ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕದಲ್ಲಿ ಶಾ ದಾಪುಗಾಲು

ಚಿಕ್ಕಬಳ್ಳಾಪುರದ ಮೇಲೆ ಕಣ್ಣಿಟ್ಟ ಬಿಜೆಪಿ ಅಧ್ಯಕ್ಷ
Last Updated 10 ಏಪ್ರಿಲ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಶತಾಯಗತಾಯ ಕಮಲ ಅರಳಿಸಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನೇ ಪ್ರಚಾರದ ಕಣಕ್ಕೆ ಇಳಿಸಿದೆ.

ಶಾ ಅವರು ಬುಧವಾರ ಯಲಹಂಕದ ಗಲ್ಲಿ ಗಲ್ಲಿಗಳಲ್ಲಿ ರೋಡ್‌ ಶೋ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಹುರುಪು ತುಂಬುವುದರ ಜತೆಗೆ ಶಕ್ತಿ ಪ್ರದರ್ಶನವನ್ನೂ ಮಾಡಿದರು. ಸಂಜೆ 6.25ಕ್ಕೆ ಕೊಂಡಪ್ಪ ಬಡಾವಣೆಯಲ್ಲಿ ಆರಂಭವಾದ ರೋಡ್‌ ಶೋ ಸುಮಾರು ಒಂದೂವರೆ ಕಿ.ಮೀ. ಸಾಗಿ ಕೆಂಪೇಗೌಡರ ಪ್ರತಿಮೆ ಬಳಿ ಕೊನೆಗೊಂಡಿತು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಜಯಘೋಷ ಮೊಳಗಿಸುತ್ತಾ ಭಾಗವಹಿಸಿದರು.

ನಿಗದಿಯಾಗಿದ್ದ ರೋಡ್‌ ಶೋ ಸುಮಾರು ಒಂದೂವರೆ ಗಂಟೆ ವಿಳಂಬವಾಗಿ ಆರಂಭವಾಯಿತು. ಶಾ ಬರುತ್ತಿದ್ದಂತೆ ಅಲ್ಲಿ ಸೇರಿದ್ದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಶಾ ಅವರಿಗೆ ಜೈಕಾರ ಕೂಗಿದರು. ಇದರ ಜತೆ ‘ಮತ್ತೊಮ್ಮೆ ಮೋದಿ’ ಎಂಬ ಘೋಷವಾಕ್ಯ ಮೊಳಗಿಸುವ ಮೂಲಕ ಜನರಲ್ಲಿ ಹುರುಪು ತುಂಬಿದರು. ರಸ್ತೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಹೂ ಎರಚಿ ಅಭಿಮಾನ‌ ಮೆರೆದರು.

ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ಎಸ್‌.ಆರ್‌.ವಿಶ್ವನಾಥ್‌ ಇದ್ದರು.

ಕಾಂಗ್ರೆಸ್‌ನ ವೀರಪ್ಪ ಮೊಯಿಲಿ ಅವರು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ 9 ಸಾವಿರ ಮತಗಳ ಅಂತರದಿಂದ ಸೋತಿರುವ ಬಚ್ಚೇಗೌಡ ಅವರನ್ನೇ ಬಿಜೆಪಿ ಕಣಕ್ಕೆ ಇಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT