ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ಕಲ್ಲು–ಗುಂಡಿಗಳ ಹಾದಿ: ವಾಹನ ಸಂಚಾರಕ್ಕೆ ತಿಣುಕಾಟ

ಮುಗಿಯದ 110 ಹಳ್ಳಿ ಯೋಜನೆ ಕಾಮಗಾರಿ
Last Updated 11 ಜುಲೈ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು: ಡಾಂಬರು ಹಾಕಿದ್ದ ರಸ್ತೆಯನ್ನೇ ಕಾವೇರಿ ನೀರಿಗಾಗಿ ಮತ್ತೆ ಅಗೆದರು, ಒಳಚರಂಡಿ ಕಾಮಗಾರಿಗೆ ಅಗೆದ ರಸ್ತೆಗಳೆಲ್ಲಾ ಕಲ್ಲು–ಗುಂಡಿಗಳ ಹಾದಿಯಾದವು, ಸಂಚಾರ ಸಮಸ್ಯೆಯಿಂದ ನಲುಗಿ ಹೋಗಿರುವ ಹಳ್ಳಿಗಳು...

ಇದು ಯಶವಂತಪುರ ವಿಧಾನಸಭಾ ಕ್ಷೇತ್ರದ 19 ಹಳ್ಳಿಗಳ ಸ್ಥಿತಿ. 110 ಹಳ್ಳಿ ಯೋಜನೆಯಡಿ ಕಾಮಗಾರಿ ಆರಂಭವಾಗಿ ಹಲವು ವರ್ಷಗಳೇ ಕಳೆದಿದ್ದು, ವಾಹನ ಸಂಚಾರಕ್ಕೆ ಸಾಧ್ಯವಾಗದೆ ಜನರು ಪರದಾಡುತ್ತಿದ್ದಾರೆ. ಅದರಲ್ಲೂ ದೊಡ್ಡಬಿದರಕಲ್ಲು ವಾರ್ಡ್‌ ವ್ಯಾಪ್ತಿಯ ಅಂದ್ರಹಳ್ಳಿ, ದೊಡ್ಡಬಿದರಕಲ್ಲು, ತಿಪ್ಪೇನಹಳ್ಳಿ, ಚನ್ನನಾಯಕನಪಾಳ್ಯ ಸುತ್ತಮುತ್ತಲ ಹಳ್ಳಿಗಳ ಪರಿಸ್ಥಿತಿ ಹೇಳ ತೀರದಾಗಿದೆ.

ಬಿಸಿಲಾದರೆ ಧೂಳು, ಮಳೆ ಬಂದರೆ ಕೆಸರಿನ ಗದ್ದೆಗಳಾಗಿ ರಸ್ತೆಗಳು ಮಾರ್ಪಡುತ್ತವೆ. ಡಾಂಬರು ಹಾಕದಿದ್ದರೂ ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ಸಮತಟ್ಟನ್ನೂ ಮಾಡಿಲ್ಲ. ದೊಡ್ಡಬಿದರಕಲ್ಲು ಗ್ರಾಮಕ್ಕೆ ಯಾವ ಕಡೆಯಿಂದಲೂ ಸಂಪರ್ಕಿಸಲು ಸಾಧ್ಯವಾಗದಷ್ಟು ಮಟ್ಟಕ್ಕೆ ರಸ್ತೆಗಳು ಹಾಳಾಗಿವೆ. ಇಡೀ ಊರನ್ನೇ ಕಿತ್ತು ಬಿಸಾಡಿದಂತೆ ಆಗಿದೆ.

‘ಚೆನ್ನಾಗಿದ್ದ ರಸ್ತೆಯನ್ನು ಕಾವೇರಿ ನೀರಿನ ಪೈಪ್‌ಲೈನ್ ಮತ್ತು ಒಳಚರಂಡಿ ಕಾಮಗಾರಿ ನಿರ್ವಹಿಸಲು ಅಗೆದಿದ್ದಾರೆ. ವರ್ಷಗಟ್ಟಲೆಯಿಂದ ಕಾಮಗಾರಿ ಮುಗಿಯದ ಕಾರಣ ರೋಸಿ ಹೋಗಿದ್ದೇವೆ’ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ಈ ಕಾಮಗಾರಿ ಆರಂಭಿಸುವ ಮೊದಲು ರಸ್ತೆಗಳು ತಕ್ಕಮಟ್ಟಿಗೆ ಸಂಚಾರಕ್ಕೆ ಯೋಗ್ಯವಾಗಿದ್ದವು. ಈಗ ಒಂದು ರಸ್ತೆಯಿಂದ ಪಕ್ಕದ ರಸ್ತೆಗೆ ಹೋಗುವೇ ಕಷ್ಟವಾಗಿದೆ. ದ್ವಿಚಕ್ರ ವಾಹನ ಸವಾರರು ಆಗಾಗ ಬಿದ್ದು ಕೈ, ಕಾಲು ಮುರಿದುಕೊಳ್ಳುವುದು ತಪ್ಪಿಲ್ಲ ಎಂದು ಹೇಳಿದರು.

‘ಮನೆಯಿಂದ ಹೊರಗೆ ಹೋಗುವುದೆಂದರೆ ಭಯಪಡುವ ಸ್ಥಿತಿ ಇದೆ. ಮಳೆಗಾಲದಲ್ಲಿ ಅದೆಷ್ಟು ಬಾರಿ ಬಿದ್ದಿದ್ದೇವೋ ಲೆಕ್ಕವಿಲ್ಲ. ಈ ಸಮಸ್ಯೆಯಿಂದ ಯಾವಾಗ ಮುಕ್ತಿ ಸಿಗುವುದೋ ಗೋತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

8ನೇ ಮೈಲಿಯಿಂದ ಹೇರೋಹಳ್ಳಿ ಮಾರ್ಗವಾಗಿ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಅಂದ್ರಹಳ್ಳಿ ಮುಖ್ಯ ರಸ್ತೆ ತೀರಾ ಹದಗೆಟ್ಟಿತ್ತು. ಇತ್ತೀಚೆಗೆ ಡಾಂಬರು ಹಾಕಿ ವಾಹನ ಸಂಚಾರಕ್ಕೆ ಯೋಗ್ಯ ಮಾಡಲಾಗಿದೆ. ಅದನ್ನು ಹೊರತುಪಡಿಸಿ ಯಾವುದೇ ಅಡ್ಡ ರಸ್ತೆಗೂ ವಾಹನಗಳನ್ನು ಇಳಿಸಲು ಸಾಧ್ಯವಾಗದ ಸ್ಥಿತಿ ಇದೆ. ಅಂದ್ರಹಳ್ಳಿ ಮುಖ್ಯ ರಸ್ತೆಯನ್ನೂ ಕಾವೇರಿ ನೀರಿನ ಪೈಪ್‌ಲೈನ್ ಅಳವಡಿಕೆಗೆ ಅಲ್ಲಲ್ಲಿ ಅಗೆಯಲಾಗಿದೆ. ‘ಅನಿವಾರ್ಯ ಕಾರಣದಿಂದ ಅಗೆಯಲಾಗಿದ್ದು, ಜಲಮಂಡಳಿಯಿಂದಲೇ ಮರು ನಿರ್ಮಾಣ ಮಾಡಿಸಲಾಗುವುದು’ ಎಂದು ಅಧಿಕಾರಿಗಳು ಹೇಳುತ್ತಾರೆ.

ಉಲ್ಲಾಳು, ಹೆಮ್ಮಿಗೆಪುರ ವಾರ್ಡ್‌ಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕಾಮಗಾರಿ ಮುಗಿದು ಸಂಚಾರಕ್ಕೆ ಯೋಗ್ಯವಾದ ರಸ್ತೆಗಳು ನಿರ್ಮಾಣವಾದರೆ ಸಾಕು ಎಂದು ಜನ ಕಾಯುತ್ತಿದ್ದಾರೆ.

‘ಶೇ 65ರಷ್ಟು ಕಾಮಗಾರಿ ಪೂರ್ಣ’

‘ಕಾವೇರಿ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವ ಕಾಮಗಾರಿ ಶೇ 65ರಷ್ಟು ಪೂರ್ಣಗೊಂಡಿದೆ. ರಸ್ತೆಗಳ ಮರು ನಿರ್ಮಾಣ ಆಗಬೇಕಿದೆ’ ಎಂದು ಸಹಕಾರ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಲಾಕ್‌ಡೌನ್ ಸಂದರ್ಭದಲ್ಲಿ ಕಾಮಗಾರಿ ನಿಧಾನವಾಗಿತ್ತು. ಈಗ ಎರಡು ಸುತ್ತಿನ ಸಭೆ ನಡೆಸಿ ಕಾಮಗಾರಿಗೆ ಮತ್ತೆ ಚುರುಕು ನೀಡಲಾಗಿದೆ ಎಂದರು.

‘ಮಹದೇವಪುರ, ಬೆಂಗಳೂರು ದಕ್ಷಿಣ ಕ್ಷೇತ್ರ ಬಿಟ್ಟರೆ 110 ಹಳ್ಳಿ ಯೋಜನೆ ಕಾಮಗಾರಿ ನಡೆಯುತ್ತಿರುವ ಮೂರನೇ ಅತೀದೊಡ್ಡ ಕ್ಷೇತ್ರ ಎಂದರೆ ಯಶವಂತಪುರ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ₹600 ಕೋಟಿ ಅಗತ್ಯವಿದೆ. ರಸ್ತೆಗಳ ಮರು ನಿರ್ಮಾಣಕ್ಕೆ ಬಿಬಿಎಂಪಿ ಮೂಲಕ ಸದ್ಯಕ್ಕೆ ₹416 ಕೋಟಿಗೆ ಕೋರಿಕೆ ಸಲ್ಲಿಸಲಾಗಿತ್ತು. ಸದ್ಯಕ್ಕೆ ₹200 ಕೋಟಿ ಅನುದಾನ ದೊರೆತಿದೆ’ ಎಂದರು.

‘ಬಿಡುಗಡೆ ಆಗಿರುವ₹200 ಕೋಟಿ ಅನುದಾನದಲ್ಲಿ ಕಾಮಗಾರಿ ಆರಂಭಿಸಲು ಬಿಬಿಎಂಪಿ ಅಧಿಕಾರಿಗಳು ತಿಣುಕಾಡುತ್ತಿದ್ದಾರೆ. ಜಾಬ್‌ ಕೋಡ್‌ ನೀಡಲು ನೂರೆಂಟು ಸಮಸ್ಯೆ ಹೇಳುತ್ತಿದ್ದಾರೆ. ಅಗೆದಿರುವ ರಸ್ತೆಗಳಲ್ಲಿ ವಾಹನ ಸಂಚಾರ ಕಷ್ಟವಾಗಿದೆ. ಮಳೆ ಬಂದರೆ ತೀರಾ ತೊಂದರೆಯಾಗುತ್ತಿದೆ. ಹೀಗಾಗಿ, ಯಾವುದೇ ಕಾರಣ ಹೇಳದೆ ಡಾಂಬರೀಕರಣ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

‘ಡಾಂಬರೀಕರಣ ಕಾಮಗಾರಿ ಆರಂಭವಾದರೆ ಹಂತ–ಹಂತವಾಗಿ ಪೂರ್ಣಗೊಳಿಸಲಾಗುವುದು. 110 ಹಳ್ಳಿ ಯೋಜನೆಯಡಿ ಎಲ್ಲ ಕಾಮಗಾರಿಯೂ ಸಂಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗಲಿದೆ’ ಎಂದರು.

ಕಾಮಗಾರಿ ನಡೆಯುತ್ತಿರುವ ಹಳ್ಳಿಗಳು

ದೊಡ್ಡಬಿದರಕಲ್ಲು, ಅಂದ್ರಹಳ್ಳಿ, ಹೊಸಳ್ಳಿ, ಲಿಂಗಧೀರನಹಳ್ಳಿ, ಕರಿಹೋಬನಹಳ್ಳಿ, ಹೇರೋಹಳ್ಳಿ, ಗಿಡದಕೊನ್ನೆನಹಳ್ಳಿ, ಉಲ್ಲಾಳು,
ಸೋನೆನಹಳ್ಳಿ, ಗಣಕಲ್ಲು, ಹೆಮ್ಮಿಗೆಪುರ, ಹೊಸಹಳ್ಳಿ, ಮನವರ್ತೆ ಕಾವಲ್, ಸೋಂಪುರ, ವರಹಸಂದ್ರ, ವಾಜರಹಳ್ಳಿ, ರಘುವನಹಳ್ಳಿ,
ತಲಘಟ್ಟಪುರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT