರೆ.  

ತಂಬಾಕು ಉತ್ಪನ್ನಗಳಿಂದ ಉಂಟಾಗುವ ಹಾನಿ ಕುರಿತು ಕಚೇರಿಯ ಪ್ರವೇಶದ್ವಾರ ಹಾಗೂ ಕಟ್ಟಡದ ಮುಂಭಾಗದಲ್ಲಿ ಭಾರಿ ಗಾತ್ರದ ಮಾಹಿತಿ ಫಲಕ ಹಾಕಲಾಗಿದೆ. ‘ಆರೋಗ್ಯ ಆಯ್ದುಕೊಳ್ಳಿ ತಂಬಾಕನ್ನಲ್ಲ’, ‘ತಂಬಾಕು ನಿಮ್ಮ ಉಸಿರನ್ನು ಕಸಿಯಲು ಬಿಡಬೇಡಿ’ ಎಂಬ ಸಂದೇಶವನ್ನೂ ಅದರಲ್ಲಿ ಕಾಣಬಹುದಾಗಿದೆ.

ಕಚೇರಿ ಆವರಣದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್, ಕರಾವಳಿ ಕೆಫೆ ಹಾಗೂ ಶ್ರೀಭೈರವೇಶ್ವರ ಎಂಟರ್‌ಪ್ರೈಸಸ್ ಅಂಗಡಿಗಳಲ್ಲಿ  ಸಿಗರೇಟ್ ಮಾರಾಟ ನಡೆಯುತ್ತಿದೆ. ‘ಇದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಕೃಪಾಕಟಾಕ್ಷವಿದೆ’ ಎಂದು ಸ್ಥಳೀಯರು ಆರೋಪ ಮಾಡುತ್ತಾರೆ.

ಇಲ್ಲಿ ಧೂಮಪಾನವೂ ನಿರಾತಂಕವಾಗಿ ಸಾಗಿದೆ.  ಸ್ವತಃ ಅಧಿಕಾರಿಗಳೇ ಬಹಿರಂಗವಾಗಿಯೇ ಸಿಗರೇಟು ಸೇದುತ್ತಾರೆ. ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳೂ ಧೂಮಪಾನ ಮಾಡಲೆಂದೇ ಇಲ್ಲಿಗೆ ಬರುತ್ತಾರೆ. ಅಂಗಡಿಗಳ ಆಸುಪಾಸಿನಲ್ಲಿ ಬಿದ್ದಿರುವ ಸಿಗರೇಟ್ ತುಂಡುಗಳೂ ಇದಕ್ಕೆ ಪುರಾವೆ ಒದಗಿಸುತ್ತವೆ. 

ಪರೋಕ್ಷ ಧೂಮಪಾನ: ‘ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಸಿಗರೇಟ್ ಮಾರಾಟ ಮಾಡಲಾಗುತ್ತಿದೆ. ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನದಂದು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. ಇಷ್ಟಾಗಿಯೂ ಮಾರಾಟಗಾರರು ಎಚ್ಚೆತ್ತುಕೊಂಡಿಲ್ಲ. ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕಾದ ಅಧಿಕಾರಿಗಳೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿರುವುದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು. 

‘ತಂಬಾಕು ಉತ್ಪನ್ನ ಮಾರುವ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಷ್ಟಾಗಿಯೂ ಎಚ್ಚೆತ್ತುಕೊಳ್ಳದಿದ್ದರೆ ಅಂಗಡಿಗಳನ್ನು ತೆರವುಗೊಳಿಸಲು ಸೂಚಿಸಬೇಕು. ಟೀ ಹಾಗೂ ತಂಪು ಪಾನೀಯ ಕುಡಿಯಲು ಹೋದವರೂ ಪರೋಕ್ಷವಾಗಿ ಸಿಗರೇಟಿನ ಹೊಗೆ ಸೇವಿಸುತ್ತಿದ್ದಾರೆ’ ಎಂದರು. 

‘ತಂಬಾಕು ಉತ್ಪನ್ನ ಸೇವಿಸಬೇಡಿ ಎಂದು ಆರೋಗ್ಯ ಇಲಾಖೆ ಜಾಹೀರಾತು ನೀಡುತ್ತದೆ. ಆದರೆ, ಇಲಾಖೆಯ ಆಯುಕ್ತರ ಕಚೇರಿ ಆವರಣದಲ್ಲಿಯೇ ಇವುಗಳ ಮಾರಾಟ ನಡೆಯುತ್ತಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂದು ಮಲ್ಲೇಶ್ವರದ ನಿವಾಸಿ ಮಂಜುಳಾ ಟೀಕಿಸಿದರು. 

‘ಶಾಲಾ–ಕಾಲೇಜುಗಳ ಆವರಣದಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧದ ಹೊಣೆ ಹೊತ್ತ ಇಲಾಖೆಯ ಆವರಣದಲ್ಲೇ ಇಂತಹದ್ದು ನಡೆಯುತ್ತದೆ ಎಂದರೆ ಏನರ್ಥ’ ಎಂದು ವಿಜಯನಗರದ ನಿವಾಸಿ ಅನಿರುದ್ಧ ಪ್ರಶ್ನಿಸಿದರು. 

‘ಕಟ್ಟುನಿಟ್ಟಾದ ಕ್ರಮ ಜಾರಿ’
‘ಇಲಾಖೆಯ ಆವರಣದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಅವಕಾಶವಿಲ್ಲ. ಅಂಗಡಿಗಳನ್ನು ಪರಿಶೀಲಿಸಿ, ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳು ಧೂಮಪಾನ ಮಾಡಿದಲ್ಲಿ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು. 


ಆರೋಗ್ಯ ಇಲಾಖೆ ಆಯುಕ್ತರ ಕಚೇರಿಯ ಪ್ರವೇಶ ದ್ವಾರದಲ್ಲಿ ಹಾಕಿರುವ ಫಲಕ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು