ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದಾಗ ಸುಲಿಗೆ: ಇಬ್ಬರು ಕಾನ್‌ಸ್ಟೆಬಲ್ ಅಮಾನತು

ದಂಪತಿಯಿಂದ ₹ 1 ಸಾವಿರ ಸುಲಿಗೆ ಮಾಡಿದ್ದ ಹೊಯ್ಸಳದ ಗಸ್ತು ಸಿಬ್ಬಂದಿ
Last Updated 11 ಡಿಸೆಂಬರ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ದಂಪತಿಯಿಂದ ₹ 1 ಸಾವಿರ ಸುಲಿಗೆ ಮಾಡಿದ ಆರೋಪದ ಮೇರೆಗೆ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ.

‘ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಸುಲಿಗೆ ಮಾಡಿದ್ದ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ರಾಜೇಶ್ ಮತ್ತು ಕಾನ್‌ಸ್ಟೆಬಲ್ ನಾಗೇಶ್ ಅವರನ್ನು ಅಮಾನತು ಮಾಡಲಾಗಿದೆ. ಪ್ರಕರಣ ಕುರಿತು ತನಿಖೆ ನಡೆಸುವಂತೆ ಸೂಚಿಸಲಾಗಿದೆ’ ಎಂದು ಡಿಸಿಪಿ ಅನೂಪ್‌ ಶೆಟ್ಟಿ ತಿಳಿಸಿದ್ದಾರೆ.

‘ಡಿ.8ರಂದು ಸ್ನೇಹಿತರ ಮನೆಯಲ್ಲಿದ್ದ ಕಾರ್ಯಕ್ರಮ ಮುಗಿಸಿ ರಾತ್ರಿ 12.30ರ ವೇಳೆಯಲ್ಲಿ ನಾನು ಹಾಗೂ ಪತ್ನಿ, ಮಾನ್ಯತಾ ಟೆಕ್‌ ಬಳಿ ಬರುತ್ತಿರುವಾಗ ಇಬ್ಬರು ಪೊಲೀಸರು ಅಡ್ಡಗಟ್ಟಿ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದೀರಿ. ₹ 3 ಸಾವಿರ ದಂಡ ನೀಡುವಂತೆ ಬೇಡಿಕೆಯಿಟ್ಟಿದ್ದರು. ಕೊನೆಗೆ ಡಿಜಿಟಲ್‌ ಪಾವತಿ ಮೂಲಕ ₹ 1 ಸಾವಿರ ಪಡೆದಿದ್ದರು’ ಎಂದು ಆರೋಪಿಸಿ ಕಾರ್ತಿಕ್‌ ಪಾತ್ರಿ ಎನ್ನುವವರು ಸರಣಿ ಟ್ವೀಟ್‌ ಮಾಡಿ ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿದ್ದರು. ಅದನ್ನು ಗಮನಿಸಿದ್ದ ಡಿಸಿಪಿ ಅಂದು ಆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಪತ್ತೆಗೆ ಸೂಚಿಸಿದ್ದರು.

‘ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ನೆಲೆಸಿದ್ದೇವೆ. ನಮ್ಮ ಬಳಿ ಬಾಕ್ಸ್‌ನಲ್ಲಿ ಕೇಕ್‌ ಬಿಟ್ಟರೆ ಬೇರೇನೂ ಇರಲಿಲ್ಲ. ಮೊಬೈಲ್‌ನಲ್ಲಿ ಆಧಾರ್‌ ಕಾರ್ಡ್‌ ಫೋಟೊ ಪ್ರತಿಗಳಿದ್ದವು. ಅದನ್ನು ತೋರಿಸಿದರೂ ಪೊಲೀಸರು ಸಂಬಂಧ, ಕೆಲಸದ ಸ್ಥಳ, ಪೋಷಕರ ವಿವರ... ಹೀಗೆ ಹಲವು ರೀತಿ ಪ್ರಶ್ನಿಸಿ ಬೆದರಿಸಿದರು. ಅದಕ್ಕೆಲ್ಲಾ ತಾಳ್ಮೆಯಿಂದಲೇ ಉತ್ತರಿಸಿದೆವು. ಒಬ್ಬರು ಚಲನ್‌ ತೆಗೆದುಕೊಂಡು ಆಧಾರ್‌ ಸಂಖ್ಯೆ ಹಾಗೂ ಹೆಸರು ಬರೆಯುಲು ಮುಂದಾದರು. ಅದನ್ನು ಪ್ರಶ್ನಿಸಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ರಾತ್ರಿ 11ರ ನಂತರ ತಿರುಗಾಡಲು ಅವಕಾಶ ಇಲ್ಲವೆಂದು ಒಬ್ಬ ಸಿಬ್ಬಂದಿ ಹೇಳಿದರು. ಅಂತಹ ನಿಯಮವಿದೆಯೇ? ಅದರ ಅರಿವು ನಮಗೆ ಇಲ್ಲ ಎಂದಿದ್ದಕ್ಕೆ ಪೊಲೀಸರು ಬೆದರಿಕೆ ಹಾಕಿದರು. ಮೊಬೈಲ್‌ ಕಸಿದುಕೊಂಡು ₹ 3 ಸಾವಿರ ದಂಡ ಕಟ್ಟುವಂತೆ ಹೇಳಿದರು. ದಂಡ ಕಟ್ಟದಿದ್ದರೆ ಬಂಧಿಸಲಾಗುವುದೆಂದು ಬೆದರಿಸಿದರು’ ಎಂದು ಹೇಳಿದ್ದಾರೆ.

‘ಪತ್ನಿ ಕಣ್ಣೀರು ಹಾಕಿದರೂ ಅವರು ಸುಮ್ಮನಾಗಲಿಲ್ಲ. ಕೊನೆಯಲ್ಲಿ ನಿಮಗೆ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ. ಕಡಿಮೆ ಹಣ ನೀಡುವಂತೆ ಕೇಳಿದರು. ಡಿಜಿಟಲ್‌ ಪಾವತಿ ಮೂಲಕ ₹ 1 ಸಾವಿರ ನೀಡಲಾಯಿತು. ಕಾನೂನು ರಕ್ಷಕರು ನಾಗರಿಕರನ್ನು ನಡೆಸಿಕೊಳ್ಳುವುದು ಹೀಗೆಯೇ’ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದರು.

ಆಕ್ರೋಶ: ಪೊಲೀಸ್‌ ಸಿಬ್ಬಂದಿಯ ಈ ರೀತಿಯ ನಡವಳಿಕೆಗೆ ನಾಗರಿಕರು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಆಕ್ರೋಶ

ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಆರಂಭಿಸಿದ ಬಳಿಕ ಮರ್ಯಾದಸ್ಥ ದಂಪತಿ ರಾತ್ರಿ ರಸ್ತೆಯಲ್ಲಿ ನಡೆದರೆ ಪೊಲೀಸರು ತನಿಖೆ ನಡೆಸುತ್ತಾರೆ. ರೌಡಿ ಶೀಟರ್‌ಗಳು ರಾತ್ರಿ ರಸ್ತೆಗಳನ್ನು ಆಕ್ರಮಿಸಿಕೊಳ್ಳುತ್ತಾರೆ. ‘ಘನತೆ-ಮರ್ಯಾದೆ ಮುಕ್ತ ಕರ್ನಾಟಕ’ ಮಾಡಲು ಹೊರಟಿದ್ದೀರಾ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕಪ್ರಕಾಶ ರಾಥೋಡ್‌ ಅವರು ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT