ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆ ಬದಲು ಸರ್ಕಾರಿ ಶಾಲೆ ಉದ್ಧರಿಸಿ

ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಗೌರವ ಅಧ್ಯಕ್ಷ ಪುಟ್ಟಣ್ಣ ಅಭಿಪ್ರಾಯ
Last Updated 1 ಜುಲೈ 2017, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರ ಆರ್‌ಟಿಇ ಹೆಸರಿನಲ್ಲಿ ಖಾಸಗಿ ಶಾಲೆಗಳಿಗೆ ವಿನಿಯೋಗಿಸುತ್ತಿರುವ ಹಣವನ್ನು ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೆ ಬಳಸಿದರೆ ಅನೇಕ ಮಕ್ಕಳಿಗೆ ಉಪಯೋಗವಾಗುತ್ತದೆ’ ಎಂದು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕೆಎಎಂಎಸ್‌) ಗೌರವ ಅಧ್ಯಕ್ಷ ಪುಟ್ಟಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಎಎಂಎಸ್‌ ನಗರದಲ್ಲಿ ಶನಿವಾರ ಆಯೋಜಿಸಿದ್ದ, ‘ರಾಜ್ಯಮಟ್ಟದ ಶಿಕ್ಷಣ ಸ್ಥಿತಿಗತಿ’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಅವರನ್ನು ಬಳಸಿಕೊಂಡು ನೀವೇ ಗುಣಮಟ್ಟದ ಶಿಕ್ಷಣ ನೀಡಿ. ಆಗ ಮಕ್ಕಳು ನಿಮ್ಮ ಶಾಲೆಯನ್ನೇ ಹುಡಿಕಿಕೊಂಡು ಬರುತ್ತಾರೆ. ನಾವು ದೌರ್ಜನ್ಯ ಮಾಡುತ್ತೇವೆ ಎಂದು ದೂರುವುದಾದರೂ ತಪ್ಪುತ್ತದೆ’ ಎಂದು ಹೇಳಿದರು.

ನಿರ್ಬಂಧ ವಿಧಿಸಿ: ‘ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಡಿಡಿಪಿಐ) ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಹೆಚ್ಚಿಸುವ ಬಗ್ಗೆ ಆಲೋಚಿಸುವ ಬದಲು, ಖಾಸಗಿ ಶಾಲೆಯವರಿಂದ ದುಡ್ಡು ಹೊಡೆಯುವ ಬಗ್ಗೆ ಚಿಂತಿಸುತ್ತಿದ್ದಾರೆ.  ಅವರು ಅನುದಾನರಹಿತ ಶಾಲೆಗಳ ಒಳಗೆ ಪ್ರವೇಶಿಸದಂತೆ ಶಿಕ್ಷಣ ಇಲಾಖೆ  ನಿರ್ಬಂಧ ವಿಧಿಸಬೇಕು’ ಎಂದು ಆಗ್ರಹಿಸಿದರು.

ಅಧಿಸೂಚನೆ ಹಿಂಪಡೆಯಿರಿ: ಕೆಎಎಂಎಸ್‌ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌, ‘ಐಸಿಎಸ್‌ಸಿ ಹಾಗೂ ಸಿಬಿಎಸ್‌ಸಿ ಶಾಲೆಗಳು ಶಿಕ್ಷಣ ಮಸೂದೆಗೆ ಒಳಪಡದ ಕಾರಣ, ಇವುಗಳಿಗೆ ಸಂಬಂಧಿಸಿ ಹೊರಡಿಸಿರುವ  ಅಧಿಸೂಚನೆಗಳನ್ನು ಸರ್ಕಾರ ವಾಪಸ್‌ ಪಡೆಯಬೇಕು’ ಎಂದು  ಒತ್ತಾಯಿಸಿದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್‌ ಸೇಟ್‌, ‘ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ 40ರಷ್ಟು ಹಾಗೂ ನಗರದಲ್ಲಿ ಶೇ 80ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಸರ್ಕಾರ, ಶಾಲಾ ಆಡಳಿತ ಮಂಡಳಿ, ಪೋಷಕರು ಒಟ್ಟಾಗಿ ಕುಳಿತುಕೊಂಡು ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಚರ್ಚಿಸೋಣ’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಸೌಜನ್ಯಾ, ‘ಆರ್‌ಟಿಇ ಶುಲ್ಕ ಮರುಪಾವತಿ ಕಳೆದ ವರ್ಷದಿಂದ ಆನ್‌ಲೈನ್‌ ವ್ಯವಸ್ಥೆಗೆ ಒಳಪಟ್ಟಿದೆ. ಇದರಿಂದ  ಶಾಲಾ ಆಡಳಿತ ಮಂಡಳಿಯವರು ದಾಖಲೆಗಳನ್ನು ಹಿಡಿದುಕೊಂಡು ಕಚೇರಿಗಳಿಗೆ ಅಲೆದಾಡುವ ಕಿರಿಕಿರಿ ತಪ್ಪಿದೆ. ಈಗಾಗಲೇ ಆನ್‌ಲೈನ್‌ ಮೂಲಕ ₹241 ಕೋಟಿ ಮರುಪಾವತಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಖಾಸಗಿ ಶಾಲೆಗಳಿಗೆ ದಾಖಲಾದ ಆರ್‌ಟಿಇ ಮಕ್ಕಳ ಕುರಿತು ಇಲಾಖೆಗೆ ನಿಯಮಿತವಾಗಿ ಮಾಹಿತಿ ನೀಡಬೇಕು. ಅದರಿಂದ ಶಾಲೆ ಬಿಟ್ಟು ಹೋಗುವ ಮಕ್ಕಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತದೆ.  ಕಳೆದ ವರ್ಷ ಸಾಕಷ್ಟು ದತ್ತಾಂಶ ಸಂಗ್ರಹವಾಗಿದ್ದು, ಪ್ರಸಕ್ತ ವರ್ಷ ದತ್ತಾಂಶವನ್ನೂ ಸೇರಿಸಿ ಜುಲೈ ಅಥವಾ ಆಗಸ್ಟ್‌ ವೇಳೆಗೆ ಪರಿಷ್ಕರಿಸುತ್ತೇವೆ. ಅಲ್ಲದೆ, ಈ ಮಾಹಿತಿಯನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗೆ ನೀಡುತ್ತೇವೆ. ಅದರಿಂದ ಬಡ ವಿದ್ಯಾರ್ಥಿ ಗಳಿಗೆ ಅನುಕೂಲ ಆಗುತ್ತದೆ’ ಎಂದು ಮಾಹಿತಿ ನೀಡಿದರು.

ಬೇಡಿಕೆಗಳು
*ಆರ್‌ಟಿಇ ದಾಖಲಾತಿ ಪ್ರಕ್ರಿಯೆಯನ್ನು ಮಾರ್ಚ್‌ ಒಳಗೆ ಪೂರ್ಣಗೊಳಿಸುವಂತೆ ದಿನಾಂಕ ನಿಗದಿ ಪಡಿಸಬೇಕು
*ಎನ್‌ಸಿಇಆರ್‌ಟಿ ಪಠ್ಯಕ್ಕೆ ಅನುಗುಣವಾಗಿ ರಾಜ್ಯ ಪಠ್ಯಕ್ರಮ ಪರಿಷ್ಕರಣೆ ಸರಿಯಾಗಿ ನಡೆದಿಲ್ಲ, ಅದನ್ನು ಸರಿಪಡಿಸಬೇಕು
*ಆರ್‌ಟಿಇ ಬಗ್ಗೆ ಕೆಲಸ ಮಾಡುತ್ತಿರುವ ಕೆಲ ಸಂಘಟನೆಗಳು ಶಾಲಾ
ಆಡಳಿತ ಮಂಡಳಿ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು
* ಶಾಲಾ ಶುಲ್ಕ ವಸೂಲಾತಿ ಗೊಂದಲ ಸರಿಪಡಿಸಬೇಕು

ಶಾಲೆ ಮಾನ್ಯತೆ ಆನ್‌ಲೈನ್‌ನಲ್ಲೇ ನವೀಕರಣ
‘ಮಾನ್ಯತೆ ಪಡೆಯುವುದು ಹಾಗೂ ಅದನ್ನು ನವೀಕರಣ ಮಾಡುವುದು, ಶಾಲಾ ಕಟ್ಟಡದ ಸ್ಥಳ ಬದಲಾವಣೆ  ಕುರಿತ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ ಮೂಲಕವೇ ನಡೆಸಲು ಯೋಜಿಸಿದ್ದು, ಶೀಘ್ರವೇ ಅನುಷ್ಠಾನಗೊಳ್ಳಲಿದೆ. ಈ ಹಿಂದೆ ಕೇವಲ ಅರ್ಜಿಗಳನ್ನು ಮಾತ್ರ ಆನ್‌ಲೈನ್‌ನಲ್ಲಿ ಪಡೆಯಬಹುದಿತ್ತು. ಆದರೆ, ಅದರ ನಂತರದ ಎಲ್ಲಾ ಪ್ರಕ್ರಿಯೆ ಆಫ್‌ಲೈನ್‌ನಲ್ಲಿ ನಡೆಯುತ್ತಿತ್ತು’ ಎಂದು ಸೌಜನ್ಯಾ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT