ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿಗೆ ತಕ್ಕಂತೆ ಪಾರ್ಕಿಂಗ್‌ ಪ್ಯಾಕೇಜ್‌

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾಹನ ನಿಲು­ಗಡೆ ವ್ಯವಸ್ಥೆ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಉದ್ದೇಶಿಸಿದ್ದು, ಅವ­ಧಿಗೆ ಅನುಸಾರವಾಗಿ ಶುಲ್ಕ ವಿಧಿ­ಸುವ ಪ್ರಸ್ತಾವವೂ ಅದರ ಮುಂದಿದೆ.

ಇತ್ತೀಚಿನ ವರ್ಷಗಳಲ್ಲಿ ಅನಿಯಂತ್ರಿತ­ವಾಗಿ ವಾಹನಗಳ ಸಂಖ್ಯೆಯಲ್ಲಿ ಏರಿಕೆ­ಯಾಗಿದ್ದರಿಂದ ಪಾರ್ಕಿಂಗ್‌ ಸಮಸ್ಯೆ ಜಟಿಲಗೊಂಡಿದೆ. ಅಸಂಬದ್ಧ ಪಾರ್ಕಿಂಗ್‌­­ನಿಂದ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾರ್ಕಿಂಗ್‌ ಕಾರ್ಯಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಅಗತ್ಯವಾಗಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ. ಬುಧ­ವಾರ ನಡೆಯಲಿರುವ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಈ ಪ್ರಸ್ತಾವ ಚರ್ಚೆಗೆ ಬರಲಿದೆ.

ನಗರದ ಹೃದಯ ಭಾಗದ ರಸ್ತೆಗಳಲ್ಲಿ ಪಾರ್ಕಿಂಗ್‌ ಸೌಲಭ್ಯವನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ) ಮತ್ತು ಸಿ (ಸಾಮಾನ್ಯ) ಎಂಬ ಮೂರು ಪ್ಯಾಕೇಜ್‌ಗಳಲ್ಲಿ ವಿಂಗಡಿಸಲಾಗಿದೆ. ಎಷ್ಟು ಅವಧಿಗೆ ವಾಹನ ನಿಲುಗಡೆ ಮಾಡಲಾಗಿರುತ್ತದೋ ಅದಕ್ಕೆ ಅನುಸಾರವಾಗಿ ಶುಲ್ಕ ವಿಧಿಸಲಾ­ಗುತ್ತದೆ. ಸಂಚಾರ ದಟ್ಟಣೆ ಸಮಯ, ಸಾಮಾನ್ಯ ಅವಧಿ ಮತ್ತು ರಜಾ ದಿನಗಳಲ್ಲೂ ಶುಲ್ಕ ಆಕರಣೆ ವಿಧಾನ ಒಂದೇ ಆಗಿರುತ್ತದೆ ಎಂದು ಪ್ರಸ್ತಾವದಲ್ಲಿ ವಿವರಿಸಲಾಗಿದೆ.

ನಗರದ ಹೃದಯ ಭಾಗದ ಸಂಚಾರ ದಟ್ಟಣೆ ಪ್ರದೇಶದ ರಸ್ತೆಗಳಲ್ಲಿ ಖಾಸಗಿ ಟ್ರಕ್‌ ಮತ್ತು ಬಸ್‌ಗಳ ನಿಲುಗಡೆಗೆ ಅವಕಾಶ ಇರುವುದಿಲ್ಲ. ಅನಿವಾರ್ಯ ಸಂದರ್ಭದಲ್ಲಿ ನಿಲುಗಡೆ ಮಾಡಿದರೆ ಕಾರುಗಳಿಗೆ ವಿಧಿಸಲಾಗುವ ಶುಲ್ಕದ ಮೂರು ಪಟ್ಟು ಹೆಚ್ಚಿನ ದರ ಪಡೆಯಲಾಗುತ್ತದೆ. ಸರ್ಕಾರಿ, ಬಿಬಿಎಂಪಿ ವಾಹನಗಳು ಮತ್ತು ಬಿಎಂಟಿಸಿ–ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಪಾರ್ಕಿಂಗ್‌ ಶುಲ್ಕವನ್ನು ವಾರ್ಷಿಕವಾಗಿ ಏರಿಸಬೇಕು ಮತ್ತು ಸಗಟು ಬೆಲೆ ಸೂಚ್ಯಂಕ ಬೆಳವಣಿಗೆ ದರದ ಆಧಾರದ ಮೇಲೆ ಈ ಏರಿಕೆ ಮಾಡಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿದೆ. ವಾಹನ ನಿಲುಗಡೆ ವ್ಯವಸ್ಥೆಯನ್ನು ಆಧುನಿಕವಾಗಿ ನಿರ್ವಹಿ­ಸಲು ಪಾರ್ಕಿಂಗ್‌ ಸ್ಥಳಗಳಲ್ಲಿ ಶುಲ್ಕ ಮೀಟರ್‌ (ಸ್ವೈಪ್‌ ಕಾರ್ಡ್‌, ಮೊಬೈಲ್‌ ಅಪ್ಲಿಕೇಶನ್‌), ರಸ್ತೆ ಮಾರ್ಗಸೂಚಿ ಅಳವಡಿಕೆ, ನಿಲುಗಡೆ ವ್ಯವಸ್ಥೆ ಹೊಂದಿದ ರಸ್ತೆಗಳ ಕೇಂದ್ರೀಕೃತ ವ್ಯವಸ್ಥೆ ಮೂಲಕ ಸ್ಥಳಾವಕಾಶದ ಕ್ಷಣ, ಕ್ಷಣದ ಮಾಹಿತಿಯನ್ನು ವಿವಿಧ ರಸ್ತೆಗಳಲ್ಲಿ ಡಿಜಿಟಲ್‌ ಬೋರ್ಡ್‌ಗಳಲ್ಲಿ ಪ್ರದರ್ಶಿಸ­ಲಾಗುತ್ತದೆ. ಪಾರ್ಕಿಂಗ್‌ ಅಂಕಣಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆಗೆ ₨ 40 ಕೋಟಿ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ.

ಈ ಸೌಲಭ್ಯಕ್ಕೆ ಬೆಂಗಳೂರು ಇನಿಸಿಯೇಟಿವ್‌ ಫಾರ್‌ ಪಾರ್ಕಿಂಗ್‌ (ಬಿಪ್‌) ಎಂದು ಹೆಸರಿಸಲಾಗಿದೆ. ಹಲಸೂರಿನಿಂದ ಶಿರ್ಸಿ ವೃತ್ತ ಮತ್ತು ಲಾಲ್‌ಬಾಗ್‌ನಿಂದ ಅರಮನೆವರೆಗಿನ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿ ಯೋಜನೆ ಸಿದ್ಧಪಡಿಸಲಾಗಿದೆ. ವಾಹನ ಸವಾರರ ಇಂಗಿತವನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT