ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಕಳ್ಳಸಾಗಣೆ ಕೇಂದ್ರವಾಗುತ್ತಿರುವ ಕೆಐಎಎಲ್‌

Last Updated 14 ಸೆಪ್ಟೆಂಬರ್ 2014, 19:55 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎಎಲ್‌) ದುಷ್ಕರ್ಮಿಗಳು ಚಿನ್ನದ ಗಟ್ಟಿಗಳ ಕಳ್ಳಸಾಗಣೆ ಕೇಂದ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಭದ್ರತಾ ಲೋಪ, ಸುಧಾರಿತ ಲೋಹ ಶೋಧಕಗಳ ಕೊರತೆಯಿಂದಾಗಿ ಚಿನ್ನದ ಗಟ್ಟಿಗಳ ಕಳ್ಳಸಾಗಣೆ ಕೆಐಎಎಲ್‌ ಮೂಲಕ ಅವ್ಯಾಹತವಾಗಿ ನಡೆಯುತ್ತಿದೆ. ನಿಲ್ದಾಣವು ಕಾರ್ಯಾರಂಭ ಮಾಡಿದ ನಂತರ ಚಿನ್ನದ ಗಟ್ಟಿ ಸಾಗಿಸುವ ಜಾಲವು  ಹೆಚ್ಚು ಸಕ್ರಿಯವಾಗಿರುವುದು ಹಲವು ಬಾರಿ ದೃಢಪಟ್ಟಿದೆ.

ಕೆಐಎಎಲ್‌ನಲ್ಲಿ 2013–14ನೆ ಸಾಲಿನಲ್ಲಿ ಚಿನ್ನದ ಗಟ್ಟಿ ಸಾಗಿಸುತ್ತಿದ್ದ  84 ಪ್ರಕರಣಗಳನ್ನು ಪತ್ತೆಹಚ್ಚಿ, ₨ 22.33 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೀಮಾ ಸುಂಕ (ಕಸ್ಟಮ್ಸ್‌) ಅಧಿಕಾರಿಗಳು ತಿಳಿಸಿದ್ದಾರೆ.

2014ರ  ಏಪ್ರಿಲ್‌ನಿಂದ ಜುಲೈವರೆಗೆ 35 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.ದುಷ್ಕರ್ಮಿಗಳು, ಸೀಮಾ ಸುಂಕ ಅಧಿಕಾರಿಗಳು ಹಾಗೂ ನಿಲ್ದಾಣದ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಬೇರೆ ಬೇರೆ ಮಾರ್ಗಗಳ ಮೂಲಕ ಚಿನ್ನದ ಗಟ್ಟಿ ಸಾಗಿಸುತ್ತಿದ್ದಾರೆ. ಚಿನ್ನವನ್ನು ಕರಗಿಸಿ ಅದನ್ನು ವಿವಿಧ ಲೋಹಗಳೊಂದಿಗೆ ಬೆರೆಸಿ ದುಬೈನಿಂದ ತರುತ್ತಾರೆ. ಗುದದ್ವಾರದಲ್ಲಿ ತೂರಿಸಿಕೊಂಡು, ಸೂಟ್‌ಕೇಸ್‌ ಮತ್ತು ಬಟ್ಟೆಗಳಲ್ಲಿ ಹುದುಗಿಸಿಟ್ಟುಕೊಂಡು ಸಾಗಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೀತಿ ಕಳ್ಳಸಾಗಣೆ ಮಾಡುವವರಲ್ಲಿ ಬಹುಪಾಲು ಮಂದಿ  ಕಾಸರಗೋಡು, ಗೌರಿಬಿದನೂರು ತಾಲ್ಲೂಕಿನ ಅಲಿಪುರ, ಮಹಾರಾಷ್ಟ್ರದ ಉಲ್ಲಾಸನಗರದವರು. ಈ ಕೃತ್ಯದಲ್ಲಿ ಮಹಿಳೆಯರು ಸಹ ಭಾಗಿಯಾಗುತ್ತಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೋಲಿಸಿದರೆ ದೇಶದಲ್ಲಿ ಚಿನ್ನಕ್ಕೆ ಹೆಚ್ಚಿನ ಬೆಲೆ ಇದೆ. ಹಾಗಾಗಿ ಬೇರೆ ಬೇರೆ ದೇಶಗಳಿಂದ ಕಳ್ಳದಾರಿ ಮೂಲಕ ಪ್ರತಿನಿತ್ಯ ಸುಮಾರು 700 ಕೆ.ಜಿ ಚಿನ್ನ ದೇಶಕ್ಕೆ ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನದ ಕಳ್ಳಸಾಗಣೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಜಾಲವೇ ಇದೆ. ಕಳ್ಳಸಾಗಣೆದಾರರು ಪ್ರಯಾಣಿಕರಿಗೆ 25 ಸಾವಿರ ಕಮಿಷನ್‌ ಕೊಟ್ಟು ಮತ್ತು ವಿಮಾನ ಟಿಕೆಟ್‌ ಮಾಡಿಸಿಕೊಟ್ಟು ವಿವಿಧ ವಿಮಾನ ನಿಲ್ದಾಣಗಳ ಮೂಲಕ ಈ ದಂಧೆ ನಡೆಸುತ್ತಿದ್ದಾರೆ. 30 ಲಕ್ಷ   ಮೌಲ್ಯದ ಚಿನ್ನದ ಗಟ್ಟಿಗಳ ಕಳ್ಳಸಾಗಣೆ ಮಾಡಿದರೆ 3 ಲಕ್ಷ ತೆರಿಗೆ ಉಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಐಎಎಲ್‌ನಲ್ಲಿ ಶುಕ್ರವಾರ (ಸೆ.12) ಜಂಟಿ ಕಾರ್ಯಾ­ಚರಣೆ ನಡೆಸಿದ್ದ ನಗರ ಪೊಲೀಸರು ಮತ್ತು ಸೀಮಾ ಸುಂಕ ಅಧಿಕಾರಿಗಳು ದುಬೈ ಮೂಲದ ತಬ್ರೇಜ್‌ವುಲ್ಲಾ ಬೇಗ್‌ ಎಂಬಾತನನ್ನು ಬಂಧಿಸಿ  1.11 ಕೋಟಿ ಮೌಲ್ಯದ 4 ಕೆ.ಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT