ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಪಾಲಕರು ಗ್ರಂಥಾಲಯಗಳ ಆತ್ಮ

Last Updated 12 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಗ್ರಂಥಾಲಯಗಳು ಜನಸಮುದಾಯದ ಮನಸ್ಸು ಹಾಗೂ ಆತ್ಮಗಳಾದರೆ, ಗ್ರಂಥಪಾಲಕರು ಗ್ರಂಥಾಲಯಗಳ ಮನಸ್ಸು ಹಾಗೂ ಆತ್ಮಗಳಿದ್ದಂತೆ~ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ ಹಾಗೂ ಭಾರತೀಯ ಶೈಕ್ಷಣಿಕ ಗ್ರಂಥಾಲಯ ಸಂಘದ ಸಂಯುಕ್ತ ಆಶ್ರಯದಲ್ಲಿ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಗ್ರಂಥಪಾಲಕರ ದಿನಾಚರಣೆ~ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಗ್ರಂಥಪಾಲಕರು ಓದುಗರ ಬಗ್ಗೆ ಕುತೂಹಲದ ಜತೆಗೆ ಮಮತೆಯನ್ನೂ ಪ್ರದರ್ಶಿಸುತ್ತಾರೆ. ಗ್ರಂಥಪಾಲಕರ ಮಾನವೀಯತೆ ಗುಣವನ್ನು ಸ್ವತಃ ನಾನೇ ಕಂಡಿದ್ದೇನೆ. ಸಮಾಜದ ಅವಕೃಪೆಗೊಳಗಾದ ಸಂದರ್ಭದಲ್ಲಿ ಕಬ್ಬನ್‌ಪಾರ್ಕ್‌ನ ಕೇಂದ್ರ ಗ್ರಂಥಾಲಯದಲ್ಲಿ ಐದು ವರ್ಷ ಸತತ ಐದಾರು ಗಂಟೆಗಳ ಕಾಲ ಅಭ್ಯಾಸ ನಡೆಸಿದೆ. ಇಂದೇನಾದರೂ ನಾನು ಕಿಂಚಿತ್ತು ಜ್ಞಾನ ಸಂಪಾದಿಸಿದ್ದರೆ ಅದು ಗ್ರಂಥಾಲಯದಲ್ಲಿ ಅಧ್ಯಯನ ನಡೆಸಿದ ಪ್ರತಿಫಲದಿಂದ ಸಾಧ್ಯವಾಯಿತು~ ಎಂದು ಹೇಳಿದರು.

`ಬೆಂಗಳೂರು ವಿಶ್ವವಿದ್ಯಾಲಯ ಸೆ. 2ರಿಂದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ `ಪುಸ್ತಕ ಪ್ರಪಂಚ~ ಮೇಳದಲ್ಲಿ ಭಾಗವಹಿಸುವ ಕನ್ನಡ ಪ್ರಕಾಶಕರಿಗೆ ಅಭಿವೃದ್ಧಿ ಪ್ರಾಧಿಕಾರದಿಂದ ಸಹಾಯಧನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಭರವಸೆ ನೀಡಿದರು.

`ಗ್ರಂಥಪಾಲಕರು ಕೇವಲ ಗ್ರಂಥಾಲಯಗಳನ್ನು ಪಾಲನೆ ಮಾಡುತ್ತಿಲ್ಲ. ಅಲ್ಲಿನ ಗ್ರಂಥಗಳನ್ನು ವಾಚನ ಮಾಡಿ ಅರ್ಥ ಮಾಡಿಕೊಂಡಿದ್ದಾರೆ. ಇದರಿಂದ ಎಷ್ಟೋ ಗ್ರಂಥಪಾಲಕರು ವಿದ್ವಾಂಸರಾಗಿದ್ದಾರೆ. ಹೀಗಾಗಿ, ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುವಂತಹ ಗ್ರಂಥಪಾಲಕರ ಸೇವೆಯನ್ನು ಸರ್ಕಾರ ಮರೆಯಬಾರದು. ಅವರಿಗೆ ಸಕಾಲದಲ್ಲಿ ಸೇವಾ ಬಡ್ತಿ ನೀಡುವುದರ ಜತೆಗೆ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಲು ಮುಂದಾಗಬೇಕು~ ಎಂದು ಮನವಿ ಮಾಡಿದರು.

ಗ್ರಂಥಾಲಯ ಡಿಜಿಟಲ್ ವ್ಯವಸ್ಥೆಗೆ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್. ಪ್ರಭುದೇವ್, `ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳನ್ನು ಡಿಜಿಟಲ್ ವ್ಯವಸ್ಥೆಗೊಳಪಡಿಸುವುದರ ಜತೆಗೆ, ಪ್ರತಿಯೊಂದು ವಿಶ್ವವಿದ್ಯಾಲಯಗಳ ಪುಸ್ತಕಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವಂತಹ ಏಕರೂಪ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನ ನಡೆಸಲಾಗುತ್ತಿದೆ~ ಎಂದರು.

`ಈ ಸಂಬಂಧ ಇದೇ ತಿಂಗಳ 27ರಂದು ಮೈಸೂರು, ಮಂಗಳೂರು, ಕುವೆಂಪು, ಗುಲ್ಬರ್ಗ, ಕರ್ನಾಟಕ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಮುಖ್ಯ ಗ್ರಂಥಪಾಲಕರ ಸಭೆ ಕರೆಯಲಾಗಿದೆ~ ಎಂದು ಅವರು ತಿಳಿಸಿದರು.

`ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವಂತಹ ಪುಸ್ತಕಗಳನ್ನು ಎಲ್ಲರೂ ಖರೀದಿಸಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ವಿಶ್ವವಿದ್ಯಾಲಯಗಳ ಪುಸ್ತಕಗಳನ್ನು ಡಿಜಿಟಲ್ ವ್ಯವಸ್ಥೆಗೊಳಪಡಿಸಿ ಪರಸ್ಪರ ವಿನಿಮಯ ಮಾಡಿಕೊಳ್ಳುವುದರಿಂದ ಸಂಶೋಧಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ~ ಎಂದರು.

ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಮಾಜಿ ಅಧ್ಯಕ್ಷ ಎನ್.ವಿ. ಸತ್ಯನಾರಾಯಣ, ಗ್ರಂಥಾಲಯ ವಿಜ್ಞಾನಿ ಡಾ.ಎ.ವೈ. ಅಸುಂಡಿ ಗ್ರಂಥಪಾಲಕರ ದಿನಾಚರಣೆ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT