ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಭಾಷೆಗಳ ರಕ್ಷಣೆ ಆದ್ಯತೆಯಾಗಲಿ: ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು

Last Updated 15 ನವೆಂಬರ್ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಭಾಷೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಭಾಷೆಗಳಲ್ಲೇ ಪಠ್ಯವಸ್ತು ರಚಿಸಬೇಕು’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು.

ಪಿಇಎಸ್‌ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರ‍್ಯಾಂಕ್‌ ವಿಜೇತರಿಗೆ ಪದಕ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಿ ಸೋಮವಾರ ಮಾತನಾಡಿದರು.

‘ವೈದ್ಯಕೀಯ ಸೇರಿದಂತೆ ಎಲ್ಲ ಶಿಕ್ಷಣವನ್ನೂ ಮಾತೃಭಾಷೆಯಲ್ಲೇ ಬೋಧಿಸಬೇಕು. ನನ್ನನ್ನೂ ಒಳಗೊಂಡಂತೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ವಿ.ರಮಣ ಹೀಗೆ ಅನೇಕ ಗಣ್ಯರು ಮಾತೃಭಾಷೆಯಲ್ಲೇ ಕಲಿತವರು. ಹೀಗಾಗಿ ಆಡುಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು’ ಎಂದರು.

‘ಕೃಷಿಯು ರಾಷ್ಟ್ರದ ಬೆನ್ನೆಲುಬು. ಅದರ ಬಲವರ್ಧನೆಗೆ ಎಲ್ಲರೂ ಕಟಿಬದ್ಧರಾಗಬೇಕು. ಈಗ ಬಹುಪಾಲು ಮಂದಿ ವ್ಯವಸಾಯದಿಂದ ವಿಮುಖರಾಗುತ್ತಿದ್ದಾರೆ. ಅವರನ್ನು ಆ ಕಾಯಕದಲ್ಲೇ ತೊಡಗಿಕೊಳ್ಳುವಂತೆ ಮಾಡಬೇಕು. ಮಾರುಕಟ್ಟೆ, ಬೆಳೆದ ಬೆಳೆಗೆ ಸೂಕ್ತ ದರ, ಹವಾಮಾನ ಬದಲಾವಣೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಅವುಗಳಿಗೆ ಸೂಕ್ತ ಪರಿಹಾರ ಕಂಡುಹಿಡಿಯುವ ದಿಸೆಯಲ್ಲಿ ವಿಶ್ವವಿದ್ಯಾಲಯಗಳು ಚಿಂತಿಸಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು’ ಎಂದು ತಿಳಿಸಿದರು.

‘ಪರಿಸರ ಮತ್ತು ಸಂಸ್ಕೃತಿ ಸಮ್ಮಿಳಿತಗೊಂಡಾಗ ಮಾತ್ರ ಭವಿಷ್ಯ ಉಜ್ವಲವಾಗಿರುತ್ತದೆ.ಸ್ವಾವಲಂಬಿ ಭಾರತದ ನಿರ್ಮಾಣ ನಮ್ಮೆಲ್ಲರ ಕನಸಾಗಬೇಕು. ನಾವೀಗ ಉ‍ಪಗ್ರಹಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಕೋವಿಡ್‌ಗೆ ಲಸಿಕೆ ಕಂಡುಹಿಡಿಯುವ ಮೂಲಕ ನಮ್ಮ ವಿಜ್ಞಾನಿಗಳು ಜಗತ್ತಿಗೆ ಹೊಸ ಸಂದೇಶ ರವಾನಿಸಿದ್ದಾರೆ. ಭಾರತವನ್ನು ಜ್ಞಾನದ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಬೇಕು. ಈ ಕಾರ್ಯದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯಗಳ ಪಾತ್ರ ಬಹುಮುಖ್ಯ’ ಎಂದರು.

‘ನಾವೀಗ 4ನೇ ಕೈಗಾರಿಕಾ ಕ್ರಾಂತಿಯ ಹೆಬ್ಬಾಗಿಲಿನಲ್ಲಿದ್ದೇವೆ. ಹೀಗಾಗಿ ವಿಶ್ವವಿದ್ಯಾಲಯಳು ವಿದ್ಯಾರ್ಥಿಗಳನ್ನು 5ಜಿ ಸೇರಿದಂತೆ ಇನ್ನಿತರ ಹೊಸ ತಂತ್ರಜ್ಞಾನಗಳಿಗೆ ಅಣಿಗೊಳಿಸಬೇಕಿದೆ. ಕೃಷಿ ಸೇರಿದಂತೆ ಎಲ್ಲಾ ವಲಯಗಳೂ ಡ್ರೋಣ್‌ ತಂತ್ರಜ್ಞಾನದತ್ತ ತೆರೆದುಕೊಳ್ಳುತ್ತಿವೆ’ ಎಂದೂ ಹೇಳಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್, ಸಚಿವ ಬೈರತಿ ಬಸವರಾಜ್‌, ವಿಶ್ವವಿದ್ಯಾಲಯದ ಸಮಕುಲಾಧಿಪತಿ ಪ್ರೊ.ಡಿ.ಜವಹರ್‌, ಕುಲಪತಿ ಜೆ.ಸೂರ್ಯಪ್ರಸಾದ್‌,ಕುಲಸಚಿವ ಕೆ.ಎಸ್‌.ಶ್ರೀಧರ್ ಇದ್ದರು.

ಕನ್ನಡದಲ್ಲೇ ಶುಭ ಕೋರಿದ ಉಪರಾಷ್ಟ್ರಪತಿ

ಕನ್ನಡದಲ್ಲೇ ಮಾತು ಆರಂಭಿಸಿದ ವೆಂಕಯ್ಯನಾಯ್ಡು ಅವರು ಪದವಿ ಪಡೆದ ಹಾಗೂ ರ‍್ಯಾಂಕ್‌ ವಿಜೇತರಾದವರಿಗೆ ಕನ್ನಡದಲ್ಲೇ ಶುಭಕೋರಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಕೂಡ ಕನ್ನಡದಲ್ಲೇ ಮಾತು ಆರಂಭಿಸಿದರು. ಬಳಿಕ ಹಿಂದಿಯಲ್ಲಿ ಭಾಷಣ ಮಾಡಿದರು.

₹35 ಕೋಟಿ ವಿದ್ಯಾರ್ಥಿ ವೇತನ

‘ವಿದ್ಯಾರ್ಥಿಗಳನ್ನು ಕಲಿಕೆಯತ್ತ ಉತ್ತೇಜಿಸುವ ಸಲುವಾಗಿ 2013ರಿಂದ ಇಲ್ಲಿಯವರೆಗೆ ಅಂದಾಜು ₹35 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ ಹೇಳಿದರು.

‘ನಮ್ಮ ವಿಶ್ವವಿದ್ಯಾಲಯವು ಗುಣಮಟ್ಟದ ಹಾಗೂ ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳನ್ನು ಉದ್ಯೋಗದಾತರನ್ನಾಗಿ ರೂಪಿಸಲು ಒತ್ತು ಕೊಡಲಾಗುತ್ತಿದೆ. ಡಿಆರ್‌ಡಿಒ ಹಾಗೂ ಇಸ್ರೊ ಸಹಯೋಗದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎರಡು ಉಪಗ್ರಹಗಳನ್ನು ತಯಾರಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಸದ್ಯ 20 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT