ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋರಾದ ಜೈಲು ಯಾತ್ರೆ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪರಪ್ಪನ ಅಗ್ರಹಾರ, ತಿಹಾರ್ ಜೈಲುಗಳಿಗೆ ರಾಜಕಾರಣಿಗಳ ಯಾತ್ರೆ ಜೋರಾಗಿಯೇ ನಡೆಯುತ್ತಿದೆ. ಭ್ರಷ್ಟಾಚಾರದ ವಿರೋಧಿ ಯಾತ್ರೆಯೂ ನಡೆದಿದೆ. ಆದರೆ ಈವರೆಗೆ ಯಾವುದೇ ರಾಜಕಾರಣಿ, ಮಠಾಧೀಶರು ಸೌಹಾರ್ದ ಯಾತ್ರೆ ಮಾಡದಿರುವುದು ವಿಷಾದದ ಸಂಗತಿ~ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನುಡಿದರು.

ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ಮೈಸೂರು ಹುಲಿ ಟಿಪ್ಪು ಸುಲ್ತಾನ್~ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. `ಜನರ ಹಣವನ್ನು ಮಠ ಮಾನ್ಯಗಳಿಗೆ ಕೋಟಿಗಟ್ಟಲೇ ಹಣ ಕೊಟ್ಟವರು ಇಂದು ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ. ಆದರೆ ಜೈಲಿನಲ್ಲಿರುವವರನ್ನು ಮಠಗಳು ರಕ್ಷಿಸಲು ಸಾಧ್ಯವಿಲ್ಲ~ ಎಂದು ವ್ಯಂಗ್ಯವಾಡಿದರು.

`ಸೌಹಾರ್ದ ಯಾತ್ರೆ ಮಾಡಿದರೆ ವೋಟು ಸಿಗುವುದಿಲ್ಲ ಎಂಬುದು ರಾಜಕಾರಣಿಗಳಿಗೆ ಗೊತ್ತಾಗಿದ್ದರಿಂದ ಧರ್ಮಗಳನ್ನು ಒಡೆದು ವೋಟುಗಳಿಸುವ ಯತ್ನ ಮಾಡುತ್ತಿದ್ದಾರೆ. ಜನರ ಮನಸ್ಸುಗಳು, ಸಂಸತ್ತು ಮತ್ತು ವಿಧಾನಸೌಧಗಳು ಮೊದಲು ಶುದ್ಧವಾಗಬೇಕು. ಆ ನಂತರ ಜನರನ್ನು ಒಂದುಗೂಡಿಸುವ ಸೌಹಾರ್ದ ಯಾತ್ರೆ ನಡೆಯಬೇಕಿದೆ~ ಎಂದರು.

`ಜಾತಿ, ಧರ್ಮ, ವರ್ಣಗಳಿಂದ ಜನರನ್ನು ಗುರುತಿಸುವ ಮನೋಧರ್ಮ ಹೆಚ್ಚಾಗುತ್ತಿದೆ. ಇದು ಸಮಾಜಕ್ಕೆ ಅಪಾಯಕಾರಿ. ಏಕ ಧರ್ಮ ಸಂಸ್ಥಾಪನಾ ಮನೋಭಾವ ಹೆಚ್ಚಾಗುತ್ತಿರುವುದರಿಂದ ಕೋಮು ಘರ್ಷಣೆಗೆ ಕಾರಣವಾಗಿದೆ. ಕೆಡುವುದರಲ್ಲಿ ಇರುವ ಸಂಭ್ರಮ ಕಟ್ಟುವುದರಲ್ಲಿ ಇಲ್ಲವಾಗಿದೆ~ ಎಂದು ವಿಷಾದಿಸಿದರು.

`ಎಲ್ಲ ಧರ್ಮದ ಮೂಲಭೂತವಾದಿಗಳು ವರ್ತಮಾನವನ್ನು ಕಲ್ಮಷಗೊಳಿಸಿ ಭವಿಷ್ಯವನ್ನು ಕತ್ತಲು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆಯಿಟ್ಟು ನಾಡನ್ನು ರಕ್ಷಿಸಿದ್ದ ಟಿಪ್ಪು ಸುಲ್ತಾನ್, ಪತ್ನಿಯ ಆಭರಣಗಳನ್ನೇ ಅಡವಿಟ್ಟು ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಮಾದರಿಯಾಗಿಟ್ಟುಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಟಿಪ್ಪು ಸುಲ್ತಾನ್ ಪ್ರಶಸ್ತಿಯನ್ನು ಸರ್ಕಾರವೇ ಸ್ಥಾಪಿಸಬೇಕು ಮತ್ತು ಟಿಪ್ಪು ಸ್ಮರಣಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಈ ಕಾರ್ಯವನ್ನು ಮಾಡುತ್ತಿಲ್ಲ~ ಎಂದು ನೊಂದು ನುಡಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, `ಬರಗೂರರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಕನ್ನಡ ತಂತ್ರಾಂಶದ ಅಭಿವೃದ್ಧಿಗಾಗಿ ಕೆಲಸ ಮಾಡಿದರು. ಜೊತೆಗೆ ಅರ್ಥಪೂರ್ಣ ಸಿನಿಮಾಗಳನ್ನು ಜನರಿಗೆ ನೀಡಿ ಜಗತ್ತಿನ ಗಮನ ಸೆಳೆದಿದ್ದಾರೆ~ ಎಂದು ಶ್ಲಾಘಿಸಿದರು.

`ಮುಸ್ಲಿಂ ಎಂದಿಗೂ ಅನ್ಯಧರ್ಮ ಎನಿಸಿಲ್ಲ. ಎರಡೂ ಧರ್ಮೀಯರಲ್ಲಿ ಸೌಹಾರ್ದತೆ ಮೂಡಿಸಬೇಕಾದ ಅಗತ್ಯವಿದೆ~ ಎಂದ ಅವರು, `ಇಂಗ್ಲಿಷ್ ಮೇಲಿನ ವ್ಯಾಮೋಹದಿಂದಾಗಿ ನಾವು ಕ್ರಮೇಣ ಇಂಗ್ಲೆಂಡ್‌ನ ದಾಸರಾಗುತ್ತಿದ್ದೇವೆ. ನಮ್ಮ ಸಂಬಂಧಗಳನ್ನೇ ಅನುವಾದ ಮಾಡಿಕೊಂಡು ಮಾತನಾಡುವಷ್ಟರ ಮಟ್ಟಿಗೆ ಆ ಭಾಷೆಯನ್ನು ಪ್ರೀತಿಸುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ~ ಎಂದು ಹೇಳಿದರು. ಟಿಪ್ಪು ಸುಲ್ತಾನ್ ಪ್ರಶಸ್ತಿಯು ಸ್ಮರಣಿಕೆ ಮತ್ತು 10 ಸಾವಿರ ರೂಪಾಯಿ ನಗದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT