ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ದಾಳವಾಗಿ ಚರಿತ್ರೆ ಬಳಕೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ

ಮಹಾ ಅಧಿವೇಶನದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ
Published 15 ಮಾರ್ಚ್ 2024, 14:18 IST
Last Updated 15 ಮಾರ್ಚ್ 2024, 14:18 IST
ಅಕ್ಷರ ಗಾತ್ರ

ಬೆಂಗಳೂರು: ‘ಚರಿತ್ರೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದ ಸಮಾಜದಲ್ಲಿ ಬಿಕ್ಕಟ್ಟು ಎದುರಾಗಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ, ಸರ್ಕಾರಿ ಕಲಾ ಕಾಲೇಜು, ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ರಾಜ್ಯ ಪತ್ರಾಗಾರ ಇಲಾಖೆಯ ಆಶ್ರಯದಲ್ಲಿ ನಡೆದ ‘ಕರ್ನಾಟಕ ಇತಿಹಾಸ ಪರಿಷತ್ತಿನ 34ನೇ ವಾರ್ಷಿಕ ಮಹಾ ಅಧಿವೇಶನ’ದಲ್ಲಿ ಅವರು ಮಾತನಾಡಿದರು.

‘ಚರಿತ್ರೆಯು ಶೈಕ್ಷಣಿಕ ಚಹರೆ ಕಳೆದುಕೊಳ್ಳುತ್ತಿದೆಯೇ ಎನ್ನುವ ಆತಂಕ ಕಾಡಲಾರಂಭಿಸಿದೆ. ಸತ್ಯಾಂಶವಿರುವ ಇತಿಹಾಸವನ್ನು ಸಮಾಜಕ್ಕೆ ಇತಿಹಾಸಕಾರರು ತಿಳಿಸಬೇಕು. ಅಧ್ಯಯನಶೀಲ ರಾಜಕಾರಣಿಗಳೂ ನೈಜ ಇತಿಹಾಸವನ್ನೇ ಸಮಾಜದ ಎದುರು ಪ್ರಸ್ತುತ ಪಡಿಸಬೇಕು’ ಎಂದು ಕರೆ ನೀಡಿದರು.

‘ಸುಳ್ಳು ಸುದ್ದಿ ಹಾಗೂ ಇತಿಹಾಸ ತಿರುಚುವ ಕಾರಣಕ್ಕೆ ಸಮಾಜ ಬಿಕ್ಕಟ್ಟಿನಲ್ಲಿದೆ. ಆದ್ದರಿಂದ, ನೈಜ ಚರಿತ್ರೆಯನ್ನು ರಚಿಸುವ ಹಾಗೂ ಪ್ರತಿಪಾದಿಸುವ ದೊಡ್ಡ ಜವಾಬ್ದಾರಿ ಇತಿಹಾಸಕರರ ಮೇಲಿದೆ. ಆಪತ್ತಿನ ಸಂದರ್ಭದಲ್ಲಿ ಇತಿಹಾಸಕಾರರು ಹೆಚ್ಚು ಮಾತನಾಡಬೇಕು. ಚರಿತ್ರೆಯ ಚಾರಿತ್ರ್ಯ ಹರಣವಾಗದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮಾತನಾಡಿ, ‘ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಬೇಕಾದಂತೆ ಇತಿಹಾಸವನ್ನು ತಿರುಚಿಕೊಳ್ಳುತ್ತಿವೆ. ತಂತ್ರಜ್ಞಾನವು ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿದ್ದು, ಇತಿಹಾಸ ಬೇಕು ಎನ್ನುವ ಮನಸ್ಥಿತಿಯಲ್ಲಿ ಯಾರೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಭಾರತಕ್ಕೆ ಭವ್ಯವಾದ ಇತಿಹಾಸವಿದೆ. ಆದರೆ, ಪ್ರಚಾರ ಕಡಿಮೆ ಇದೆ. ಅದೇ ವಿದೇಶದಲ್ಲಿ ಕಡಿಮೆ ಸಂಖ್ಯೆಯ ಪಾರಂಪರಿಕ ತಾಣಗಳಿದ್ದರೂ ಅವುಗಳಿಗೆ ಹೆಚ್ಚಿನ ಪ್ರಚಾರ ದೊರೆಯುತ್ತಿದೆ’ ಎಂದು ಹೇಳಿದರು.

ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿ, ‘ನಮ್ಮ ಸಂಸ್ಕೃತಿ, ದೇಶವನ್ನು ನಾವೇ ಹಾಳು ಮಾಡುತ್ತಿದ್ದೇವೆ. ಅಲ್ಲದೇ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಹೇಳಿದರು.

‘ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿಲ್ಲ, ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಹೇಳಿಕೆ ನೀಡಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಟಿಪ್ಪು ಹೋರಾಟ ನಡೆಸಿದ್ದಕ್ಕೆ ದಾಖಲೆಗಳಿವೆ. ಇತಿಹಾಸಕಾರರು ನೈಜ ವಿಷಯವನ್ನು ಸಮಾಜದ ಎದುರು ಪ್ರಸ್ತುತ ಪಡಿಸಬೇಕು’ ಎಂದು ಕರೆ ನಿಡಿದರು.

‘ಟಿಪ್ಪು ಸುಲ್ತಾನ್‌ ಮುಸ್ಲಿಂ ಹಾಗೂ ಶಿವಾಜಿ ಮಹಾರಾಜ್‌ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಹೇಳಿ ಅವರನ್ನು ಆ ಸಮಾಜಕ್ಕೆ ಸೀಮಿತಿಗೊಳಿಸಿದರೆ ದೇಶಕ್ಕೆ ಮಾಡಿದ ಅನ್ಯಾಯ’ ಎಂದು ಪ್ರತಿಪಾದಿಸಿದರು.

ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಅಶ್ವತ್ಥನಾರಾಯಣ, ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಟಿ.ಶ್ರೀನಿವಾಸ ನಾಯಕ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ.ಜಗದೀಶ್‌ ಹಾಜರಿದ್ದರು.

‘ಜಿಲ್ಲೆಗೊಂದು ವಿ.ವಿ: ನಿರ್ವಹಣೆ ಕಷ್ಟ’
‘ಹಿಂದಿನ ಸರ್ಕಾರಗಳು ಪ್ರತಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸಿದ್ದರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಕೆಲವು ವಿ.ವಿಗಳಲ್ಲಿ ನಿವೃತ್ತಿ ವೇತನ ಕೊಡಲು ಆರ್ಥಿಕ ಸಮಸ್ಯೆ ಎದುರಾಗಿದೆ. ಆಸ್ಪತ್ರೆ ರಸ್ತೆ ಕಾಲೇಜು ಕೇಳಿದರೆ ಮಂಜೂರು ಮಾಡಬಹುದು. ಆದರೆ ಜಿಲ್ಲೆಗೊಂದು ವಿಶ್ವವಿದ್ಯಾವಿದ್ಯಾಲಯ ಕೇಳಿದರೆ ಅವುಗಳ ನಿರ್ವಹಣೆ ಕಷ್ಟವಾಗಲಿದೆ. ಶಿಕ್ಷಣ ಇಲಾಖೆಗೆ ಬರುತ್ತಿರುವ ಅನುದಾನ ಸಹ ಕಡಿಮೆಯಾಗಿದೆ’ ಎಂದು ಸುಧಾಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT