ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಆಸ್ತಿ ಹೆಚ್ಚಿಸಿದ ವಿಶ್ವಗುರು: ಲೇಖಕಿ ಆರ್‌. ಸುನಂದಮ್ಮ

‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’ ಕೃತಿ ಬಿಡುಗಡೆ
Published 31 ಮಾರ್ಚ್ 2024, 15:55 IST
Last Updated 31 ಮಾರ್ಚ್ 2024, 15:55 IST
ಅಕ್ಷರ ಗಾತ್ರ

ಬೆಂಗಳೂರು: ‘ಕುಟುಂಬವಿಲ್ಲ, ಮನೆಯಿಲ್ಲ. ಹಾಗಾಗಿ ಅವರು ದುಡ್ಡು ಮಾಡಲ್ಲ ಎಂದೆಲ್ಲ ‘ವಿಶ್ವಗುರು’ ಬಗ್ಗೆ ನಿರೂಪಣೆಗಳನ್ನು ತುಂಬಲಾಗಿದೆ. ಅವರು ಆರ್‌ಎಸ್‌ಎಸ್‌ಗೆ ಸುರಿದಿದ್ದಾರೆ. ಹಾಗಾಗಿ ಅದರ ಆಸ್ತಿ ನೂರು ಪಟ್ಟು ಹೆಚ್ಚಾಗಿದೆ’ ಎಂದು ಲೇಖಕಿ ಆರ್‌. ಸುನಂದಮ್ಮ ಆರೋಪಿಸಿದರು.

ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘2ಜಿ ಸ್ಪೆಕ್ಟ್ರಂ ಹಗರಣ ನಡೆದಿದೆ ಎಂದು ಬಹಳಷ್ಟು ಹೋರಾಟಗಳು ನಡೆದವು. ಕೋರ್ಟ್‌ನಲ್ಲಿ ಪ್ರಕರಣವೇ ಬಿದ್ದು ಹೋಯಿತು. ಊಹಾಪೋಹದ ಅಂಕಿಅಂಶಗಳನ್ನು ಆಧರಿಸಿ ನಡೆದ ಹೋರಾಟ ಸರ್ಕಾರವೇ ಬದಲಾಗುವಷ್ಟು ದೊಡ್ಡ ಪರಿಣಾಮ ಬೀರಿತು. ಆದರೆ, ಈಗ ಲಕ್ಷ, ಕೋಟಿ ರೂಪಾಯಿಗಳಲ್ಲಿ ಕಿಕ್‌ ಬ್ಯಾಕ್‌ ಪಡೆಯುತ್ತಿರುವ ಭ್ರಷ್ಟಾಚಾರಗಳ ವಿರುದ್ಧ ಹೋರಾಟ ನಡೆಯುತ್ತಿಲ್ಲ’ ಎಂದು ವಿಷಾದಿಸಿದರು.

ನಿಖರ ಅಂಕಿ ಅಂಶಗಳು ವಸ್ತುಸ್ಥಿತಿಯನ್ನು ತಿಳಿಸುತ್ತವೆ. ಈಗ ಅಂಕಿಅಂಶಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ತಿದ್ದಲು ಒಪ್ಪದ ಅಧಿಕಾರಿಗಳ ಮೇಲೆ ದೂರು, ಕಿರುಕುಳ ನೀಡಲಾಗುತ್ತದೆ. ಜೈಲಿಗೆ ಕಳುಹಿಸಲಾಗುತ್ತದೆ. ಇಂಥ ಅನೇಕ ಮಾಹಿತಿಗಳು ಈ ಕೃತಿಯಲ್ಲಿವೆ. ಯುವಜನರಿಗಷ್ಟೇ ಅಲ್ಲ, ಕಾಂಗ್ರೆಸಿಗರಾಗಿದ್ದು, ಮೋದಿ ಮೋಡಿಗೆ ಒಳಗಾಗಿ ಬಿಜೆಪಿಗರಾಗಿರುವ 60 ವರ್ಷ ದಾಟಿದವರಿಗೂ ಈ ಕೃತಿಯನ್ನು ಓದಿಸಬೇಕು ಎಂದು ಸಲಹೆ ನೀಡಿದರು.

ಲೇಖಕಿ ಕೆ.ಷರೀಫಾ ಮಾತನಾಡಿ, ‘ಆರ್‌ಎಸ್‌ಎಸ್‌ನಿಂದ ಹೊರಬಂದು ಅದರ ಅನುಭವವನ್ನು ಬರೆದ ಮೊದಲ ಮಹಿಳೆ ಲತಾಮಾಲ ಅವರು ಈ ಕೃತಿಯಲ್ಲಿ ಐದು ಭಾಗಗಳಾಗಿ ವಿವರ ನೀಡಿದ್ದಾರೆ. ಆರ್‌ಎಸ್‌ಎಸ್‌ ಭ್ರಮೆಯಿಂದ ಹೊರಬಂದಿರುವುದು ಮೊದಲ ಭಾಗದಲ್ಲಿದೆ. ಆರ್‌ಎಸ್‌ಎಸ್‌–ಹಿಂದುತ್ವದ ವಿಚಾರಗಳು ಎರಡನೇ ಭಾಗದಲ್ಲಿದೆ. ಹಿಂದುತ್ವ ಮಾಡುತ್ತಿರುವ ಅನ್ಯಾಯ, ಜಿಹಾದ್‌ ಸಹಿತ ಹಿಂದುತ್ವದ ನಿರೂಪಣೆ ಮೂರನೇ ಭಾಗದಲ್ಲಿದೆ. ಪ್ರಭುತ್ವವು ಜನರಿಗೆ ಹಿಂದುತ್ವದ ನಶೆ ಏರಿಸಿ ಸಾರ್ವಜನಿಕ ಸಂಸ್ಥೆಗಳನ್ನು ಹೇಗೆ ಮಾರುತ್ತಿದೆ ಎಂಬುದನ್ನು ನಾಲ್ಕನೇ ಭಾಗದಲ್ಲಿ ನೀಡಿದ್ದಾರೆ. ಇದಕ್ಕೆ ಪರಿಹಾರವೇನು ಎಂಬುದನ್ನು ಕೊನೆಯ ಭಾಗದಲ್ಲಿ ನೀಡಿದ್ದಾರೆ’ ಎಂದರು.

ಬರಹಗಾರ ಜಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಎ.ಆರ್‌.ವಾಸವಿ, ಗ್ರಾಮೀಣಾಭಿವೃದ್ಧಿ ತಜ್ಞ ಕೆ.ಪಿ.ಸುರೇಶ್‌, ಅಂಕಣಕಾರ ಶಿವಸುಂದರ, ಕೃತಿಕರ್ತೃ ಲತಾಮಾಲ, ಪ್ರಕಾಶಕ ಅಭಿರುಚಿ ಗಣೇಶ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT