ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಅಭಿಪ್ರಾಯ ಬಂದ ನಂತರ ಕ್ರಮ

ಆರ್ಕಿಡ್‌ ಶಾಲೆಯಿಂದ ನಿಯಮ ಉಲ್ಲಂಘನೆ ಆರೋಪ-
Last Updated 30 ಅಕ್ಟೋಬರ್ 2014, 19:49 IST
ಅಕ್ಷರ ಗಾತ್ರ

ಬೆಂಗಳೂರು: ನಿಯಮಗಳನ್ನು ಉಲ್ಲಂಘಿ­ಸಿ­ರುವ ಆರೋಪ ಎದುರಿಸುತ್ತಿ­ರುವ ‘ಆರ್ಕಿಡ್‌ ದಿ ಇಂಟರ್‌ನ್ಯಾಷನಲ್‌ ಶಾಲೆ’ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಕಾನೂನು ಇಲಾಖೆ ಸಲಹೆ ಕೇಳ­­ಲಾಗಿದೆ. ಕಾನೂನು ಅಭಿಪ್ರಾಯ ಬಂದ ನಂತರ ಈ ಬಗ್ಗೆ ನಿರ್ಧರಿ­ಸ­ಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಆರ್ಕಿಡ್‌ ಶಾಲೆಯ ಮಕ್ಕಳ ಪೋಷಕ­ರೊಂದಿಗೆ ಗುರುವಾರ ವಿಧಾನಸೌಧ­ದಲ್ಲಿ ಸಭೆ ನಡೆಸಿದ ನಂತರ ಪತ್ರಕರ್ತ­ರೊಂದಿಗೆ ಮಾತನಾಡಿದ ಸಚಿವರು, ಅಭಿ­ಪ್ರಾಯ ತಿಳಿಸಲು ಕಾನೂನು ಇಲಾ­ಖೆಯು ಎರಡು ದಿನಗಳ ಕಾಲಾವಕಾಶ ನೀಡಿದೆ. ಶನಿವಾರ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿ­ಸಲಾಗುವುದು ಎಂದರು.

ಸಭೆ ಅಪೂರ್ಣ: ‘ಪೋಷಕರೊಂದಿಗಿನ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಶನಿವಾರದ­ವರೆಗೆ ಅವಕಾಶ ಕೊಡಿ ಎಂದು ಅವರಲ್ಲಿ ಮನವಿ ಮಾಡಿದ್ದೇವೆ. ಪಾಲಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ’ ಎಂದರು. ‘ಶಾಲೆ ಆರಂಭವಾಗಿ ಈಗಾಗಲೇ ಮೂರು ನಾಲ್ಕು ತಿಂಗಳು ಕಳೆದಿರುವುದ­ರಿಂದ ಕನಿಷ್ಠ ಪಕ್ಷ ಈ ಶೈಕ್ಷಣಿಕ ವರ್ಷ­ದವರೆಗೂ ಶಾಲೆ ನಡೆಸಲು ಅನುಮತಿ ನೀಡುವಂತೆ ಪೋಷಕರು ಮನವಿ ಮಾಡಿ­ದ್ದಾರೆ. ಆದರೆ, ನಾನು ಪರಿಸ್ಥಿತಿಯನ್ನು ಪೋಷಕರಿಗೆ ವಿವರಿಸಿ­ದ್ದೇನೆ. ಇರುವ ನಿಯಮಗಳನ್ನು ನಮಗೂ ಉಲ್ಲಂಘಿ­ಸಲು ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿದ್ದೇನೆ’ ಎಂದು ಹೇಳಿದರು.

ಪರ್ಯಾಯ ವ್ಯವಸ್ಥೆ: ಒಂದು ವೇಳೆ ಶಾಲೆ­ಯನ್ನು ಮುಚ್ಚ­ಬೇಕಾಗಿ ಬಂದರೆ, ಅಲ್ಲಿನ ಮಕ್ಕಳಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಲಿದೆ. ಆ ಶಾಲೆಯ ಸುತ್ತ ಮೂರು ಕಿ.ಮೀ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿ­ಸಲು ಪ್ರಯತ್ನಿಸಲಾಗುವುದು. ಮಕ್ಕ­ಳನ್ನು ದಾಖಲಿಸಿಕೊಳ್ಳಲು ಕೆಲವು ಶಾಲೆ­ಗಳು ಒಪ್ಪಿವೆ ಎಂಬ ಮಾಹಿತಿ ಇದೆ ಎಂದರು.

ಮನವಿ: ಸಭೆಯಲ್ಲಿ ಮಕ್ಕಳ ಪಾಲಕರು ಒಂದು ವರ್ಷ ಕಾಲ ಶಾಲೆಯನ್ನು ಮುಚ್ಚದಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಪೋಷಕರ ವಿರೋಧ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೋಷ­ಕರು, ‘ಮಕ್ಕಳನ್ನು ಈ ಶಾಲೆಗೆ ಸೇರಿ­ಸುವುದಕ್ಕಾಗಿಯೇ ಬೇರೆ ಕಡೆಯಿಂದ ಬಂದು ಇಲ್ಲಿ  ವಾಸಿಸುತ್ತಿದ್ದೇವೆ. ಈಗ ಏಕಾಏಕಿ ಶಾಲೆ ಮುಚ್ಚಿದರೆ, ಬೇರೊಂದು ಶಾಲೆಗೆ ಮಕ್ಕಳನ್ನು ದಾಖ­ಲಿ­­ಸಲು ಕಷ್ಟವಾಗುತ್ತದೆ. ಹಾಗಾಗಿ ಈ ಒಂದು ವರ್ಷವಾದರೂ ಶಾಲೆ­ಯನ್ನು ಮುಂದುವರಿಸುವಂತೆ ಸಚಿವರಿಗೆ ಮನವಿ ಮಾಡಿದ್ದೇವೆ’ ಎಂದರು.

ಕಾನೂನು ಮತ್ತು ನಿಯಮ­ಗಳನ್ನು ಉಲ್ಲಂಘಿ­ಸಿ­ರುವ ರಾಜ್ಯದ ಎಲ್ಲ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ­ಲಾ­ಗುವುದು. 20 ದಿನಗಳ ಒಳಗೆ ಇಂತಹ ಶಾಲೆಗಳ ಪಟ್ಟಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ­ದ್ದೇನೆ. ಅಂತಹ ಶಾಲೆಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸ­ಲಾಗುವುದು.
–ಸಚಿವ ಕಿಮ್ಮನೆ ರತ್ನಾಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT