ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಪ ಹೊರಿಸಿ ಥಳಿತ: ಕೈ ಕಳೆದುಕೊಂಡ ಯುವಕ’

* ವರ್ತೂರು ಪೊಲೀಸರಿಂದ ದೌರ್ಜನ್ಯ ಆರೋಪ * ಕಮಿಷನರ್‌ಗೆ ದೂರು ನೀಡಿದ ತಂದೆ
Last Updated 30 ನವೆಂಬರ್ 2021, 16:56 IST
ಅಕ್ಷರ ಗಾತ್ರ

ಬೆಂಗಳೂರು: ‘ಕಳ್ಳತನ ಆರೋಪ ಹೊರಿಸಿ ಮಗನನ್ನು ಠಾಣೆಗೆ ಎಳೆದೊಯ್ದಿದ್ದ ವರ್ತೂರು ಪೊಲೀಸರು ಮನಬಂದಂತೆ ಥಳಿಸಿದ್ದು, ಇದರಿಂದ ಆತ ಬಲಗೈಯನ್ನೇ ಕಳೆದುಕೊಂಡಿದ್ದಾನೆ’ ಎಂದು ಅಮ್ಜದ್ ಖಾನ್ ಎಂಬುವರು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದು, ಈ ಆರೋಪದ ಬಗ್ಗೆ ವೈಟ್‌ಫೀಲ್ಡ್ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

‘ರಾಜರೆಡ್ಡಿ ಬಡಾವಣೆಯ ಈದ್ಗಾ ರಸ್ತೆಯ ನಿವಾಸಿ ಅಮ್ಜದ್ ಖಾನ್, ತಮ್ಮ ಮಗ ಸಲ್ಮಾನ್‌ ಖಾನ್‌ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದಾಗಿ ಮೂರು ಪುಟಗಳ ದೂರು ನೀಡಿದ್ದಾರೆ. ಕೆಲ ವೈದ್ಯಕೀಯ ಪ್ರಮಾಣ ಪತ್ರಗಳನ್ನೂ ಲಗತ್ತಿಸಿದ್ದಾರೆ. ಎಲ್ಲವನ್ನೂ ಪರಿಶೀಲಿಸಿರುವ ಕಮಿಷನರ್, ಎಸಿಪಿ ತನಿಖೆಗೆ ಸೂಚನೆ ನೀಡಿದ್ದಾರೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ದೂರಿನ ವಿವರ: ‘ಮಗ ಸಲ್ಮಾನ್ ಖಾನ್ (22) ಕೋಳಿ ವ್ಯಾಪಾರ ಮಾಡುತ್ತಾನೆ. ಅ. 27ರಂದು ರಾತ್ರಿ 11.30 ಗಂಟೆಗೆ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದ ವರ್ತೂರು ಠಾಣೆಯ ಅಪರಾಧ ವಿಭಾಗದ ಪೊಲೀಸರು, ಕಳ್ಳತನ ಆರೋಪ ಹೂರಿಸಿ ಮಗನನ್ನು ಠಾಣೆಗೆ ಎಳೆದೊಯ್ದಿದ್ದರು’ ಎಂದು ಅಮ್ಜದ್ ಖಾನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಯಾವುದೇ ಎಫ್‌ಐಆರ್ ಇಲ್ಲದಿದ್ದರೂ ವಿಚಾರಣೆ ನೆಪದಲ್ಲಿ ಮಗನನ್ನು ಸೆಲ್‌ನಲ್ಲಿಟ್ಟು ಹಲ್ಲೆ ಮಾಡಿದ್ದರು. ನಾನು ಹಾಗೂ ಪತ್ನಿ, ಠಾಣೆಗೆ ಹೋಗಿ ವಿಚಾರಿಸಿದರೂ ಯಾವುದೇ ಮಾಹಿತಿ ನೀಡಿರಲಿಲ್ಲ. ಸೆಲ್‌ನಲ್ಲಿದ್ದ ಮಗನನ್ನು ಮಾತನಾಡಿಸಿದಾಗ, ಕಳ್ಳತನ ಆರೋಪ ಹೊರಿಸಿ ಪೊಲೀಸರ ಥಳಿಸುತ್ತಿದ್ದಾರೆಂದು ಹೇಳಿ ಗೋಳಾಡಿದ್ದ.’

‘ಪೊಲೀಸರ ಹಲ್ಲೆಯಿಂದಾಗಿ ಬಲಗೈಗೆ ತೀವ್ರ ಪೆಟ್ಟು ಬಿದ್ದು, ರಕ್ತ ಸಹ ಹೆಪ್ಪುಗಟ್ಟಿತ್ತು. ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಇದೇ ಸ್ಥಿತಿಯಲ್ಲೇ ಆತ ಸೆಲ್‌ನಲ್ಲಿ ನರಳಾಡುತ್ತಿದ್ದ. ಆತನನ್ನು ಬಿಡುವಂತೆ ಕೋರಿದಾಗ, ಪೊಲೀಸರು ಹಣ ಕೇಳಿದರು. ಹಣವಿಲ್ಲವೆಂದು ಹೇಳಿದ್ದೆ. ಜ್ವರ ಹೆಚ್ಚಾಗುತ್ತಿದ್ದಂತೆ ಮಗನನ್ನು ಬಿಟ್ಟು ಕಳುಹಿಸಿದರು’ ಎಂದೂ ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT