ಬೆಂಗಳೂರು: ಆಟೊ ಎಲ್ಪಿಜಿ ಗ್ಯಾಸ್ ದರವನ್ನು ಇಳಿಕೆ ಮಾಡಬೇಕೆಂದು ಒತ್ತಾಯಿಸಿ ಭಾನುವಾರ ಮಧ್ಯರಾತ್ರಿಯಿಂದ (ಜ.6) ಸೋಮವಾರ ಮಧ್ಯರಾತ್ರಿವರೆಗೆ 24 ಗಂಟೆ ಮುಷ್ಕರಕ್ಕೆ ಆಟೊರಿಕ್ಷಾ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯು ಕರೆ ನೀಡಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಮಂಜುನಾಥ್ ಅವರು, ‘ಆಟೊ ಎಲ್ಪಿಜಿ ದರವು ಪ್ರತಿ ಲೀ. ಗೆ ರೂ. 54.58 ಇದ್ದಾಗ ಆಟೊ ಮೀಟರ್ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಕನಿಷ್ಠ ದರ ರೂ. 25 ಮತ್ತು ಪ್ರತಿ ಕಿ.ಮೀ.ಗೆ ರೂ. 13 ನಿಗದಿಯಾಗಿತ್ತು. ಆದರೆ, ಸರ್ಕಾರವು ಈಗ ಏಕಾಏಕಿ ಆಟೊ ಎಲ್ಪಿಜಿ ದರವನ್ನು ಪ್ರತಿ ಲೀ. ಗೆ ರೂ. 11.14 ರಂತೆ ಏರಿಕೆ ಮಾಡಿರುವುದು ಸರಿಯಲ್ಲ’ ಎಂದರು.
‘ಚಾಲಕರ ಬದುಕು ಇಂದಿನ ಬೆಲೆ ಏರಿಕೆಯಲ್ಲಿ ಕಷ್ಟವಾಗಿರುವಾಗ ಪ್ರತಿ ಲೀ.ಗೆ ರೂ. 11.14 ಏರಿಸಿ ಸರ್ಕಾರ ಅನ್ಯಾಯ ಮಾಡುತ್ತಿದೆ’ ಎಂದರು.
‘ಏರಿಸಿರುವ ಆಟೊ ಎಲ್ಪಿಜಿ ದರವನ್ನು ಸರ್ಕಾರ ಈ ಕೂಡಲೇ ಇಳಿಕೆ ಮಾಡಿ, ಗ್ಯಾಸ್ ದರವನ್ನು ನಿಯಂತ್ರಿಸಬೇಕು. ಜ.6 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಸಭೆ ಸೇರಿ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಎಲ್ಪಿಜಿ ದರವನ್ನು ಕಡಿಮೆಗೊಳಿಸದಿದ್ದಲ್ಲಿ ಅನಿರ್ದಿಷ್ಟಾವಧಿಯವರೆಗೆ ಮುಷ್ಕರ ಹೂಡಲಾಗುವುದು’ ಎಂದು ಎಚ್ಚರಿಸಿದರು.
ಸಂಚಾರ ಪೊಲೀಸರು ಆಟೊ ಚಾಲಕರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ರದ್ದುಪಡಿಸಬೇಕು. ಎಲ್ಲಾ ಆಟೊ ಚಾಲಕರಿಗೆ ಬಿಡಿಎ, ಹೌಸಿಂಗ್ ಬೋರ್ಡ್ನಿಂದ ವಾಸದ ಮನೆಗಳನ್ನು ನೀಡಲು ಯೋಜನೆ ರೂಪಿಸಬೇಕು ಇನ್ನು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದರು.