ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔಷಧ ಉತ್ಪನ್ನಗಳ ಮೇಲೆ ಮುದ್ರಣ ದೋಷ: ದಾಸ್ತಾನು ವಾಪಸ್‌ಗೆ ಗುಂಡೂರಾವ್ ಸೂಚನೆ

Published 21 ಮೇ 2024, 16:20 IST
Last Updated 21 ಮೇ 2024, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ (ಕೆಎಸ್‌ಎಂಎಸ್‌ಸಿಎಲ್‌) ಪುಷ್ಕರ್ ಫಾರ್ಮಾ ಕಂಪನಿ ಸರಬರಾಜು ಮಾಡಿರುವ ಔಷಧ ಉತ್ಪನ್ನಗಳ ಮೇಲೆ ಮುದ್ರಣ ದೋಷವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದಾಸ್ತಾನಿನಲ್ಲಿರುವ ಈ ಉತ್ಪನ್ನಗಳನ್ನು ವಾಪಸ್ ಕಳಿಸಲು ಸೂಚಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

ಕಂಪನಿಯು ಸರಬರಾಜು ಮಾಡಿರುವ ‘ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್’ ದ್ರಾವಣದ ಲೇಬಲ್‌ ಮೇಲೆ ‘ಪಶುಗಳಿಗೆ’ ಎಂಬ ಬಳಕೆಯಿಂದ ಉಂಟಾದ ಗೊಂದಲದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. 

‘ಕಂಪನಿಯು ಸರಬರಾಜು ಮಾಡಿರುವ ಔಷಧ ಉತ್ಪನ್ನದಲ್ಲಿ ದೋಷವಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಔಷಧ ಪರಿಶೀಲನೆ ವೇಳೆ ಇದು ಪಶುಗಳಿಗೆ ಬಳಸುವ ಔಷಧವಲ್ಲ ಎಂಬುದು ದೃಢಪಟ್ಟಿದ್ದು, ಮುದ್ರಣ ದೋಷದಿಂದ ಹೀಗಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಗೋದಾಮುಗಳಿಂದ ಔಷಧ ಉತ್ಪನ್ನವನ್ನು ಹಿಂಪಡೆಯಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಲೇಬಲ್ ಬದಲಾಗಿರುವ ಬಗ್ಗೆ ಪುಷ್ಕರ್ ಫಾರ್ಮಾ ಕಂಪನಿಯು ಮೊದಲೇ ಮಾಹಿತಿ ನೀಡಿದ್ದು, ಆರೋಗ್ಯ ಅಧಿಕಾರಿಗಳು ಕೂಡ ಸೂಕ್ತ ಪರಿಶೀಲನೆ ನಡೆಸಿದ್ದಾರೆ. ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ರಾಜ್ಯದ ಜನರ ಆರೋಗ್ಯ ವಿಷಯದಲ್ಲಿ ಯಾವುದೇ ಪ್ರಮಾದ ನಡೆಯಲು ನಮ್ಮ ಇಲಾಖೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT